– ಸಚಿವರ ಮನೆಗೆ ಮುತ್ತಿಗೆಗೆ ಯತ್ನಿಸಿದ 50ಕ್ಕೂ ಹೆಚ್ಚು ರೈತರು ವಶಕ್ಕೆ
ಹಾವೇರಿ: ಕಬ್ಬು ಬೆಳೆಗಾರರ ಹೋರಾಟ (Haveri) ಇಂದು ತೀವ್ರ ಸ್ವರೂಪ ಪಡೆದುಕೊಂಡಿದೆ. ಪ್ರತಿ ಟನ್ ಕಬ್ಬಿಗೆ 3,600 ರೂ. ದರ ನಿಗದಿ ಮಾಡುವಂತೆ ಒತ್ತಾಯಿಸಿ ರೈತರು ಬೀದಿಗಿಳಿದಿದ್ದು, ಜಿಲ್ಲೆಯಾದ್ಯಂತ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.
ಮೊದಲಿಗೆ, ಸಕ್ಕರೆ ಸಚಿವ ರುದ್ರಪ್ಪ ಲಮಾಣಿ ಅವರ ನಿವಾಸದ ಮುಂದೆ ಅಹೋರಾತ್ರಿ ಧರಣಿ ನಡೆಸಲು ರೈತರು ಕರೆ ನೀಡಿದ್ದರು. ಆದರೆ, ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತವು ಸಚಿವರ ಮನೆಯ ಸುತ್ತ 250 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ (ಸೆಕ್ಷನ್ 163) ಜಾರಿ ಮಾಡಿ, ಬ್ಯಾರಿಕೇಡ್ ಹಾಕಿ ರಸ್ತೆ ಬಂದ್ ಮಾಡಿತ್ತು. ಆದರೂ, ರಾಣೇಬೆನ್ನೂರು ಪಟ್ಟಣದ ಉಮಾಶಂಕರ ನಗರದಲ್ಲಿರುವ ಸಚಿವರ ಮೂಲ ನಿವಾಸಕ್ಕೆ ರೈತ ಮುಖಂಡ ಹನುಮಂತಪ್ಪ ಕಬ್ಬಾರ ನೇತೃತ್ವದಲ್ಲಿ ನೂರಾರು ರೈತರು ಕಬ್ಬು ಹಿಡಿದು ಮುತ್ತಿಗೆ ಹಾಕಲು ಯತ್ನಿಸಿದರು. ಈ ವೇಳೆ ಪೊಲೀಸರು ಮತ್ತು ರೈತರ ನಡುವೆ ತಳ್ಳಾಟ ನಡೆದು, 50ಕ್ಕೂ ಹೆಚ್ಚು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದರು.
ಸಚಿವರ ಮನೆಯ ಸುತ್ತ ನಿಷೇಧಾಜ್ಞೆ ಮತ್ತು 400ಕ್ಕೂ ಹೆಚ್ಚು ಪೊಲೀಸರ ಬಿಗಿ ಭದ್ರತೆ ಇದ್ದ ಕಾರಣ, ರೈತರು ತಮ್ಮ ಹೋರಾಟದ ಸ್ಥಳವನ್ನು ಶಿಗ್ಗಾಂವಿ ತಾಲೂಕಿನ ಬಂಕಾಪುರ ಟೋಲ್ಗೇಟ್ಗೆ ಶಿಫ್ಟ್ ಮಾಡಿದರು. ಅಲ್ಲಿ ಜಮಾಯಿಸಿದ ನೂರಾರು ರೈತರು ರಾಷ್ಟ್ರೀಯ ಹೆದ್ದಾರಿ 48 (NH-48) ಅನ್ನು ಬಂದ್ ಮಾಡಿ, ಬಸ್ ಮತ್ತು ಲಾರಿಗಳ ಮುಂದೆ ಅಡ್ಡಮಲಗಿ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದರು.
ಸ್ಥಳಕ್ಕೆ ಆಗಮಿಸಿದ ರೈತ ಮುಖಂಡ ಚೂನೆಪ್ಪ ಪೂಜೇರಿ ಅವರು ಮಾತನಾಡಿ, ಬೆಳಗಾವಿ, ಬಾಗಲಕೋಟೆ ಮತ್ತು ಕಲಬುರಗಿಯಲ್ಲಿ ಕಬ್ಬಿಗೆ ಉತ್ತಮ ದರ ಘೋಷಣೆಯಾಗಿದೆ. ಆದರೆ, ಸಕ್ಕರೆ ಸಚಿವರು ನಮ್ಮದೇ ಜಿಲ್ಲೆಯವರಾಗಿದ್ದರೂ ಇಲ್ಲಿ ದರ ನಿಗದಿ ಮಾಡಲು ಮೀನಾಮೇಷ ಎಣಿಸುತ್ತಿದ್ದಾರೆ. ಕಾರ್ಖಾನೆಗಳು ಕಬ್ಬಿನ ರಿಕವರಿ ಲೆಕ್ಕದಲ್ಲಿ ಗೋಲ್ಮಾಲ್ ಮಾಡಿ ರೈತರಿಗೆ ಮೋಸ ಮಾಡುತ್ತಿವೆಬ ಎಂದು ಕಿಡಿಕಾರಿದರು.ಇದನ್ನೂ ಓದಿ: ಮತದಾರರ ಪಟ್ಟಿಯಲ್ಲಿ ಸೋನಿಯಾ ಗಾಂಧಿ ಹೆಸರು ಸೇರ್ಪಡೆ ಆರೋಪ; ಪೊಲೀಸರಿಂದ ವರದಿ ಕೇಳಿದ ದೆಹಲಿ ಕೋರ್ಟ್
ಕಬ್ಬು ಬೆಳೆಯಲು ಟನ್ಗೆ 4,500 ರಿಂದ 5,000 ರೂ. ಖರ್ಚಾಗುತ್ತದೆ. ಕಾರ್ಖಾನೆಗಳ ಮಾಲೀಕರು ಸ್ಥಳಕ್ಕೆ ಬಂದು 3,600 ರೂ. ದರ ಘೋಷಣೆ ಮಾಡಬೇಕು. ಇಲ್ಲದಿದ್ದರೆ ನಾಳೆ ಒಂದು ಲಕ್ಷ ರೈತರನ್ನು ಸೇರಿಸಿ ಉಗ್ರ ಹೋರಾಟ ನಡೆಸುತ್ತೇವೆ. ರೈತರಿಗೆ ನ್ಯಾಯ ಕೊಡಿಸಲು ಆಗದಿದ್ದರೆ ಸಕ್ಕರೆ ಸಚಿವರು ರಾಜೀನಾಮೆ ನೀಡಲಿ ಎಂದು ವೇದಿಕೆಯಲ್ಲೇ ನೇರ ಎಚ್ಚರಿಕೆ ನೀಡಿದ್ದಾರೆ. ಸದ್ಯ ಬಂಕಾಪುರ ಟೋಲ್ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.ಇದನ್ನೂ ಓದಿ: ವಿಡಿಯೋ ಕರೆ, ಅಶ್ರುವಾಯು, ಗುಂಡಿನ ಚಕಮಕಿ – ಮಸೀದಿಯಲ್ಲಿ ಅಡಗಿದ್ದ ಉಗ್ರನನ್ನು ಹೊರಗೆ ಕರೆತಂದಿದ್ದು ಹೇಗೆ?
