– ಚುನಾವಣೆಗಳು ಕೇವಲ ಹಣದಿಂದ ನಡೆಯಲ್ಲ ಅನ್ನೋದು ಸಾಬೀತಾಗಿದೆ
ವಾಷಿಂಗ್ಟನ್: ಒಂದು ಕಾಲದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Trump) ಅವರ ಅತ್ಯಾಪ್ತನಾಗಿ ಗುರುತಿಸಿಕೊಂಡಿದ್ದ, 2024ರ ಚುನಾವಣೆಯಲ್ಲಿ ಟ್ರಂಪ್ ಗೆಲುವಿಗಾಗಿ ಹಣದ ಹೊಳೆಯನ್ನೇ ಹರಿಸಿದ್ದ ವಿಶ್ವದ ಶ್ರೀಮಂತ ಉದ್ಯಮಿ ಎಲೋನ್ ಮಸ್ಕ್ (ಈಗ ಯೂ-ಟರ್ನ್ ಹೊಡೆದಿದ್ದಾರೆ.
ತಾವು ಟ್ರಂಪ್ ಅವರ ʻಮೇಕ್ ಅಮೆರಿಕ ಗ್ರೇಟ್ ಅಗೈನ್ʼ (MAGA) ಆಂದೋಲನದ ಭಾಗವಲ್ಲ ಎಂದು ಮಸ್ಕ್ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಇತ್ತೀಚೆಗೆ ನಡೆದ ಡೀಲ್ಬುಕ್ ಶೃಂಗಸಭೆಯಲ್ಲಿ ನ್ಯೂಯಾರ್ಕ್ನ ಸಂದರ್ಶನವೊಂದರಲ್ಲಿ ಚೀನಾದಿಂದ ವಿಡಿಯೋ ಕರೆ ಮೂಲಕ ಭಾಗವಹಿಸಿದ್ದ ಮಸ್ಕ್, ಈ ಸ್ಫೋಟಕ ವಿಚಾರವನ್ನ ಹಂಚಿಕೊಂಡಿದ್ದಾರೆ. “ನಾನು MAGA ದ ಭಾಗವಲ್ಲ. ರಿಪಬ್ಲಿಕನ್ ಪಕ್ಷದ ನೀತಿಗಳನ್ನು ಕುರುಡಾಗಿ ಬೆಂಬಲಿಸುವುದನ್ನು MAGA ಎನ್ನುವುದಾದರೆ, ನಾನು ಖಂಡಿತವಾಗಿಯೂ ಆ ಗುಂಪಿಗೆ ಸೇರಿದವನಲ್ಲ” ಎಂದು ಮಸ್ಕ್ ನೇರವಾಗಿ ಹೇಳಿದ್ದಾರೆ.
ಮಸ್ಕ್ ಅವರ ಈ ಮಾತು ಈಗ ಭಾರೀ ಚರ್ಚೆಗೆ ಗ್ರಾಸವಾಗಿದೆ. ಏಕೆಂದರೆ, 2024ರ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ನ್ಯೂಯಾರ್ಕ್ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ನಲ್ಲಿ ನಡೆದ ರ್ಯಾಲಿಯಲ್ಲಿ ಇದೇ ಮಸ್ಕ್, “ನಾನು ಕೇವಲ MAGA ಅನುಯಾಯಿ ಅಷ್ಟೇ ಅಲ್ಲ, ನಾನು ಕಡು ಗೋಥಿಕ್ MAGA ಅನುಯಾಯಿ” ಎಂದು ಘೋಷಿಸಿ ಟ್ರಂಪ್ ಪರ ಭರ್ಜರಿ ಬ್ಯಾಟಿಂಗ್ ಮಾಡಿದ್ದರು. ಆದರೆ, ಈಗ ತಮ್ಮ ನಿಲುವನ್ನು ಬದಲಿಸಿಕೊಂಡಿದ್ದಾರೆ. ಇದನ್ನೂ ಓದಿ: ಖಾಸಗಿ ಬೈಕ್ಗಳನ್ನೂ ‘ಬೈಕ್ ಟ್ಯಾಕ್ಸಿ’ಯಾಗಿ ಬಳಸಲು ಅವಕಾಶ ನೀಡಿ: ರಾಜ್ಯಗಳಿಗೆ ಗಡ್ಕರಿ ಮನವಿ
ಚುನಾವಣೆಗೆ ಹಣ ಸುರಿದಿದ್ದು ಮೂರ್ಖತನ
ಸಂದರ್ಶನದಲ್ಲಿ ಚುನಾವಣಾ ಖರ್ಚಿನ ಬಗ್ಗೆಯೂ ಮಸ್ಕ್ ಅಚ್ಚರಿಯ ವಿಷಯ ವ್ಯಕ್ತಪಡಿಸಿದ್ದಾರೆ. ಇತ್ತೀಚಿನ 2026ರ ಅಮೆರಿಕ ಮಧ್ಯಂತರ ಚುನಾವಣೆಯಲ್ಲಿ ರಿಪಬ್ಲಿಕನ್ ಅಭ್ಯರ್ಥಿಗಳನ್ನು ಗೆಲ್ಲಿಸಲು ಸುಮಾರು 500 ಮಿಲಿಯನ್ ಡಾಲರ್ (ಸುಮಾರು 4,200 ಕೋಟಿ ರೂ.) ಖರ್ಚು ಮಾಡಿದ್ದರೂ, ಅವರಲ್ಲಿ ಅನೇಕರು ಸೋತಿದ್ದಾರೆ. ಇದನ್ನು ನೆನೆದು, “ಅಷ್ಟೊಂದು ಹಣ ಖರ್ಚು ಮಾಡಿದ್ದು ತುಂಬಾ ಮೂರ್ಖತನ ಎಂದು ನನಗನ್ನಿಸುತ್ತಿದೆ. ಅಮೆರಿಕದ ಚುನಾವಣೆಗಳು ಕೇವಲ ಹಣದಿಂದ ನಡೆಯುವುದಿಲ್ಲ ಎಂಬುದು ಈಗ ಸಾಬೀತಾಗಿದೆ. ಸಮಯವನ್ನು ಹಿಂದಕ್ಕೆ ತಿರುಗಿಸಲು ಸಾಧ್ಯವಾಗಿದ್ದರೆ, ನಾನು ಖಂಡಿತವಾಗಿಯೂ ಇಷ್ಟೊಂದು ಹಣ ಖರ್ಚು ಮಾಡುತ್ತಿರಲಿಲ್ಲ” ಎಂದು ಮಸ್ಕ್ ಹೇಳಿಕೊಂಡಿದ್ದಾರೆ.
2024ರ ಚುನಾವಣೆಯಲ್ಲಿ ಟ್ರಂಪ್ ಗೆಲುವಿಗಾಗಿ ಮಸ್ಕ್ ಕನಿಷ್ಠ 250 ಮಿಲಿಯನ್ ಡಾಲರ್ ಖರ್ಚು ಮಾಡಿದ್ದರು. ಬಳಿಕ 2025ರಲ್ಲಿ ಟ್ರಂಪ್ ಆಡಳಿತದಲ್ಲಿ ಸರ್ಕಾರಿ ದಕ್ಷತೆ ಇಲಾಖೆಯ (DOGE) ಮುಖ್ಯಸ್ಥರಾಗಿ 180 ದಿನಗಳ ಕಾಲ ಕೆಲಸ ಮಾಡಿದ್ದರು. ಆದರೆ, ಟ್ರಂಪ್ ಅವರೊಂದಿಗಿನ ಸಾರ್ವಜನಿಕ ಭಿನ್ನಾಭಿಪ್ರಾಯದ ನಂತರ ಆ ಹುದ್ದೆಯಿಂದ ಹೊರಬಂದಿದ್ದರು. ಕಳೆದ ವರ್ಷ ಜೂನ್ನಲ್ಲಿ ಜೆಫ್ರಿ ಎಪ್ಸ್ಟೀನ್ ಫೈಲ್ಗಳಲ್ಲಿ ಟ್ರಂಪ್ ಹೆಸರಿದೆ ಎಂದು ಮಸ್ಕ್ ಎಕ್ಸ್ (X) ಖಾತೆಯಲ್ಲಿ ಪೋಸ್ಟ್ ಮಾಡಿದ್ದು ಇಬ್ಬರ ನಡುವೆ ದೊಡ್ಡ ಬಿರುಕು ಮೂಡಿಸಿತ್ತು. ಆನಂತರ ಇಬ್ಬರೂ ರಾಜಿ ಮಾಡಿಕೊಂಡಿದ್ದರೂ, ಈಗ ಮಸ್ಕ್ ನೀಡಿರುವ ಈ ಹೇಳಿಕೆ ರಾಜಕೀಯ ವಲಯದಲ್ಲಿ ಹೊಸ ಸಂಚಲನ ಮೂಡಿಸಿದೆ.ಇದನ್ನೂ ಓದಿ: 12–13 ವರ್ಷಗಳಲ್ಲಿ 50 ಕೋಟಿ ಜನರು ಬಡತನದಿಂದ ಹೊರಬಂದಿದ್ದಾರೆ: ಮೋದಿ
