ನವದೆಹಲಿ: ದೆಹಲಿಯ ಇಂದಿರಾ ಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (IGI) ಟರ್ಮಿನಲ್ 3ರಲ್ಲಿ ಟಿಕೆಟ್ ಇಲ್ಲದೆ ಏರ್ಪೋರ್ಟ್ ಒಳಗೆ ನುಗ್ಗಲು ಪ್ರಯತ್ನಿಸಿದ ಯುವಕನನ್ನು ಕೇಂದ್ರ ಕೈಗಾರಿಕಾ ಭದ್ರತಾ ಪಡೆ (CISF) ಸಿಬ್ಬಂದಿ ತಕ್ಷಣವೇ ಹಿಡಿದಿದ್ದಾರೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ದೃಶ್ಯ ವೈರಲ್ ಆಗುತ್ತಿದೆ.
ಆಗಿದ್ದೇನು?
ನವೆಂಬರ್ 18ರ ಮಧ್ಯಾಹ್ನ ಸುಮಾರು 3:05ಕ್ಕೆ. ಹರಿಯಾಣದ ಸೋನಿಪತ್ ಮೂಲದ ಯುವಕನೊಬ್ಬ ಟರ್ಮಿನಲ್ 3ರ ನಿರ್ಗಮನ ಗೇಟ್ 3A ಬಳಿ ಬಂದಿದ್ದಾನೆ. ಅಲ್ಲಿ ಕರ್ತವ್ಯದಲ್ಲಿದ್ದ CISF ಅಧಿಕಾರಿ ಕಾಶಿನಾಥ್ ಪ್ರಾಮಾಣಿಕ್ ಅವರು ಆತನನ್ನು ತಡೆದು ಟಿಕೆಟ್ ಮತ್ತು ಐಡಿ ಕಾರ್ಡ್ ತೋರಿಸುವಂತೆ ಕೇಳಿದ್ದಾರೆ. ಆದರೆ, ಆ ಯುವಕ ಅಧಿಕಾರಿಯ ಮಾತಿಗೆ ಕ್ಯಾರೆ ಎನ್ನದೆ, ಏಕಾಏಕಿ ಬ್ಯಾರಿಕೇಡ್ ತಳ್ಳಿಕೊಂಡು ಒಳಗೆ ಓಡಲು ಶುರುಮಾಡಿದ್ದಾನೆ.
ಯುವಕ ಒಳನುಗ್ಗುವುದನ್ನು ನೋಡಿದ ತಕ್ಷಣ ಅಲರ್ಟ್ ಆದ ಭದ್ರತಾ ಸಿಬ್ಬಂದಿ ಆತನನ್ನು ಬೆನ್ನಟ್ಟಿದ್ದಾರೆ. ಕಣ್ಣುಮುಚ್ಚಿ ತೆರೆಯುವುದರೊಳಗೆ ಆತನನ್ನು ಹಿಡಿದಿದ್ದಾರೆ. ಸಿಬ್ಬಂದಿಯ ಈ ಸಮಯಪ್ರಜ್ಞೆಯಿಂದಾಗಿ ಏರ್ಪೋರ್ಟ್ ಒಳಗೆ ಸಂಭವಿಸಬಹುದಾಗಿದ್ದ ದೊಡ್ಡ ಅಪಾಯ ತಪ್ಪಿದಂತಾಗಿದೆ. ಈ ಘಟನೆಯ ಸಿಸಿಟಿವಿ ವಿಡಿಯೋವನ್ನು CISF ತನ್ನ ‘X’ ಖಾತೆಯಲ್ಲಿ ಹಂಚಿಕೊಂಡಿದ್ದು, ಸಿಬ್ಬಂದಿಯ ಚುರುಕುತನಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: KPSC Scam| ಸಿಸಿಟಿವಿ ಇಲ್ಲದ ಕೊಠಡಿಯಲ್ಲಿ ನಡೆಯುತ್ತಿತ್ತು ಅಭ್ಯರ್ಥಿಗಳ ಸಂದರ್ಶನ!
ಆತನನ್ನು ವಶಕ್ಕೆ ಪಡೆದು ಬ್ಯಾಗ್ ಚೆಕ್ ಮಾಡಿದಾಗ ಆಧಾರ್ ಕಾರ್ಡ್, ಪ್ಯಾನ್ ಕಾರ್ಡ್, ಮೊಬೈಲ್ ಫೋನ್, ಶೈಕ್ಷಣಿಕ ಹಾಗೂ ಕ್ರೀಡಾ ಸರ್ಟಿಫಿಕೇಟ್ಗಳು ಮತ್ತು ಕೆಲವು ಉದ್ಯೋಗದ ಅರ್ಜಿಗಳು ಸಿಕ್ಕಿವೆ. ತಕ್ಷಣವೇ ಆತನ ತಂದೆಗೆ ಪೊಲೀಸರು ಕರೆ ಮಾಡಿ ವಿಷಯ ತಿಳಿಸಿದ್ದಾರೆ. ʻನನ್ನ ಮಗ ಡ್ರಗ್ಸ್ ಚಟಕ್ಕೆ ಬಿದ್ದಿದ್ದು, ಮಾನಸಿಕವಾಗಿ ಅಸ್ವಸ್ಥನಾಗಿದ್ದಾನೆʼ ಎಂದು ತಂದೆ ಮಾಹಿತಿ ನೀಡಿದ್ದಾರೆ. ಸದ್ಯ ಹೆಚ್ಚಿನ ವಿಚಾರಣೆಗಾಗಿ ಆತನನ್ನು ದೆಹಲಿ ಪೊಲೀಸರಿಗೆ ಒಪ್ಪಿಸಲಾಗಿದೆ.ಇದನ್ನೂ ಓದಿ: ಹೆನ್ನಂಗಿಯಲ್ಲಿ ಕಾಡಾನೆ ದಾಳಿಗೆ ರೈತ ಬಲಿ – ಎನ್ಆರ್ಪುರ ಸಂಪೂರ್ಣ ಬಂದ್
