ನವದೆಹಲಿ: ಬಿಜೆಪಿ ರಾಜ್ಯಸಭಾ ಸಂಸದ (Rajya Sabha MP) ರಾಮರಾವ್ ವಡ್ಕುಟೆ (Ramrao Wadkute) ಹೃದಯಾಘಾತದಿಂದ ನಿಧನರಾಗಿದ್ದಾರೆ. ತಡರಾತ್ರಿ ಎದೆನೋವು ಕಾಣಿಸಿಕೊಂಡ ಅವರನ್ನ ಚಿಕಿತ್ಸೆಗಾಗಿ ದೆಹಲಿಯ ಏಮ್ಸ್ಗೆ ದಾಖಲಿಸಲಾಗಿತ್ತು. ದುರದೃಷ್ಟವಶಾತ್ ಚಿಕಿತ್ಸೆ ಪಡೆಯುತ್ತಿದ್ದಾಗಲೇ ಕೊನೆಯುಸಿರೆಳೆದಿದ್ದಾರೆ.
ಸುಮಾರು 8 ತಿಂಗಳ ಹಿಂದೆಯಷ್ಟೇ ವಡ್ಕುಟೆ ಅವರನ್ನ ಭಾರತೀಯ ಜನತಾ ಪಕ್ಷವು (BJP) ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು. ಅಷ್ಟೇ ಅಲ್ಲ, ವಡ್ಕುಟೆ ಅನುಭವಿ, ಕಳಂಕವಿಲ್ಲದ ಹಾಗೂ ವಾಕ್ಚಾತುರ್ಯ ರಾಜಕಾರಣಿ ಎಂಬ ಖ್ಯಾತಿ ಹೊಂದಿದ್ದರು.
ರಾಮರಾವ್ ವಡ್ಕುಟೆ ಅವರ ರಾಜಕೀಯ ಜೀವನ ಹೇಗಿತ್ತು?
ವಡ್ಕುಟೆ ಈ ಹಿಂದೆ ಶೆಲಿ-ಮೆಂಧಿ ಮಹಾಸಂಘ (ಮೇಕೆ ಮತ್ತು ಕುರಿ ಸಾಕಣೆದಾರರ ಒಕ್ಕೂಟ)ದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅದಾದ ಬಳಿಕ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷ (NCP) ಯೊಂದಿಗೆ ಸಂಬಂಧ ಹೊಂದಿದ್ದರು, ಬಂತರ ಮಹಾರಾಷ್ಟ್ರ ವಿಧಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು.
2019ರ ಅಕ್ಟೋಬರ್ನಲ್ಲಿ ಎನ್ಸಿಪಿ ತೊರೆದು ಬಿಜೆಪಿ ಸೇರ್ಪಡೆಯಾದರು. 2021 ರಲ್ಲಿ ಬಿಜೆಪಿ ಅವರನ್ನ ಹಿಂಗೋಲಿ ಜಿಲ್ಲಾ ಅಧ್ಯಕ್ಷರನ್ನಾಗಿ ನೇಮಿಸಿತು. ನಂತರ ಹಿಂಗೋಲಿ ಲೋಕಸಭಾ ಕ್ಷೇತ್ರದ ಪಕ್ಷದ ಚುನಾವಣಾ ಮುಖ್ಯಸ್ಥರಾಗಿ ಮತ್ತು ಉಸ್ತುವಾರಿಯಾಗಿಯೂ ಸೇವೆ ಸಲ್ಲಿಸಿದ್ದರು. ಇದರ ಜೊತೆಜೊತೆಗೆ ಮಹಾರಾಷ್ಟ್ರದಲ್ಲಿ ʻಧಾಂಗರ್ʼ ಸಮುದಾಯದ ಪ್ರಮುಖ ನಾಯಕರಾಗಿಯೂ ಗುರುತಿಸಿಕೊಂಡಿದ್ದರು, ಕಳಂಕ ರಹಿತ ರಾಜಕಾರಣಿ ಎಂದೇ ಹೆಸರುವಾಸಿಯಾಗಿದ್ದರು. ಈ ಸಾಧನೆಯಿಂದ ಗಮನ ಸೆಳೆದಿದ್ದ ವಡ್ಕುಟೆ ಅವರನ್ನ ಸುಮಾರು 8 ತಿಂಗಳ ಹಿಂದೆ ಬಿಜೆಪಿ ರಾಜ್ಯಸಭೆಗೆ ನಾಮನಿರ್ದೇಶನ ಮಾಡಿತ್ತು.

