ಶ್ರೀನಗರ: ಮಸೀದಿಯಲ್ಲಿ ಅಡಗಿದ್ದ ಲಷ್ಕರ್ ಉಗ್ರ (Lashkar Terrorist) ಲತೀಫ್ ಭಟ್ನನ್ನು (Lateef Bhat) ಬೇಟೆಯಾಡಲು ಭದ್ರತಾ ಪಡೆಗಳು ಭಾರೀ ಹರಸಾಹಸಪಟ್ಟಿವೆ. ಉಗ್ರನನ್ನು ಮಸೀದಿಯಿಂದ ಹೊರಗೆ ಕರೆತರಲು ಸತತ ಪ್ರಯತ್ನ ಮಾಡಿ, ಅಂತಿಮವಾಗಿ ಆತನನ್ನು ಹೊಡೆದುರುಳಿಸಿದ್ದಾರೆ. ಕಾರ್ಯಾಚರಣೆ ಹೇಗಿತ್ತು? ಆತನನ್ನು ಹೊರಗೆ ಕರೆತರಲು ಭದ್ರತಾ ಪಡೆಗಳು ಪಟ್ಟ ಹರಸಾಹಸದ ವಿವರ ಇಲ್ಲಿದೆ.
ಲತೀಫ್ನನ್ನು ಹೊರಗೆ ಕರೆತರಲು ಭದ್ರತಾ ಪಡೆಗಳ (Indian Army) ಅಧಿಕಾರಿಗಳು ಮೊದಲು ವಿಡಿಯೋ ಕರೆ ಮಾಡಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದರು. ಆದರೆ ಭದ್ರತಾ ಪಡೆಗಳ ಸೂಚನೆಯನ್ನು ಉಗ್ರ ನಿರಾಕರಿಸಿದ್ದ. ನಾನು ಅಲ್ಲಾಹನನ್ನು ಭೇಟಿಯಾಗಲು ಬಂದಿದ್ದೇನೆ. ನನಗೆ ತುಂಬಾ ಸಂತೋಷವಾಗಿದೆ ಎಂದಿದ್ದ. ಇದರಿಂದ ಆತ ಸಾವಿಗೆ ಸಿದ್ಧನಾಗಿದ್ದ ಎಂಬುದು ಅರ್ಥವಾಗುತ್ತದೆ. ಇದನ್ನೂ ಓದಿ: OP ZANGALPURA | ಧಾರ್ಮಿಕ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಉಗ್ರನನ್ನ ಬಲಿಹಾಕಿದ ಸೇನೆ

ಶರಣಾಗಲು ನಿರಾಕರಿಸಿದ್ದರಿಂದ ಉಗ್ರನನ್ನು ಮಸೀದಿಯಿಂದ ಹೊರಗೆ ಬರುವಂತೆ ಮಾಡಲು ಭದ್ರತಾಪಡೆಗಳು ಅಶ್ರುವಾಯು ಪ್ರಯೋಗ ಮಾಡಿದ್ದವು. ಇದಾದ ಬಳಿಕ ಆತ ಮಸೀದಿಯಿಂದ ಹೊರಗೆ ಓಡಿ ಬಂದಿದ್ದ. ಬಳಿಕ ಅಲ್ಲಿಂದ ಪರಾರಿಯಾಗಲು ಯತ್ನಿಸಿದ ಉಗ್ರನನ್ನು ಭದ್ರತಾ ಪಡೆಗಳು ಗುಂಡಿಕ್ಕಿ ಹತ್ಯೆ ಮಾಡಿವೆ.
ಈ ಕಾರ್ಯಾಚರಣೆ ವೇಳೆ ಧಾರ್ಮಿಕ ಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡುವ ನಿಟ್ಟಿನಲ್ಲಿ ಭದ್ರತಾ ಪಡೆಗಳು ಅತ್ಯಂತ ಸಂಯಮದಿಂದ ಕಾರ್ಯಾಚರಣೆ ನಡೆಸಿವೆ. ಮಸೀದಿ ಆವರಣದಿಂದ ಹೊರಬರುವಂತೆ ಉಪಾಯ ಮಾಡಿ ಉಗ್ರನನ್ನು ಹತ್ಯೆ ಮಾಡಲಾಗಿದೆ.
ನವೆಂಬರ್ 11 ರಂದು ಉಗ್ರ ಉಮರ್ ನಿಸಾರ್ ದಾರ್ ಹಾಗೂ ಲತೀಫ್ ಭಟ್ ಸೇರಿ ಕುಲ್ಗಾಮ್ನ ಸಿಆರ್ಪಿಎಫ್ ಚೆಕ್ ಪೋಸ್ಟ್ ಮೇಲೆ ದಾಳಿ ನಡೆಸಿದ್ದರು. ಇದಾದ ಬಳಿಕ ಜಮ್ಮು ಮತ್ತು ಕಾಶ್ಮೀರದ ಪೊಲೀಸರು ಹಾಗೂ ಭದ್ರತಾ ಪಡೆಗಳು ಉಗ್ರರ ವಿರುದ್ಧ ಕಾರ್ಯಾಚರಣೆಗಿಳಿದಿದ್ದವು. ನ.16 ರಂದು ಈ ಇಬ್ಬರು ಅಡಗಿದ್ದ ಸ್ಥಳವನ್ನು ಸುತ್ತುವರೆದಿದ್ದ ಭದ್ರತಾ ಪಡೆಗಳು ಉಮರ್ ನಿಸಾರ್ ದಾರ್ನನ್ನು ಹತ್ಯೆ ಮಾಡಿದ್ದವು. ಈ ವೇಳೆ ಸಹ ಲತೀಫ್ ಭಟ್ ಬಚಾವ್ ಆಗಿದ್ದ. ಇದಾದ ಮರು ದಿನ ಸಹ ಭದ್ರತಾ ಪಡೆಗಳು ಲತೀಫ್ ಭಟ್ಗಾಗಿ ತೀವ್ರ ಶೋಧ ನಡೆಸಿದ್ದವು, ಆಗಲೂ ಆತ ಬಚಾವ್ ಆಗಿದ್ದ. ಮೂರು ಬಾರಿ ಬಚಾವ್ ಆಗಿದ್ದ ಲತೀಫ್ ಭಟ್ ಇಂದು (ನ.18) ಭದ್ರತಾ ಪಡೆಗಳು ನಡೆಸಿದ ಎನ್ಕೌಂಟರ್ನಲ್ಲಿ ಬೀದಿ ಹೆಣವಾಗಿದ್ದಾನೆ. ಇದನ್ನೂ ಓದಿ: ಮೂರು ಬಾರಿ ಬಚಾವ್ ಆಗಿ 4ನೇ ಬಾರಿಗೆ ಬೀದಿ ಹೆಣವಾದ ಉಗ್ರ ಲತೀಫ್ ಭಟ್
