– ಗರಿಷ್ಠ 6 ತಿಂಗಳ ಜೈಲು ಶಿಕ್ಷೆ
– ದಕ್ಷಿಣ ರೈಲ್ವೇ ಬಳಿಕ ಈಗ ಪೂರ್ವ ರೈಲ್ವೆಯಿಂದಲೂ ಪ್ರಯಾಣಿಕರಿಗೆ ಸೂಚನೆ
ಕೋಲ್ಕತ್ತಾ: ದಕ್ಷಿಣ ರೈಲ್ವೇ ಬಳಿಕ ಈಗ ಪೂರ್ವ ರೈಲ್ವೆಯು ಪ್ರಯಾಣಿಕರಿಗೆ ಶಾಕಿಂಗ್ ಸುದ್ದಿ ಕೊಟ್ಟಿದೆ. ರೈಲಿನಲ್ಲಿ ಫೋನ್ನಲ್ಲಿ ಜೋರಾಗಿ ಮಾತನಾಡಿದರೆ, ಮ್ಯೂಸಿಕ್ ಹಾಕಿದರೆ 1 ಸಾವಿರ ರೂ. ದಂಡ ಅಥವಾ 6 ತಿಂಗಳ ಜೈಲು ಶಿಕ್ಷೆ ವಿಧಿಸುವುದಾಗಿ ತಿಳಿಸಿದೆ.
ಕೋಲ್ಕತ್ತಾದಲ್ಲಿ ಪ್ರಧಾನ ಕಚೇರಿಯನ್ನು ಹೊಂದಿರುವ ಪೂರ್ವ ರೈಲ್ವೆ (ER) ತನ್ನ ನಾಲ್ಕು ವಿಭಾಗಗಳಿಗೆ ಮೊಬೈಲ್ ಫೋನ್ಗಳ ಜವಾಬ್ದಾರಿಯುತ ಬಳಕೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ನಿಲ್ದಾಣಗಳಲ್ಲಿ, ರೈಲುಗಳ ಒಳಗೆ ಶಬ್ದ ಸಂಬಂಧಿತ ಅಡಚಣೆಗಳನ್ನು ತಡೆಗಟ್ಟಲು ಸೂಚನೆಗಳನ್ನು ನೀಡಿದೆ.
ಇಂತಹ ಚಟುವಟಿಕೆಗಳು ತೊಂದರೆದಾಯಕವಾಗಿದ್ದರೆ, 1989ರ ರೈಲ್ವೆ ಕಾಯ್ದೆಯ ಸೆಕ್ಷನ್ 145 ರ ಅಡಿಯಲ್ಲಿ ದಂಡ ವಿಧಿಸಬಹುದು ಎಂದು ತುರ್ತು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.
ನಿಯಮ ಉಲ್ಲಂಘಿಸಿದರೆ 1,000 ರೂ. ವರೆಗೆ ದಂಡ ಅಥವಾ ಆರು ತಿಂಗಳವರೆಗೆ ಜೈಲು ಶಿಕ್ಷೆಯನ್ನು ವಿಧಿಸುತ್ತದೆ. ಟಿಕೆಟ್ ಪರೀಕ್ಷಕರು ಕಾಯ್ದೆಯಡಿಯಲ್ಲಿ ಅಂತಹ ಉಲ್ಲಂಘನೆಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬಹುದು ಎಂದು ನಿಬಂಧನೆಯಲ್ಲಿ ಉಲ್ಲೇಖಿಸಲಾಗಿದೆ.
ಪ್ರಯಾಣಿಕರು ಮೊಬೈಲ್ ಫೋನ್ಗಳಲ್ಲಿ ಮ್ಯೂಸಿಕ್ ಅಥವಾ ವೀಡಿಯೊಗಳನ್ನು ಸ್ಪೀಕರ್ ಮೋಡ್ನಲ್ಲಿ ಪ್ಲೇ ಮಾಡದಂತೆ, ಜೋರಾಗಿ ಅಥವಾ ದೀರ್ಘಾವಧಿಯ ದೂರವಾಣಿ ಸಂಭಾಷಣೆಗಳಲ್ಲಿ ತೊಡಗಿಸಿಕೊಳ್ಳದಂತೆ ಮತ್ತು ಜೋರಾಗಿ ರಿಂಗ್ಟೋನ್ ಇಟ್ಟುಕೊಳ್ಳದಂತೆ ಅಧಿಕಾರಿಗಳು ತಿಳಿಸಿದ್ದಾರೆ.
ಇಂತಹ ಚಟುವಟಿಕೆಗಳು ಸಾಮಾನ್ಯವಾಗಿ ಸಹ ಪ್ರಯಾಣಿಕರಿಗೆ ಅನಾನುಕೂಲತೆಯನ್ನುಂಟು ಮಾಡುತ್ತವೆ. ರೈಲ್ವೆ ವಿಭಾಗಗಳ ಒಳಗೆ, ವಿಶೇಷವಾಗಿ ಹವಾನಿಯಂತ್ರಿತ ಬೋಗಿಗಳಲ್ಲಿ ಶಾಂತಿಯುತ ವಾತಾವರಣವನ್ನು ಕದಡುತ್ತವೆ ಎಂದು ಹೇಳಿದ್ದಾರೆ.
