– 120-140 ರೂ. ಇರುವ ಪ್ರೀಮಿಯಂ ಪೆಟ್ರೋಲ್ ನಲ್ಲಿಯೂ ಅತಿ ಹೆಚ್ಚು ಎಥೆನಾಲ್ ಮಿಕ್ಸ್ ಆರೋಪ
– ಕರ್ನಾಟಕದಲ್ಲಿ ಗ್ರಾಹಕರಿಗೆ ಉತ್ತಮಗುಣಮಟ್ಟದ ಪೆಟ್ರೋಲ್ ಲಭ್ಯತೆಯೇ ಇಲ್ಲ ಎಂದ ಸಚಿವರು
ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರದ ಮಧ್ಯೆ ಎಥೆನಾಲ್ (Ethanol) ಜಟಾಪಟಿ ಮುಂದುವರೆದಿದ್ದು, ಜಟಾಪಟಿ ನಡುವೆ ಕೇಂದ್ರ ಸರ್ಕಾರಕ್ಕೆ (Central Govt) ಸಚಿವ ರಿಜ್ವಾನ್ ಅರ್ಷದ್ ಪತ್ರ ಬರೆದಿದ್ದಾರೆ.
ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿಗೆ ಸಚಿವ ರಿಜ್ವಾನ್ ಅರ್ಷದ್ (Rizwan Arshad) ಪತ್ರ ಬರೆದಿದ್ದು, ಕರ್ನಾಟಕದಲ್ಲಿ ಇ20 ಪೆಟ್ರೋಲ್ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಸಮಸ್ಯೆ ಬಗ್ಗೆ ತಿಳಿಸಿದ್ದಾರೆ. ನಿಗದಿತ ಪ್ರಮಾಣಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣದ ಬಗ್ಗೆ ಲ್ಯಾಬ್ ರಿಪೋರ್ಟ್ ಸಮೇತ ಕೇಂದ್ರಕ್ಕೆ ಸಚಿವ ರಿಜ್ವಾನ್ ಪತ್ರ ಬರೆದಿದ್ದಾರೆ. ಇದನ್ನೂ ಓದಿ: ಎಥೆನಾಲ್ ಉತ್ಪಾದನೆ ಹೇಗಾಗುತ್ತೆ? – E20 ಪೆಟ್ರೋಲ್ ಬಳಸೋದ್ರಿಂದ ಎಂಜಿನ್ ಹಾಳಾಗುತ್ತದೆಯೇ? ಇಲ್ಲಿದೆ ಉತ್ತರ…
ಪತ್ರದಲ್ಲಿ 63 ಬಂಕ್ ಪರಿಶೀಲನೆ ನಡೆಸಿರುವ ಬಗ್ಗೆ ಉಲ್ಲೇಖಿಸಿರುವ ಸಚಿವರು, ತೈಲ ಕಂಪನಿಗಳ 42 ವರದಿಗಳಲ್ಲಿ ಎಥೆನಾಲ್ ಶೇಕಡಾವಾರು ಹೇಳಿಯೇ ಇಲ್ಲ. ಅಲ್ಲದೇ ಲ್ಯಾಬ್ನಲ್ಲಿ ಪರೀಕ್ಷಿಸಿದ 14 ಸ್ಯಾಂಪಲ್ಗಳಲ್ಲಿ 11 ರಲ್ಲಿ ಶೇ.20 ಕ್ಕಿಂತ ಹೆಚ್ಚು ಎಥೆನಾಲ್ ಇದ್ದು, ಅತಿ ಹೆಚ್ಚು 31.2%. ಇದೆ ಎಂದು ತಿಳಿಸಲಾಗಿದೆ.
ಇನ್ನು ಬಂಕ್ಗಳಲ್ಲಿ ಎಥೆನಾಲ್ ಪ್ರಮಾಣ ಎಷ್ಟಿದೆ ಎಂಬುದರ ಬೋರ್ಡ್ ಹಾಕುವಂತೆಯೂ ಸೂಚಿಸಲಾಗಿದೆ. ಅಲ್ಲದೇ ಬಿಲ್ನಲ್ಲಿ ಎಥೆನಾಲ್ ಪ್ರಮಾಣವನ್ನೂ ಮುದ್ರಿಸಬೇಕು, ಬಂಕ್ನಲ್ಲಿ ಇ10 ಮತ್ತು ಎಥೆನಾಲ್ ರಹಿತ ಪೆಟ್ರೋಲ್ ಕೂಡ ಸಿಗಬೇಕು. ಇದನ್ನ ಸ್ವತಂತ್ರ ಲ್ಯಾಬ್ ನಿಂದ ಪರೀಕ್ಷೆ ಆಗಬೇಕು. ಒಂದು ವೇಳೆ ಎಥೆನಾಲ್ನಿಂದ ವಾಹನ ಹಾಳಾದರೆ ಪರಿಹಾರ ನೀಡಲು ಇ20 ನಿಧಿ ಮಾಡಬೇಕು ಎಂದು ಕೇಂದ್ರಕ್ಕೆ ಬರೆದ ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಎಥನಾಲ್ ವಿಚಾರದಲ್ಲಿ ರಾಜಕೀಯ ಬೇಡ. ಈ ಎಥನಾಲ್ ಪರೀಕ್ಷೆ ಲ್ಯಾಬ್ ರಿಪೋರ್ಟ್ ಸತ್ಯಾಸತ್ಯತೆಯನ್ನ ರಾಜಕೀಯ ದೃಷ್ಟಿ ಮೇಲಾಟದಿಂದ ನೋಡಬೇಡಿ. ಇದು ಜನರ ಹಿತಾಸಕ್ತಿಗಾಗಿ ಮಾಡಿದ್ದು ಮಾತ್ರ. ಜನ ಕಷ್ಟಪಟ್ಟು ಗಳಿಸಿ ಉಳಿಸುವ ದುಡ್ಡಿನಲ್ಲಿ ಕಾರು ಖರೀದಿ ಮಾಡುತ್ತಾರೆ. ಜನರ ಹಿತಾಸಕ್ತಿ ಅಂಶವನ್ನು ಮಾತ್ರ ಪರಿಗಣಿಸಿ ತುರ್ತಾಗಿ ಇ20 ನೀತಿಗೆ ತಿದ್ದುಪಡಿ ಮಾಡಿ. ಜನರ ವಾಹನ ಹಾಳಾದ್ರೇ ಅದಕ್ಕೊಂದು ನಿಧಿ ಸ್ಥಾಪಿಸಿ ಅಂತಾ ಆಗ್ರಹ ಮಾಡಿದ್ದಾರೆ.
ಹೈಕ್ವಾಲಿಟಿ ಪೆಟ್ರೋಲ್ ನಲ್ಲಿಯೂ ರಾಜ್ಯದಲ್ಲಿ ಎಥನಾಲ್ ಮಿಕ್ಸ್ ಇದೆ. ಕರ್ನಾಟಕದಲ್ಲಿ ಗ್ರಾಹಕರಿಗೆ ಉತ್ತಮಗುಣಮಟ್ಟದ ಪೆಟ್ರೋಲ್ ಲಭ್ಯತೆಯೇ ಇಲ್ಲ. ಲೀಟರ್ಗೆ 120-140 ರೂ. ಇರುವ ಪ್ರೀಮಿಯಂ ಕ್ವಾಲಿಟಿ ಪೆಟ್ರೋಲ್ ನಲ್ಲಿಯೂ ಅತಿ ಹೆಚ್ಚು ಎಥೆನಾಲ್ ಮಿಕ್ಸ್ ಆಗಿದೆ ಎಂದು ಕೇಂದ್ರಕ್ಕೆ ಬರೆದ ಪತ್ರದಲ್ಲಿ ಸಚಿವರು ಗಮನ ಸೆಳೆದಿದ್ದಾರೆ.
ರಾಜ್ಯದ 5 ಬೇಡಿಕೆಗಳೇನು?
1. ಬಂಕ್ನಲ್ಲಿ ಎಥೆನಾಲ್ % ಬೋರ್ಡ್ ಹಾಕಬೇಕು
2. ಬಿಲ್ನಲ್ಲಿ ಎಥೆನಾಲ್ % ಮುದ್ರಿಸಬೇಕು
3. ಇ10 ಮತ್ತು ಎಥೆನಾಲ್ ರಹಿತ ಪೆಟ್ರೋಲ್ ಕೂಡ ಸಿಗಬೇಕು
4. ಸ್ವತಂತ್ರ ಲ್ಯಾಬ್ನಿಂದ ಪರೀಕ್ಷೆ ಆಗಬೇಕು
5. ವಾಹನ ಹಾಳಾದರೆ ಪರಿಹಾರ ನೀಡಲು ಇ20 ನಿಧಿ ಮಾಡಬೇಕು
ಪತ್ರದಲ್ಲಿನ ಮುಖ್ಯಾಂಶಗಳೇನು?
– ಕರ್ನಾಟಕದಲ್ಲಿ E20 ಪೆಟ್ರೋಲ್ ಗುಣಮಟ್ಟ ಮತ್ತು ಪ್ರಮಾಣದಲ್ಲಿ ಸಮಸ್ಯೆ ಇದೆ
– 63 ಬಂಕ್ ಪರಿಶೀಲನೆ ಮಾಡಲಾಗಿದೆ.
– ತೈಲ ಕಂಪನಿಗಳ 42 ವರದಿಗಳಲ್ಲಿ ಎಥೆನಾಲ್ % ಹೇಳಿಯೇ ಇಲ್ಲ.
– ಸ್ವತಂತ್ರ NABL ಲ್ಯಾಬ್ ನಲ್ಲಿ ಪರೀಕ್ಷಿಸಿದ 14 ಸ್ಯಾಂಪಲ್ ಗಳಲ್ಲಿ 11 ರಲ್ಲಿ 20% ಕ್ಕಿಂತ ಜಾಸ್ತಿ ಎಥೆನಾಲ್ ಇತ್ತು. ಅತಿ ಹೆಚ್ಚು 31.2%. ಇದೆ.
– ಗನ್ ದೋಷದ ಬಗ್ಗೆಯೂ ಉಲ್ಲೇಖ ಪ್ರಮಾಣ ಪರೀಕ್ಷೆಯಲ್ಲಿಯೂ ಫೇಲ್ ಆದ ಬಂಕ್ ಗಳು..!
– 805 ಬಂಕ್ ಗಳಲ್ಲಿ ಪರಿಶೀಲನೆ ಮಾಡಿದಾಗ 768 ಬಂಕ್ ಗಳಿಗೆ ಮರು ಮಾಪನಾಂಕ ಬೇಕಾಯಿತು.
– 3,071 ಗನ್ ಟೆಸ್ಟ್ ಮಾಡಿದಾಗ 2,618 ಪೆಟ್ರೋಲ್ ನಳಿಕೆಗಳಲ್ಲಿ ವ್ಯತ್ಯಾಸ ಕಂಡುಬಂದಿದೆ.
– 101 ಬಂಕ್ ಗಳಿಗೆ ರೂ. 6.66 ಲಕ್ಷ ದಂಡ ಹಾಕಲಾಗಿದೆ ಅಂತ ಪತ್ರ ಬರೆದಿದ್ದಾರೆ.



