– 1 ಜಿಬಿ ಇಂಟರ್ನೆಟ್ ಡೇಟಾ ದರ 308 ರೂ. ನಿಂದ 7.51 ರೂ.ಗೆ ಇಳಿಕೆ
– 182 ರಿಂದ ಶೂನ್ಯಕ್ಕೆ ಇಳಿದ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ
ನವದೆಹಲಿ: ಬಹುನಿರೀಕ್ಷಿತ ವಿಡಿಯೋ ಗೇಮ್ ಗ್ರ್ಯಾಂಡ್ ಥೆಫ್ಟ್ ಆಟೋ 6 (GTA VI) ಬಿಡುಗಡೆಯ ಸಂಭ್ರಮದ ನಡುವೆಯೇ ಪ್ರಧಾನಿ ನರೇಂದ್ರ ಮೋದಿ(PM Narendra Modi) ಅವರು ಗುರುವಾರ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಶೇಷ ಪೋಸ್ಟ್ವೊಂದು ನೆಟ್ಟಿಗರ ಗಮನ ಸೆಳೆದಿದೆ.
GTA 5 ಬಿಡುಗಡೆಯಾದ 2013ನೇ ಇಸವಿ ಹಾಗೂ GTA 6 ಬಿಡುಗಡೆಯಾಗಿರುವ 2026ನೇ ಇಸವಿಯ ನಡುವಿನ 13 ವರ್ಷಗಳಲ್ಲಿ ಭಾರತ ಕಂಡಿರುವ ಪ್ರಗತಿಯನ್ನು ಹೋಲಿಸುವ ಗ್ರಾಫಿಕ್ಸ್ಗಳನ್ನು ಪ್ರಧಾನಿ ಮೋದಿ ಹಂಚಿಕೊಂಡಿದ್ದಾರೆ. ಭಾರತ ಈಗ ಸಂಪೂರ್ಣ ಹೊಸ ಆಟವನ್ನೇ ಆಡುತ್ತಿದೆ!(India is playing a whole new game!) ಎಂಬ ಶೀರ್ಷಿಕೆಯೊಂದಿಗೆ ಅವರು ಈ ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ.
‘ಅಂದು ಮತ್ತು ಇಂದು’ ಮಾದರಿಯಲ್ಲಿ ಸಿದ್ಧಪಡಿಸಲಾದ ಈ ಗ್ರಾಫಿಕ್ಸ್ಗಳಲ್ಲಿ 2013ನ್ನು GTA 5 ಎಂದು ಹಾಗೂ 2026ನ್ನು GTA 6 ಎಂದು ಬಿಂಬಿಸಲಾಗಿದೆ. ಆರ್ಥಿಕತೆ, ಬಡತನ ನಿರ್ಮೂಲನೆ, ನೈರ್ಮಲ್ಯ, ನವೀಕರಿಸಬಹುದಾದ ಇಂಧನ, ಡಿಜಿಟಲ್ ಸಂಪರ್ಕ, ರೈಲ್ವೆ ಹಾಗೂ ರಕ್ಷಣಾ ವಲಯಗಳಲ್ಲಿ ಆಗಿರುವ ಬದಲಾವಣೆಗಳನ್ನು ಪ್ರಧಾನಿ ಮೋದಿ ಅವರ ಪೋಸ್ಟ್ನಲ್ಲಿ ಉಲ್ಲೇಖಿಸಲಾಗಿದೆ:
ಪೋಸ್ಟ್ನಲ್ಲಿ ಏನಿದೆ?
ಆರ್ಥಿಕ ಬೆಳವಣಿಗೆ: 2013ರಲ್ಲಿ ದುರ್ಬಲ ಐದು (Fragile Five) ಆರ್ಥಿಕತೆಗಳ ಪಟ್ಟಿಯಲ್ಲಿದ್ದ ಭಾರತ, 2026ರಲ್ಲಿ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆ.
ತೀವ್ರ ಬಡತನ ಇಳಿಕೆ: ದೇಶದಲ್ಲಿ ತೀವ್ರ ಬಡತನದ ಪ್ರಮಾಣ ಶೇ. 27ರಿಂದ ಶೇ. 2.6ಕ್ಕೆ ಇಳಿಕೆಯಾಗಿದೆ.
ನೈರ್ಮಲ್ಯ ವ್ಯಾಪ್ತಿ:ನೈರ್ಮಲ್ಯ ಸೌಲಭ್ಯದ ವ್ಯಾಪ್ತಿ ಶೇ. 39ರಿಂದ ಶೇ. 100ಕ್ಕೆ ಏರಿಕೆಯಾಗಿದೆ.
ಸೌರಶಕ್ತಿ ಸಾಮರ್ಥ್ಯ: ಭಾರತದ ಸ್ಥಾಪಿತ ಸೌರಶಕ್ತಿ ಸಾಮರ್ಥ್ಯವು 2.82 ಗಿಗಾವ್ಯಾಟ್ನಿಂದ (GW) 175 ಗಿಗಾವ್ಯಾಟ್ಗೆ ವಿಸ್ತರಣೆಯಾಗಿದೆ.
India is playing a whole new game! https://t.co/CMkMbK6vII
— Narendra Modi (@narendramodi) November 19, 2026
ಬಾಹ್ಯಾಕಾಶ ಸ್ಟಾರ್ಟ್ಅಪ್ಗಳು: ದೇಶದಲ್ಲಿ ಬಾಹ್ಯಾಕಾಶ ಕ್ಷೇತ್ರದ ಸ್ಟಾರ್ಟ್ಅಪ್ಗಳ ಸಂಖ್ಯೆ ಕೇವಲ ಒಂದರಿಂದ 440ಕ್ಕೆ ಏರಿಕೆಯಾಗಿದೆ.
ರೈಲ್ವೆ ವಿದ್ಯುದ್ದೀಕರಣ: ರೈಲ್ವೆ ಮಾರ್ಗಗಳ ವಿದ್ಯುದ್ದೀಕರಣ ವ್ಯಾಪ್ತಿ ಶೇ. 20ರಿಂದ ಶೇ. 99.6ಕ್ಕೆ ತಲುಪಿದೆ.
ಇಂಟರ್ನೆಟ್ ಡೇಟಾ ದರ: ಪ್ರತಿ ಜಿಬಿ (GB) ಇಂಟರ್ನೆಟ್ ಡೇಟಾ ದರ 308 ರೂಪಾಯಿಯಿಂದ 7.51 ರೂಪಾಯಿಗೆ ಇಳಿಕೆಯಾಗಿದೆ.
ರಕ್ಷಣಾ ರಫ್ತು: ಪ್ರಮುಖ ರಕ್ಷಣಾ ಆಮದುದಾರ ರಾಷ್ಟ್ರವಾಗಿದ್ದ ಭಾರತ, ಇಂದು 80ಕ್ಕೂ ಹೆಚ್ಚು ದೇಶಗಳಿಗೆ ರಕ್ಷಣಾ ಉಪಕರಣಗಳನ್ನು ರಫ್ತು ಮಾಡುವ ಮಟ್ಟಕ್ಕೆ ಬೆಳೆದಿದೆ.
ನಕ್ಸಲ್ ಪೀಡಿತ ಜಿಲ್ಲೆಗಳು: ದೇಶದಲ್ಲಿ ನಕ್ಸಲ್ ಪೀಡಿತ ಜಿಲ್ಲೆಗಳ ಸಂಖ್ಯೆ 182ರಿಂದ ಶೂನ್ಯಕ್ಕೆ ಇಳಿದಿದೆ.
ಕಳೆದ 13 ವರ್ಷಗಳಲ್ಲಿ ಮೂಲಸೌಕರ್ಯ, ನವೀಕರಿಸಬಹುದಾದ ಇಂಧನ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತ ಸಾಧಿಸಿರುವ ಪ್ರಗತಿಯ ಸೂಚಕಗಳಾಗಿ ಈ ಅಂಕಿಅಂಶಗಳನ್ನು ಗ್ರಾಫಿಕ್ಸ್ನಲ್ಲಿ ಪ್ರಸ್ತುತಪಡಿಸಲಾಗಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಏನಿದು GTA 6 ಗೇಮ್?
ರಾಕ್ಸ್ಟಾರ್ ಗೇಮ್ಸ್ (Rockstar Games) ಸಂಸ್ಥೆಯ ಅತ್ಯಂತ ಜನಪ್ರಿಯ ಓಪನ್-ವರ್ಲ್ಡ್ ಆಕ್ಷನ್-ಅಡ್ವೆಂಚರ್ ಸರಣಿಯ ಹೊಸ ಆವೃತ್ತಿಯೇ ಗ್ರ್ಯಾಂಡ್ ಥೆಫ್ಟ್ ಆಟೋ 6. ಮಿಯಾಮಿ ನಗರವನ್ನು ಆಧರಿಸಿದ ಕಾಲ್ಪನಿಕ ನಗರ ವೈಸ್ ಸಿಟಿ (Vice City) ಹಾಗೂ ಫ್ಲೋರಿಡಾದಿಂದ ಪ್ರೇರಿತವಾದ ಕಾಲ್ಪನಿಕ ರಾಜ್ಯ ಲಿಯೋನಿಡಾ ಹಿನ್ನೆಲೆಯಲ್ಲಿ ಈ ಗೇಮ್ ಸಾಗುತ್ತದೆ.
ದರೋಡೆಯೊಂದು ವಿಫಲವಾದ ಬಳಿಕ ಭೂಗತ ಲೋಕದ ಸುಳಿಗೆ ಸಿಲುಕುವ ಜೇಸನ್ ಡುವಾಲ್ ಮತ್ತು ಲೂಸಿಯಾ ಕ್ಯಾಮಿನೋಸ್ ಎಂಬ ಪಾತ್ರಗಳ ಸುತ್ತ ಈ ಗೇಮ್ನ ಕಥೆ ಹೆಣೆಯಲಾಗಿದ್ದು, ಆಟಗಾರರು ಬೃಹತ್ ನಕ್ಷೆಯಲ್ಲಿ ಸಂಚರಿಸುತ್ತಾ ವಿವಿಧ ಮಿಷನ್ಗಳನ್ನು ಪೂರ್ಣಗೊಳಿಸಬಹುದಾಗಿದೆ.
ಈ ಬಾರಿ ಗೇಮ್ನಲ್ಲಿ ಹೆಚ್ಚಿನ ವಾಸ್ತವಿಕತೆಗೆ ಒತ್ತು ನೀಡಲಾಗಿದೆ. ವಾಹನಗಳಿಗೆ ಪೆಟ್ರೋಲ್ ತುಂಬಿಸುವ ವ್ಯವಸ್ಥೆ, ಕಾರಿನ ಡಿಕ್ಕಿಯಲ್ಲಿ ಶಸ್ತ್ರಾಸ್ತ್ರಗಳನ್ನು ಇಟ್ಟುಕೊಳ್ಳುವ ಸೌಲಭ್ಯ ಮತ್ತು ಪೊಲೀಸರಿಂದ ತಪ್ಪಿಸಿಕೊಳ್ಳಲು ಹೊಸ ತಂತ್ರಗಳನ್ನು ಇದರಲ್ಲಿ ಅಳವಡಿಸಲಾಗಿದೆ.
ಸದ್ಯಕ್ಕೆ ಈ ಗೇಮ್ ಪ್ಲೇಸ್ಟೇಷನ್ 5 (PS5) ಮತ್ತು ಎಕ್ಸ್ಬಾಕ್ಸ್ ಸೀರೀಸ್ X/S (Xbox Series X/S) ಕನ್ಸೋಲ್ಗಳಲ್ಲಿ ಮಾತ್ರ ಲಭ್ಯವಿದೆ. ಪಿಸಿ (PC) ಆವೃತ್ತಿಯ ಬಿಡುಗಡೆಯ ದಿನಾಂಕವನ್ನು ಇನ್ನೂ ಘೋಷಿಸಲಾಗಿಲ್ಲ.
