– 2590 ಕೋಟಿ ಕಿ.ಮೀ. ದೂರ ಕ್ರಮಿಸಿದ ಮಾನವ ನಿರ್ಮಿತ ನೌಕೆ
ನವದಹಲಿ: ಅಮೆರಿಕದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಉಡಾವಣೆ ಮಾಡಿದ್ದ ವಾಯೇಜರ್-1 (Voyager-1) ಬಾಹ್ಯಾಕಾಶ ನೌಕೆ ಮತ್ತೊಂದು ಐತಿಹಾಸಿಕ ಮೈಲಿಗಲ್ಲು ಸಾಧಿಸಿದೆ. ಸುಮಾರು 49 ವರ್ಷಗಳ ನಿರಂತರ ಪಯಣದ ಬಳಿಕ ಭೂಮಿಯಿಂದ ಒಂದು ಬೆಳಕಿನ ದಿನದಷ್ಟು ದೂರವನ್ನು ಕ್ರಮಿಸಿದ ಮೊದಲ ಮಾನವ ನಿರ್ಮಿತ ವಸ್ತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.
ಇಂದು ಭಾರತೀಯ ಕಾಲಮಾನ ಮಧ್ಯಾಹ್ನ 3.46ಕ್ಕೆ ವಾಯೇಜರ್-1 ಭೂಮಿಯಿಂದ ಸುಮಾರು 2590 ಕೋಟಿ ಕಿಲೋಮೀಟರ್ ದೂರ ತಲುಪಿದೆ. ಬೆಳಕು ಒಂದು ದಿನದಲ್ಲಿ ಕ್ರಮಿಸುವ ದೂರವನ್ನು ಒಂದು ಬೆಳಕಿನ ದಿನ ಎಂದು ಕರೆಯಲಾಗುತ್ತದೆ. ಬೆಳಕು ಪ್ರತಿ ಸೆಕೆಂಡ್ಗೆ ಸುಮಾರು 3 ಲಕ್ಷ ಕಿಲೋಮೀಟರ್ ವೇಗದಲ್ಲಿ ಚಲಿಸುತ್ತದೆ. ಈ ಲೆಕ್ಕದಲ್ಲಿ ಒಂದು ಬೆಳಕಿನ ದಿನದ ದೂರ ಸುಮಾರು 25.9 ಶತಕೋಟಿ ಕಿಲೋಮೀಟರ್ ಆಗಿದೆ.
ವಾಯೇಜರ್-1 ಪ್ರಸ್ತುತ ಗಂಟೆಗೆ ಸುಮಾರು 61 ಸಾವಿರ ಕಿಲೋಮೀಟರ್ ವೇಗದಲ್ಲಿ ಚಲಿಸುತ್ತಿದೆ. ಇಷ್ಟೊಂದು ವೇಗದಲ್ಲಿ ಸಾಗುತ್ತಿದ್ದರೂ ಒಂದು ಬೆಳಕಿನ ದಿನದಷ್ಟು ದೂರ ಕ್ರಮಿಸಲು ಅದಕ್ಕೆ ಸುಮಾರು ಐದು ದಶಕಗಳೇ ಬೇಕಾಗಿವೆ.
1977ರಲ್ಲಿ ಆರಂಭವಾದ ಪಯಣ
1977ರ ಸೆಪ್ಟೆಂಬರ್ 5ರಂದು ನಾಸಾ ವಾಯೇಜರ್-1 ನೌಕೆಯನ್ನು ಉಡಾವಣೆ ಮಾಡಿತ್ತು. ಅದರ ಅವಳಿ ನೌಕೆ ವಾಯೇಜರ್-2 ಉಡಾವಣೆಯಾದ 16 ದಿನಗಳ ಬಳಿಕ ವಾಯೇಜರ್-1 ತನ್ನ ಪಯಣ ಆರಂಭಿಸಿತ್ತು. ಸೌರವ್ಯೂಹದ ಹೊರಗಿನ ಗ್ರಹಗಳ ಅಧ್ಯಯನ ಇದರ ಪ್ರಮುಖ ಉದ್ದೇಶವಾಗಿತ್ತು.
1979ರಲ್ಲಿ ಗುರು ಗ್ರಹದ ಸಮೀಪ ಹಾದುಹೋದ ವಾಯೇಜರ್-1, 1980ರಲ್ಲಿ ಶನಿಗ್ರಹದ ಸಮೀಪ ಸಂಚರಿಸಿತ್ತು. ಈ ಸಂದರ್ಭದಲ್ಲಿ ಗ್ರಹಗಳು, ಅವುಗಳ ಉಪಗ್ರಹಗಳು ಹಾಗೂ ಉಂಗುರಗಳ ಕುರಿತು ಮಹತ್ವದ ಮಾಹಿತಿಯನ್ನು ಭೂಮಿಗೆ ರವಾನಿಸಿತ್ತು. ಶನಿಯ ಉಪಗ್ರಹ ಟೈಟನ್ನ ಸಮೀಪ ಹಾದುಹೋದ ಬಳಿಕ ಸೌರವ್ಯೂಹದ ಗ್ರಹಗಳ ಕಕ್ಷೆಯ ಸಮತಲದಿಂದ ಹೊರಕ್ಕೆ ಸಾಗುವ ಮಾರ್ಗವನ್ನು ಪಡೆದುಕೊಂಡಿತ್ತು.
ಸಂದೇಶ ತಲುಪಲು 24 ಗಂಟೆ
ವಾಯೇಜರ್-1 ಭೂಮಿಯಿಂದ ಇಷ್ಟು ದೂರ ಸಾಗಿರುವುದರಿಂದ ಅದರೊಂದಿಗೆ ಸಂಪರ್ಕ ಸಾಧಿಸುವುದೂ ಸವಾಲಾಗಿದೆ. ಭೂಮಿಯಿಂದ ಕಳುಹಿಸುವ ರೇಡಿಯೊ ಸಂಕೇತ ನೌಕೆಯನ್ನು ತಲುಪಲು ಸುಮಾರು 24 ಗಂಟೆ ಬೇಕಾಗುತ್ತದೆ. ಅಲ್ಲಿಂದ ಪ್ರತಿಕ್ರಿಯೆ ಮರಳಿ ಭೂಮಿಗೆ ಬರಲು ಮತ್ತೊಂದು 24 ಗಂಟೆ ಬೇಕಾಗುತ್ತದೆ. ಅಂದರೆ, ಒಂದು ಸಂದೇಶ ಕಳುಹಿಸಿ ಉತ್ತರ ಪಡೆಯಲು ಸುಮಾರು ಎರಡು ದಿನ ಕಾಯಬೇಕಾಗುತ್ತದೆ.ಇದನ್ನೂ ಓದಿ: ಭಾರತದ ಆರ್ಥಿಕತೆ ಸತ್ತು ಹೋಗಿದೆ ಎಂದು ಟೀಕಿಸಿದ ರಾಹುಲ್ ಗಾಂಧಿ; ಅಂಕಿ-ಅಂಶಗಳ ಸಮೇತ ಬಿಜೆಪಿ ತಿರುಗೇಟು
ವಾಯೇಜರ್-1 ತನ್ನೊಂದಿಗೆ ಗೋಲ್ಡನ್ ರೆಕಾರ್ಡ್ ಎಂಬ ವಿಶೇಷ ದಾಖಲೆಯನ್ನೂ ಹೊತ್ತೊಯ್ಯುತ್ತಿದೆ. ಇದರಲ್ಲಿ ಭೂಮಿಯ ವಿವಿಧ ಧ್ವನಿಗಳು, ಸಂಗೀತ, ಶುಭಾಶಯಗಳು ಮತ್ತು ಚಿತ್ರಗಳನ್ನು ಸಂಗ್ರಹಿಸಲಾಗಿದೆ. ಅನ್ಯಗ್ರಹದ ಜೀವಿಗಳಿಗೆ ಭೂಮಿಯ ಬಗ್ಗೆ ಪರಿಚಯಿಸುವ ಉದ್ದೇಶದಿಂದ ಇದನ್ನು ಕಳುಹಿಸಲಾಗಿದೆ.
ವಾಯೇಜರ್-1 ಮುಂದಿನ ಸುಮಾರು 40 ಸಾವಿರ ವರ್ಷಗಳಲ್ಲಿ ಗ್ಲೀಸ್ 445 ನಕ್ಷತ್ರದ ಸಮೀಪ ಹಾದುಹೋಗುವ ನಿರೀಕ್ಷೆಯಿದೆ. ಆದರೆ ಅದು ಆ ನಕ್ಷತ್ರವನ್ನು ತಲುಪುವುದಿಲ್ಲ; ಸುಮಾರು 1.7 ಬೆಳಕಿನ ವರ್ಷಗಳ ಅಂತರದಲ್ಲಿ ಹಾದುಹೋಗಲಿದೆ.
ಸುಮಾರು ಐದು ದಶಕಗಳ ಹಿಂದೆ ನಿರ್ಮಿಸಲಾದ ತಂತ್ರಜ್ಞಾನವನ್ನು ಹೊಂದಿರುವ ನೌಕೆ ಇಂದಿಗೂ ಬಾಹ್ಯಾಕಾಶದಲ್ಲಿ ಸಂಚರಿಸುತ್ತಿರುವುದು ಬಾಹ್ಯಾಕಾಶ ಸಂಶೋಧನೆಯ ಮಹತ್ವದ ಸಾಧನೆಯಾಗಿದೆ.ಇದನ್ನೂ ಓದಿ: ವಿಡಿಯೋ ಕರೆ, ಅಶ್ರುವಾಯು, ಗುಂಡಿನ ಚಕಮಕಿ – ಮಸೀದಿಯಲ್ಲಿ ಅಡಗಿದ್ದ ಉಗ್ರನನ್ನು ಹೊರಗೆ ಕರೆತಂದಿದ್ದು ಹೇಗೆ?
