ನವದೆಹಲಿ: ಭಾರತದ ಆರ್ಥಿಕತೆಯ ಸ್ಥಿತಿಯ ಬಗ್ಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಮತ್ತು ಬಿಜೆಪಿ (BJP) ನಡುವೆ ಮತ್ತೆ ಜೋರಾಗಿ ವಾಕ್ಸಮರ ಶುರುವಾಗಿದೆ. ಇತ್ತೀಚೆಗೆ ರಾಹುಲ್ ಗಾಂಧಿ ಅವರು “ಭಾರತದ ಆರ್ಥಿಕತೆ ಸತ್ತು ಹೋಗಿದೆ” ಎಂದು ಟೀಕಿಸಿದ್ದರು. ಇದಕ್ಕೆ ಬಿಜೆಪಿ ಈಗ ಅಂಕಿ-ಅಂಶಗಳ ಸಮೇತ ತಿರುಗೇಟು ನೀಡಿದೆ.
ಭಾರತ ಗಂಭೀರ ಆರ್ಥಿಕ ಬಿಕ್ಕಟ್ಟಿನತ್ತ ಸಾಗುತ್ತಿದೆ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ತೀವ್ರವಾಗಿದ್ದು, ಶಿಕ್ಷಣ ವ್ಯವಸ್ಥೆಯಲ್ಲೂ ಆಳವಾದ ಸಮಸ್ಯೆಗಳಿವೆ ಎಂದು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಅಮೆರಿಕದ ನ್ಯೂಯಾರ್ಕ್ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾಲಯದಲ್ಲಿ ಮಂಗಳವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಭಾರತದ ಆರ್ಥಿಕ ಪರಿಸ್ಥಿತಿ ಕುರಿತು ಕೇಂದ್ರದ ನರೇಂದ್ರ ಮೋದಿ ಸರ್ಕಾರದ ವಿರುದ್ಧ ತೀವ್ರ ಟೀಕೆ ವ್ಯಕ್ತಪಡಿಸಿದರು.
‘ಭಾರತ ಆರ್ಥಿಕ ದುರಂತದ ಸ್ಥಿತಿಯಲ್ಲಿದೆ. ಇದು ವಾಸ್ತವ. ಈ ಸಮಸ್ಯೆಯನ್ನು ನಿರ್ಲಕ್ಷಿಸಬಹುದು, ಮಾಧ್ಯಮಗಳು ಮರೆಮಾಚಬಹುದು. ಆದರೆ ದೇಶದಲ್ಲಿ ಭಾರಿ ಪ್ರಮಾಣದ ನಿರುದ್ಯೋಗ ಸಮಸ್ಯೆ ಇದೆ. ಶಿಕ್ಷಣ ವ್ಯವಸ್ಥೆಯಲ್ಲೂ ಗಂಭೀರ ಸಮಸ್ಯೆಗಳಿವೆ’ ಎಂದು ರಾಹುಲ್ ಗಾಂಧಿ ಹೇಳಿದರು.
ಭಾರತದ ಆರ್ಥಿಕ ಮಾದರಿ ಸುಮಾರು ಒಂದು ದಶಕದ ಹಿಂದೆಯೇ ನಿರೀಕ್ಷಿತ ಫಲಿತಾಂಶ ನೀಡುವುದನ್ನು ನಿಲ್ಲಿಸಿದೆ ಎಂದು ಅವರು ಅಭಿಪ್ರಾಯಪಟ್ಟರು. ಕೇಂದ್ರ ಸರ್ಕಾರದ ‘ಮೇಕ್ ಇನ್ ಇಂಡಿಯಾ’ ಮತ್ತು ‘ಸ್ಟಾರ್ಟ್ಅಪ್ ಇಂಡಿಯಾ’ ಯೋಜನೆಗಳು ಉತ್ಪಾದನಾ ವಲಯವನ್ನು ಬಲಪಡಿಸುವಲ್ಲಿ ಹಾಗೂ ಉದ್ಯೋಗ ಸೃಷ್ಟಿಸುವಲ್ಲಿ ನಿರೀಕ್ಷಿತ ಯಶಸ್ಸು ಸಾಧಿಸಿಲ್ಲ ಎಂದು ಟೀಕಿಸಿದರು.
ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಹಾಗೂ ಕೃಷಿ ಕ್ಷೇತ್ರಗಳು ದೇಶದ ಆರ್ಥಿಕತೆಯ ಪ್ರಮುಖ ಆಧಾರಸ್ತಂಭಗಳಾಗಿವೆ. ಇವುಗಳೇ ಹೆಚ್ಚಿನ ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತವೆ. ಆದರೆ ಈ ವಲಯಗಳು ದುರ್ಬಲಗೊಂಡಿವೆ ಎಂದು ಹೇಳಿದರು.
ಕೇವಲ ಸೇವಾ ವಲಯದಿಂದ ದೇಶದ ಎಲ್ಲರಿಗೂ ಉದ್ಯೋಗ ಒದಗಿಸಲು ಸಾಧ್ಯವಿಲ್ಲ. ಉತ್ಪಾದನಾ ವಲಯವನ್ನು ಪುನರ್ನಿರ್ಮಿಸುವ ಅಗತ್ಯವಿದೆ. ದೇಶದಲ್ಲಿ ಖಾಸಗಿ ಹೂಡಿಕೆ ಏಕೆ ಹೆಚ್ಚುತ್ತಿಲ್ಲ ಎಂಬ ಪ್ರಶ್ನೆಯನ್ನೂ ಅವರು ಎತ್ತಿದರು. ಅದಾನಿ ಮತ್ತು ಅಂಬಾನಿ ಅವರಂತಹ ಕೆಲವೇ ದೊಡ್ಡ ಉದ್ಯಮ ಸಮೂಹಗಳು ಬೆಳವಣಿಗೆ ಕಾಣುತ್ತಿವೆ. ಸಣ್ಣ ಉದ್ಯಮಗಳು ಸಂಕಷ್ಟ ಎದುರಿಸುತ್ತಿವೆ ಎಂದು ಆರೋಪಿಸಿದರು.
ದೇಶದಲ್ಲಿ ಸಂಪತ್ತು ಮತ್ತು ರಾಜಕೀಯ ಅಧಿಕಾರ ಕೆಲವೇ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕೃತವಾಗುತ್ತಿದೆ. ಆದಿವಾಸಿಗಳು, ದಲಿತರು, ಅಲ್ಪಸಂಖ್ಯಾತರು ಮತ್ತು ರೈತರು ಸೇರಿದಂತೆ ವಿವಿಧ ವರ್ಗಗಳು ಸಮಸ್ಯೆ ಎದುರಿಸುತ್ತಿವೆ ಎಂದೂ ರಾಹುಲ್ ಗಾಂಧಿ ಹೇಳಿದರು.
ಬಿಜೆಪಿಯಿಂದ ತೀವ್ರ ವಾಗ್ದಾಳಿ
ರಾಹುಲ್ ಗಾಂಧಿ ಹೇಳಿಕೆಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ. ವಿದೇಶಿ ನೆಲದಲ್ಲಿ ಭಾರತದ ಆರ್ಥಿಕತೆ ಮತ್ತು ಪ್ರಜಾಪ್ರಭುತ್ವದ ಬಗ್ಗೆ ನಕಾರಾತ್ಮಕವಾಗಿ ಮಾತನಾಡುವ ಮೂಲಕ ದೇಶದ ವರ್ಚಸ್ಸಿಗೆ ಧಕ್ಕೆ ತರುತ್ತಿದ್ದಾರೆ ಎಂದು ಬಿಜೆಪಿ ವಕ್ತಾರರು ಆರೋಪಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ವಕ್ತಾರ ಪ್ರದೀಪ್ ಭಂಡಾರಿ, ರಾಹುಲ್ ಗಾಂಧಿಯನ್ನು ‘ಭಾರತ ವಿರೋಧಿ ಪ್ರಚಾರದ ನಾಯಕ’ ಎಂದು ಟೀಕಿಸಿದ್ದಾರೆ. ವಿಶ್ವದ ಪ್ರಮುಖ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಭಾರತವೂ ಒಂದಾಗಿರುವ ಸಂದರ್ಭದಲ್ಲಿ ದೇಶವನ್ನು ಆರ್ಥಿಕ ದುರಂತದ ಸ್ಥಿತಿಯಲ್ಲಿದೆ ಎಂದು ಬಿಂಬಿಸುತ್ತಿದ್ದಾರೆ ಎಂದು ಆಕ್ಷೇಪಿಸಿದ್ದಾರೆ.
ಪಶ್ಚಿಮ ಬಂಗಾಳದ ಬಿಜೆಪಿ ನಾಯಕ ದಿಲೀಪ್ ಘೋಷ್ ಕೂಡ ರಾಹುಲ್ ಹೇಳಿಕೆಗೆ ಪ್ರತಿಕ್ರಿಯಿಸಿ, ಭಾರತದ ಜಿಡಿಪಿ ಬೆಳವಣಿಗೆ ಮತ್ತು ವಿದೇಶಿ ವಿನಿಮಯ ಸಂಗ್ರಹ ದಾಖಲೆಯ ಮಟ್ಟದಲ್ಲಿರುವುದನ್ನು ಉಲ್ಲೇಖಿಸಿ ಟೀಕಿಸಿದ್ದಾರೆ.
ಜಾಗತಿಕ ಹಣಕಾಸು ಸಂಸ್ಥೆ ‘ಗೋಲ್ಡ್ಮನ್ ಸ್ಯಾಚ್ಸ್’ (Goldman Sachs) ನೀಡಿರುವ ಹೊಸ ವರದಿಯನ್ನು ಬಿಜೆಪಿ ಮುಂದಿಟ್ಟಿದೆ. 2027ರ ವೇಳೆಗೆ ಭಾರತದ ಜಿಡಿಪಿ ಬೆಳವಣಿಗೆ ಶೇ. 7.2 ರಷ್ಟು ಇರಲಿದೆ. ವಿಶೇಷ ಅಂದ್ರೆ, ಇದು ಚೀನಾ (ಶೇ. 4.5), ಅಮೆರಿಕ (ಶೇ. 2.4) ಮತ್ತು ಯುರೋಪ್ (ಶೇ. 0.9) ದೇಶಗಳಿಗಿಂತಲೂ ತುಂಬಾ ಹೆಚ್ಚಿದೆ.
ಬಿಜೆಪಿ ವಕ್ತಾರ ಪ್ರದೀಪ್ ಭಂಡಾರಿ ಅವರು ಎಕ್ಸ್ (X) ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿ ರಾಹುಲ್ ಗಾಂಧಿ ವಿರುದ್ಧ ಕಿಡಿಕಾರಿದ್ದಾರೆ. “ಗೋಲ್ಡ್ಮನ್ ಸ್ಯಾಚ್ಸ್ ನೀಡಿರುವ ಈ ವರದಿಯೇ ರಾಹುಲ್ ಗಾಂಧಿಯವರ ಸುಳ್ಳನ್ನು ಬಯಲು ಮಾಡಿದೆ. ಪ್ರಧಾನಿ ಮೋದಿಯವರ ನಾಯಕತ್ವದಲ್ಲಿ ಭಾರತವು ದುರ್ಬಲ ಆರ್ಥಿಕತೆಯ ಪಟ್ಟಿಯಿಂದ ಹೊರಬಂದು, ಇಂದು ಜಗತ್ತಿನಲ್ಲೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ದೇಶವಾಗಿ ನಿಂತಿದೆ” ಎಂದು ಅವರು ತಿರುಗೇಟು ನೀಡಿದ್ದಾರೆ.ಇದನ್ನೂ ಓದಿ: OP ZANGALPURA | ಧಾರ್ಮಿಕ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಉಗ್ರನನ್ನ ಬಲಿಹಾಕಿದ ಸೇನೆ
ಇನ್ನೊಂದೆಡೆ, ರಾಹುಲ್ ಗಾಂಧಿ ಅವರು ಮೊದಲಿನಿಂದಲೂ ಮೋದಿ ಸರ್ಕಾರದ ಆರ್ಥಿಕ ನೀತಿಗಳನ್ನು ಟೀಕಿಸುತ್ತಲೇ ಬಂದಿದ್ದಾರೆ. ಹಿಂದೆ ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಾತುಗಳನ್ನು ಉಲ್ಲೇಖಿಸಿ, “ಮೋದಿ ಮತ್ತು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಬಿಟ್ಟರೆ, ದೇಶದ ಆರ್ಥಿಕತೆ ಸಂಕಷ್ಟದಲ್ಲಿದೆ ಅನ್ನೋದು ಎಲ್ಲರಿಗೂ ಗೊತ್ತಿದೆ” ಎಂದು ರಾಹುಲ್ ವ್ಯಂಗ್ಯವಾಡಿದ್ದರು.
ಚುನಾವಣೆ ಹತ್ತಿರ ಬರುತ್ತಿದ್ದಂತೆ ಆರ್ಥಿಕತೆಯ ವಿಚಾರವಾಗಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ದೊಡ್ಡ ಮಟ್ಟದ ಚರ್ಚೆ ಶುರುವಾಗಿದೆ.ಇದನ್ನೂ ಓದಿ: ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 320ಕ್ಕೂ ಹೆಚ್ಚು ಸ್ಥಾನ ಖಚಿತವೇ? – ಅಚ್ಚರಿ ಉತ್ತರ ಕೊಟ್ಟ ಸಿಎಂ ಯೋಗಿ
