– ನೇಮಕಾತಿ ಪೋರ್ಟಲನ್ನೇ ಹ್ಯಾಕ್ ಮಾಡಿ ಡೇಟಾ ಕದ್ದನಾ ಬಾಲಕ?
ನವದೆಹಲಿ: ಅಗ್ನಿವೀರ್ಗೆ (Agniveer) ಸಂಬಂಧಿಸಿದ ಮಾಹಿತಿಯನ್ನ ಡಾರ್ಕ್ ವೆಬ್ನಲ್ಲಿ (Dark Web) ಮಾರಾಟ ಮಾಡಲು ಯತ್ನಿಸಿದ ಆರೋಪದ ಮೇರೆಗೆ 14 ವರ್ಷದ ಬಾಲಕನನ್ನ ಸುಮಾರು 2 ತಿಂಗಳ ಹಿಂದೆ ದೆಹಲಿಯಲ್ಲಿ ತನಿಖಾ ಸಂಸ್ಥೆಗಳು ವಿಚಾರಣೆ ನಡೆಸಿವೆ ಎಂದು ವರದಿಯಾಗಿದೆ.
ಅಧಿಕಾರಿಗಳ ಮಾಹಿತಿ ಪ್ರಕಾರ, ಬಾಲಕ ಕೆಲವು ಫೈಲ್ಗಳನ್ನು ಡಾರ್ಕ್ ವೆಬ್ನಲ್ಲಿ ಅಪ್ಲೋಡ್ ಮಾಡಿ, ಆ ಮಾಹಿತಿಯನ್ನು ಹಣ ನೀಡಿ ಖರೀದಿಸಲು ಸಿದ್ಧರಿರುವವರನ್ನ ಹುಡುಕುತ್ತಿದ್ದ. ಆದ್ರೆ ಯಾವುದೇ ವ್ಯವಹಾರ ಫೈನಲ್ ಆಗೋದಕ್ಕೂ ಮುನ್ನವೇ ತನಿಖಾ ಸಂಸ್ಥೆಗಳು ಬಾಲಕನನ್ನ ಪತ್ತೆ ಹಚ್ಚಿವೆ.
ವಶಪಡಿಸಿಕೊಳ್ಳಲಾದ ಡೇಟಾವು ಅಗ್ನಿವೀರ್ಗಳಿಗೆ ಅಥವಾ ಅಗ್ನಿವೀರ್ ನೇಮಕಾತಿ ಪ್ರಕ್ರಿಯೆಗೆ ಸಂಬಂಧಿಸಿರಬಹುದು ಎಂದು ತನಿಖಾ ಸಂಸ್ಥೆಗಳು ಶಂಕಿಸಿವೆ. ಆದರೆ, ಆ ಫೈಲ್ಗಳಲ್ಲಿ ನಿಖರವಾಗಿ ಯಾವ ರೀತಿಯ ಮಾಹಿತಿ ಇದೆ ಎಂಬುದು ಇನ್ನೂ ತನಿಖೆಯ ಹಂತದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅಲ್ಲದೇ, ಅಗ್ನಿವೀರ್ ನೇಮಕಾತಿ ಪೋರ್ಟಲ್ನ್ನು ಹ್ಯಾಕ್ ಮಾಡಿ ಬಾಲಕ ಈ ಡೇಟಾವನ್ನ ಕದ್ದಿದ್ದಾನೆಯೇ? ಅನ್ನೋದ್ರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ವಿಚಾರಣೆ ವೇಳೆ, ತ್ವರಿತವಾಗಿ ಹಣ ಸಂಪಾದಿಸುವ ಉದ್ದೇಶದಿಂದಲೇ ಬಾಲಕ ಈ ಕೃತ್ಯಕ್ಕೆ ಮುಂದಾಗಿದ್ದಾನೆ ಎಂಬ ಶಂಕೆಯನ್ನ ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ಮುಂದುವರಿದಿದೆ.

