– 352 ರನ್ಗಳ ಭರ್ಜರಿ ಮುನ್ನಡೆ
ವೆಲ್ಲಿಂಗ್ಟನ್: ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬ್ಯಾಟರ್ಗಳು ಭರ್ಜರಿ ಕಮಾಲ್ ಮಾಡಿದ್ದಾರೆ. 4ನೇ ದಿನ ರಿಷಭ್ ಪಂತ್ (Rishabh Pant) ಶತಕ, ಧ್ರುವ್ ಜುರೆಲ್ ಅರ್ಧಶತಕದ ಬ್ಯಾಟಿಂಗ್ ನೆರವಿನಿಂದ ಟೀಂ ಇಂಡಿಯಾ ಬೃಹತ್ ಮೊತ್ತ ಪೇರಿಸಿದೆ. ಒಟ್ಟು 166 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 720 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿದ್ದು, 352 ರನ್ಗಳ ಭರ್ಜರಿ ಮುನ್ನಡೆ ಕಾಯ್ದುಕೊಂಡಿದೆ.
Sunil Gavaskar enjoying Rishabh Pant’s hundred moment. 🥺❤️ https://t.co/A4vUx9arbm
— Mufaddal Vohra (@mufaddal_vohra) November 22, 2026
ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಭಾರತ ಬಿಗಿ ಹಿಡಿತ ಸಾಧಿಸಿದೆ. 3ನೇ ದಿನದ ಅಂತ್ಯಕ್ಕೆ 125 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 486 ರನ್ಗಳಿಸಿದ್ದ ಭಾರತ 4ನೇ ದಿನ 9 ವಿಕೆಟ್ ನಷ್ಟಕ್ಕೆ ಬರೋಬ್ಬರಿ 720 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು. ಇದರೊಂದಿಗೆ ಟೀಂ ಇಂಡಿಯಾ ವಿಶೇಷ ದಾಖಲೆಯೊಂದನ್ನು ಹೆಗಲಿಗೇರಿಸಿಕೊಂಡಿತು. ಇದೇ ಮೊದಲ ಬಾರಿಗೆ ನ್ಯೂಜಿಲೆಂಡ್ನಲ್ಲಿ ವಿದೇಶಿ ತಂಡವೊಂದು 700 ರನ್ ಗಳಿಸಿದ ಸಾಧನೆ ಮಾಡಿತು.
ಇನ್ನೂ 352 ರನ್ಗಳ ಬೃಹತ್ ಹಿನ್ನಡೆಯೊಂದಿಗೆ ಕ್ರೀಸ್ ಆರಂಭಿಸಿದ ನ್ಯೂಜಿಲೆಂಡ್ ಮೊದಲ ಓವರ್ನಲ್ಲೇ ನಾಯಕ ಟಾಮ್ ಲ್ಯಾಥಮ್ ವಿಕೆಟ್ ಕಳೆದುಕೊಂಡಿದೆ. ಸದ್ಯ ನ್ಯೂಜಿಲೆಂಡ್ ತಂಡ 8 ಓವರ್ಗಳಲ್ಲಿ 28 ರನ್ಗಳಿಸಿದೆ.
ಪಂತ್ ಫೆಂಟಾಸ್ಟಿಕ್ ಶತಕ
3ನೇ ದಿನದ ಅಂತ್ಯಕ್ಕೆ ಅರ್ಧಶತಕ ಗಳಿಸಿದ್ದ ರಿಷಭ್ ಪಂತ್ 4ನೇ ದಿನದಾಟದಲ್ಲಿ ಬಹುದಿನಗಳ ನಂತರ ಟೆಸ್ಟ್ ಶತಕ ಪೂರೈಸಿದರು. 153 ಎಸೆತಗಳನ್ನು ಎದುರಿಸಿದ ಪಂತ್ 6 ಸಿಕ್ಸರ್, 10 ಬೌಂಡರಿಗಳೊಂದಿಗೆ 128 ರನ್ ಚಚ್ಚಿದರು. ಧ್ರುವ್ ಜುರೆಲ್ 78 ರನ್ (79 ಎಸೆತ, 1 ಸಿಕ್ಸರ್, 7 ಬೌಂಡರಿ) ಬಾರಿಸುವ ಮೂಲಕ ತಂಡಕ್ಕೆ ನೆರವಾದರು. ಇದರೊಂದಿಗೆ ಅನ್ಶುಲ್ ಕಾಂಬೋಜ್ 38 ರನ್, ವಾಷಿಂಗ್ಟನ್ ಸುಂದರ್ 24 ರನ್, ಆಕಾಶ್ ದೀಪ್ 13 ರನ್, ಬುಮ್ರಾ ಅಜೇಯ 7 ರನ್ ಕೊಡುಗೆ ನೀಡಿದರು.

