ದೇಶವನ್ನು ಇಂಧನ ಸ್ವಾವಲಂಬನೆಯತ್ತ ಕೊಂಡೊಯ್ಯುವ ಹಾಗೂ ಕಚ್ಚಾ ತೈಲದ ಆಮದು ವೆಚ್ಚ ಭಾರಿ ಪ್ರಮಾಣದಲ್ಲಿ ತಗ್ಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವು ಮಹತ್ವದ ಹೆಜ್ಜೆಯಿಟ್ಟಿದ್ದು, ಶೇ. 100ರಷ್ಟು ಎಥೆನಾಲ್ ಹೊಂದಿರುವ E-100 ವಾಹನಗಳ ತಯಾರಿಕೆಗೆ ಇತ್ತೀಚೆಗೆ ಹಸಿರು ನಿಶಾನೆ ತೋರಿದೆ. ಈ ಕ್ರಮದಿಂದಾಗಿ ಕಬ್ಬು ಮತ್ತು ಮೆಕ್ಕೆಜೋಳ ಬೆಳೆಯುವ ರೈತರಿಗೆ ಆರ್ಥಿಕವಾಗಿ ಹೆಚ್ಚಿನ ಲಾಭ ಸಿಗುವ ಜೊತೆಗೆ ಹಸಿರುಕ್ರಾಂತಿಗೆ ನಾಂದಿ ಹಾಡಿ ಬೃಹತ್ ಮಾರುಕಟ್ಟೆಯನ್ನ ಸೃಷ್ಟಿಸಲಿದೆ. ಈ ಮಧ್ಯೆ ಕರ್ನಾಟಕ ಸರ್ಕಾರ ಅಗತ್ಯಕ್ಕಿಂತಲೂ ಹೆಚ್ಚು ಎಥೆನಾಲ್ ಅನ್ನು ಪೆಟ್ರೋಲ್ಗೆ ಮಿಶ್ರಣ ಮಾಡಲಾಗುತ್ತಿದೆ ಎಂದು ಆರೋಪಿಸಿದೆ. ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣದಿಂದ ವಾಹನಗಳ ಮೈಲೇಜ್ ಕಡಿಮೆಯಾಗುತ್ತಿರುವುದಲ್ಲದೆ, ಇಂಜಿನ್ ಸಮಸ್ಯೆಯಿಂದಾಗಿ ವಾಹನಗಳು ಪದೇ ಪದೇ ದುರಸ್ತಿಗೆ ಬರುತ್ತಿವೆ ಎಂದು ಕೂಡ ಆರೋಪಿಸಲಾಗಿದೆ. ಈ ಮಧ್ಯೆ ಎಥೆನಾಲ್ ಬಗ್ಗೆ ತಿಳಿದುಕೊಳ್ಳುವುದು ಅಷ್ಟೇ ಸೂಕ್ತವಾಗಿದೆ.
ಎಥೆನಾಲ್ ತಯಾರಾಗುವುದು ಹೇಗೆ? ಅದನ್ನ ಪೆಟ್ರೋಲ್ ಜೊತೆ ಹೇಗೆ ಬೆರೆಸಲಾಗುತ್ತದೆ? E20 ಪೆಟ್ರೋಲ್ ಬಳಸುವುದರಿಂದ ವಾಹನದ ಮೈಲೇಜ್ ಕಡಿಮೆಯಾಗುತ್ತದೆಯೇ? ಎಂಜಿನ್ಗೆ ಹಾನಿಯಾಗುತ್ತದೆಯೇ? ಇಂತಹ ಕುತೂಹಲಕಾರಿ ಸಂಗತಿಗಳ ಬಗ್ಗೆ ತಿಳಿಯಬೇಕಿದ್ದರೆ ಮುಂದೆ ಓದಿ…

ಎಥೆನಾಲ್ ಹೇಗೆ ತಯಾರಿಸಲಾಗುತ್ತೆ?
ಎಥೆನಾಲ್ ಒಂದು ರೀತಿಯ ಆಲ್ಕೋಹಾಲ್ ಆಗಿದ್ದು, ಇದನ್ನ ಈಥೈಲ್ ಆಲ್ಕೋಹಾಲ್ (Ethyl Alcohol) ಎಂದೂ ಕರೆಯಲಾಗುತ್ತೆ. ಇದರ ರಾಸಾಯನಿಕ ಸೂತ್ರ C₂H₅OH. ಸ್ಯಾನಿಟೈಸರ್, ಔಷಧಗಳು, ರಾಸಾಯನಿಕ ಉತ್ಪನ್ನಗಳು ಹಾಗೂ ಇಂಧನ ತಯಾರಿಕೆಯಲ್ಲಿ ಇದನ್ನು ಬಳಸಲಾಗುತ್ತದೆ. ಎಥೆನಾಲ್ ಅನ್ನು ಪೆಟ್ರೋಲ್ನಲ್ಲಿ ಮಿಶ್ರಣ ಮಾಡಿದಾಗ ಅದನ್ನ ಎಥೆನಾಲ್ ಮಿಶ್ರಿತ ಪೆಟ್ರೋಲ್ (Ethanol Blended Petrol) ಎಂದು ಕರೆಯಲಾಗುತ್ತದೆ.
ಭಾರತದಲ್ಲಿ ಎಥೆನಾಲ್ ತಯಾರಿಸಲು ಮುಖ್ಯವಾಗಿ ಕಬ್ಬಿನಿಂದ ದೊರೆಯುವ ಕಾಕಂಬಿ (Molasses), ಕಬ್ಬಿನ ರಸ, ಸಕ್ಕರೆ ಪಾಕ, ಮೆಕ್ಕೆಜೋಳ, ಹಾಳಾದ ಅಥವಾ ಮುರಿದ ಆಹಾರ ಧಾನ್ಯಗಳು ಹಾಗೂ ಹೆಚ್ಚುವರಿ ಅಕ್ಕಿಯನ್ನ ಬಳಸಲಾಗುತ್ತದೆ. ಅಂದರೆ, ಸಕ್ಕರೆ ತಯಾರಿಸಿದ ನಂತರ ಉಳಿಯುವ ಕಬ್ಬಿನ ಉಪ ಉತ್ಪನ್ನಗಳಿಂದಲೂ ವಾಹನಗಳಿಗೆ ಬಳಸುವ ಇಂಧನವನ್ನ ತಯಾರಿಸಬಹುದು. ಈ ಕಾರಣದಿಂದಾಗಿ ಸಕ್ಕರೆ ಉದ್ಯಮದ ಜೊತೆಗೆ ಧಾನ್ಯ ಆಧಾರಿತ ಎಥೆನಾಲ್ ಉತ್ಪಾದನೆಗೂ ಸರ್ಕಾರ ಉತ್ತೇಜನ ನೀಡುತ್ತಿದೆ.

ಎಥೆನಾಲ್ ಹೇಗೆ ತಯಾರಿಸಲಾಗುತ್ತೆ?
ಎಥೆನಾಲ್ ತಯಾರಿಕೆಯಲ್ಲಿ ಅತ್ಯಂತ ಪ್ರಮುಖವಾದ ಪ್ರಕ್ರಿಯೆ ಫರ್ಮೆಂಟೇಶನ್ (Fermentation). ಸರಳವಾಗಿ ಹೇಳುವುದಾದರೆ, ಈ ಪ್ರಕ್ರಿಯೆಯಲ್ಲಿ ಯೀಸ್ಟ್ (Yeast) ಸಕ್ಕರೆಯನ್ನ ಆಲ್ಕೋಹಾಲ್ ಆಗಿ ಪರಿವರ್ತಿಸುತ್ತದೆ. ಮೊದಲಿಗೆ ಕಬ್ಬಿನ ರಸಕ್ಕೆ ನೀರನ್ನು ಸೇರಿಸಿ ದ್ರಾವಣ ತಯಾರಿಸಲಾಗುತ್ತದೆ. ನಂತರ ಅದಕ್ಕೆ ಯೀಸ್ಟ್ ಸೇರಿಸಲಾಗುತ್ತದೆ. ಯೀಸ್ಟ್ ದ್ರಾವಣದಲ್ಲಿರುವ ಸಕ್ಕರೆಯನ್ನ ಬೇರ್ಪಡಿಸಿ ಎಥೆನಾಲ್ ಮತ್ತು ಕಾರ್ಬನ್ ಡೈಆಕ್ಸೈಡ್ ಉತ್ಪಾದಿಸುತ್ತದೆ. ಕೆಲ ಹೊತ್ತಿನ ನಂತರ ಈ ಮಿಶ್ರಣದಲ್ಲಿ ಆಲ್ಕೋಹಾಲ್ ರೂಪುಗೊಳ್ಳುತ್ತದೆ. ಆದ್ರೆ ಈ ಹಂತದಲ್ಲಿ ದೊರೆಯುವ ದ್ರವವನ್ನ ನೇರವಾಗಿ ಪೆಟ್ರೋಲ್ಗೆ ಮಿಶ್ರಣ ಮಾಡಲು ಸಾಧ್ಯವಿಲ್ಲ. ಏಕೆಂದರೆ ಅದರಲ್ಲಿ ನೀರು ಮತ್ತು ಇತರ ಕಲ್ಮಶಗಳು ಇರುತ್ತವೆ. ನಂತರ ಡಿಸ್ಟಿಲೇಷನ್ (Distillation) ಪ್ರಕ್ರಿಯೆ ನಡೆಸಲಾಗುತ್ತದೆ. ಈ ವಿಧಾನದಲ್ಲಿ ಮಿಶ್ರಣವನ್ನು ಬಿಸಿ ಮಾಡಿದಾಗ ಎಥೆನಾಲ್ ಆವಿಯಾಗಿ ಬೇರ್ಪಡುತ್ತದೆ. ನಂತರ ಆ ಆವಿಯನ್ನು ತಂಪಾಗಿಸಿ ಮತ್ತೆ ದ್ರವ ರೂಪಕ್ಕೆ ತರಲಾಗುತ್ತದೆ. ಆದರೆ ಡಿಸ್ಟಿಲೇಷನ್ ಮೂಲಕ ಎಥೆನಾಲ್ನಲ್ಲಿರುವ ಸಂಪೂರ್ಣ ನೀರನ್ನು ತೆಗೆದುಹಾಕಲು ಸಾಧ್ಯವಿಲ್ಲ. ಹೀಗಾಗಿ ಇಂಧನವಾಗಿ ಬಳಸುವ ಮೊದಲು ಅದನ್ನು ಮತ್ತಷ್ಟು ಶುದ್ಧೀಕರಿಸಲಾಗುತ್ತದೆ.
ಇದಕ್ಕಾಗಿ ಮಾಲಿಕ್ಯುಲರ್ ಸೀವ್ (Molecular Sieve) ತಂತ್ರಜ್ಞಾನವನ್ನ ಬಳಸಲಾಗುತ್ತದೆ. ಈ ಮೂಲಕ ಉಳಿದ ನೀರನ್ನು ತೆಗೆದುಹಾಕಿ ಇಂಧನ ದರ್ಜೆಯ ಶುದ್ಧ ಎಥೆನಾಲ್ (Fuel Grade Anhydrous Ethanol) ತಯಾರಿಸಲಾಗುತ್ತದೆ. ಇನ್ನು ಮೆಕ್ಕೆಜೋಳದಂತಹ ಧಾನ್ಯಗಳಿಂದ ಎಥೆನಾಲ್ ತಯಾರಿಸುವಾಗ ಮೊದಲು ಅದರಲ್ಲಿರುವ ಪಿಷ್ಟವನ್ನು (Starch) ಎಂಜೈಮ್ಗಳ ಸಹಾಯದಿಂದ ಸಕ್ಕರೆಯಾಗಿ ಪರಿವರ್ತಿಸಲಾಗುತ್ತದೆ. ನಂತರ ಫರ್ಮೆಂಟೇಶನ್ ಮತ್ತು ಡಿಸ್ಟಿಲೇಷನ್ ಪ್ರಕ್ರಿಯೆ ಮೂಲಕ ಇಥನಾಲ್ ಉತ್ಪಾದಿಸಲಾಗುತ್ತದೆ.

ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವುದು ಹೇಗೆ?
ಇಥನಾಲ್ ತಯಾರಾದ ತಕ್ಷಣ ಅದನ್ನು ಪೆಟ್ರೋಲ್ ಬಂಕ್ಗಳಲ್ಲಿ ಪೆಟ್ರೋಲ್ಗೆ ನೇರವಾಗಿ ಮಿಶ್ರಣ ಮಾಡುವುದಿಲ್ಲ. ಮೊದಲು ಅದರ ಗುಣಮಟ್ಟ ಮತ್ತು ಶುದ್ಧತೆಯನ್ನ ಪರೀಕ್ಷಿಸಲಾಗುತ್ತದೆ. ನಂತರ ತೈಲ ಕಂಪನಿಗಳು ತಮ್ಮ ಸಂಸ್ಕರಣಾಗಾರ ಮತ್ತು ವಿತರಣಾ ಘಟಕಗಳಲ್ಲಿ ನಿಗದಿತ ಪ್ರಮಾಣದ ಎಥೆನಾಲ್ ಹಾಗೂ ಪೆಟ್ರೋಲ್ ಮಿಶ್ರಣ ಮಾಡಲಾಗುತ್ತದೆ.
ಈ ಪ್ರಕ್ರಿಯೆ ಸಂಪೂರ್ಣವಾಗಿ ಸ್ವಯಂಚಾಲಿತ ಮತ್ತು ನಿಯಂತ್ರಿತ ಯಂತ್ರಗಳ ಮೂಲಕ ನಡೆಯುತ್ತದೆ. ಎರಡೂ ಇಂಧನಗಳ ಪ್ರಮಾಣವನ್ನು ನಿಖರವಾಗಿ ಅಳೆಯಲು ಕ್ಯಾಲಿಬ್ರೇಟ್ ವ್ಯವಸ್ಥೆಯನ್ನ ಬಳಸಲಾಗುತ್ತದೆ. ಇದರಿಂದ ತಯಾರಾದ ಇಂಧನವು ನಿಗದಿತ ಗುಣಮಟ್ಟದ ಮಾನದಂಡಗಳನ್ನ ಪೂರೈಸುತ್ತದೆ. ನಂತರ ಮಿಶ್ರಿತ ಇಂಧನವನ್ನ ಟ್ಯಾಂಕರ್ಗಳ ಮೂಲಕ ಪೆಟ್ರೋಲ್ ಬಂಕ್ಗಳಿಗೆ ಸಾಗಿಸಲಾಗುತ್ತದೆ.
E10 ಮತ್ತು E20 ಮಿಶ್ರಣದ ಪ್ರಮಾಣ ಹೇಗಿರುತ್ತೆ?
* E10 ಪೆಟ್ರೋಲ್: ಒಂದು ಲೀಟರ್ ಇಂಧನದಲ್ಲಿ ಸುಮಾರು 100 ಮಿಲಿ ಎಥೆನಾಲ್ ಮತ್ತು 900 ಮಿಲಿ ಪೆಟ್ರೋಲ್ ಇರುತ್ತದೆ. ಅಂದರೆ ಶೇ.10ರಷ್ಟು ಎಥೆನಾಲ್ ಮಿಶ್ರಣವಾಗಿರುತ್ತದೆ.
* E20 ಪೆಟ್ರೋಲ್: ಒಂದು ಲೀಟರ್ ಇಂಧನದಲ್ಲಿ ಸುಮಾರು 200 ಮಿಲಿ ಎಥೆನಾಲ್ ಮತ್ತು 800 ಮಿಲಿ ಪೆಟ್ರೋಲ್ ಇರುತ್ತದೆ. ಅಂದರೆ ಶೇ.20ರಷ್ಟು ಎಥೆನಾಲ್ ಮಿಶ್ರಣವಾಗಿರುತ್ತದೆ.
ಪೆಟ್ರೋಲ್ನಲ್ಲಿ ಎಥೆನಾಲ್ ಮಿಶ್ರಣ ಮಾಡುವುದರಿಂದ ಆಗುವ ಲಾಭಗಳೇನು?
1. ಕಚ್ಚಾ ತೈಲ ಆಮದು ಅವಲಂಬನೆ ಕಡಿಮೆ
ಪೆಟ್ರೋಲ್ನಲ್ಲಿ ದೇಶೀಯವಾಗಿ ಉತ್ಪಾದಿಸಿದ ಎಥೆನಾಲ್ ಮಿಶ್ರಣ ಮಾಡುವುದರಿಂದ ಒಟ್ಟು ಇಂಧನದ ಒಂದು ಭಾಗವನ್ನ ದೇಶದಲ್ಲೇ ಉತ್ಪಾದಿಸಬಹುದು. ಇದರಿಂದ ಕಚ್ಚಾ ತೈಲದ ಅಗತ್ಯ ಮತ್ತು ಆಮದು ವೆಚ್ಚದ ಮೇಲಿನ ಒತ್ತಡ ಕಡಿಮೆಯಾಗಲು ಸಹಾಯವಾಗುತ್ತದೆ.
2. ರೈತರಿಗೆ ಹೆಚ್ಚುವರಿ ಮಾರುಕಟ್ಟೆ
ಎಥೆನಾಲ್ ಉತ್ಪಾದನೆ ಹೆಚ್ಚಾದಂತೆ ಕಬ್ಬು, ಮೆಕ್ಕೆಜೋಳ ಮತ್ತು ಇತರ ಕೃಷಿ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತದೆ. ಇದರಿಂದ ರೈತರಿಗೆ ತಮ್ಮ ಉತ್ಪನ್ನಗಳನ್ನ ಮಾರಾಟ ಮಾಡಲು ಹೆಚ್ಚುವರಿ ಮಾರುಕಟ್ಟೆ ದೊರೆಯುತ್ತದೆ. ಸಕ್ಕರೆ ಕಾರ್ಖಾನೆಗಳಿಗೂ ಕಬ್ಬಿನ ರಸದಿಂದ ಎಥೆನಾಲ್ ಉತ್ಪಾದಿಸಿ ಹೆಚ್ಚುವರಿ ಆದಾಯ ಗಳಿಸುವ ಅವಕಾಶ ಸಿಗುತ್ತದೆ. ಇದರಿಂದ ಸಕ್ಕರೆ ಉದ್ಯಮದ ಆರ್ಥಿಕ ಸ್ಥಿತಿ ಸುಧಾರಿಸಲು ಹಾಗೂ ರೈತರಿಗೆ ಕಬ್ಬಿನ ಬಾಕಿ ಹಣ ಪಾವತಿಸಲು ನೆರವಾಗಬಹುದು.
3. ಪರಿಸರ ಮಾಲಿನ್ಯ ಕಡಿಮೆ ಮಾಡಲು ಸಹಕಾರಿ
ಎಥೆನಾಲ್ನಲ್ಲಿ ಆಮ್ಲಜನಕದ ಅಂಶವಿರುವುದರಿಂದ ಇದು ಪೆಟ್ರೋಲ್ಗಿಂತ ವಿಭಿನ್ನ ರೀತಿಯಲ್ಲಿ ಉರಿಯುತ್ತದೆ. ಸೂಕ್ತ ಎಂಜಿನ್ ಮತ್ತು ಇಂಧನ ಸಂಯೋಜನೆಯಲ್ಲಿ ಕಾರ್ಬನ್ ಮಾನಾಕ್ಸೈಡ್ ಹಾಗೂ ಕೆಲವು ರೀತಿಯ ಹೈಡ್ರೋಕಾರ್ಬನ್ಗಳ ಹೊರಸೂಸುವಿಕೆ ಕಡಿಮೆಯಾಗಬಹುದು.
ಎಥೆನಾಲ್ ಮಿಶ್ರಿತ ಪೆಟ್ರೋಲ್ನಿಂದ ಆಗುವ ನಷ್ಟ ಮತ್ತು ಸವಾಲುಗಳೇನು?
ಎಥೆನಾಲ್ ಬಳಕೆಯಿಂದ ಕೆಲವು ಪ್ರಯೋಜನಗಳಿದ್ದರೂ, ಇದರ ಉತ್ಪಾದನೆ ಮತ್ತು ಬಳಕೆಯಲ್ಲಿ ಕೆಲವು ಸವಾಲುಗಳೂ ಇವೆ.
1. ವಾಹನದ ಮೈಲೇಜ್ ಕಡಿಮೆಯಾಗುವ ಸಾಧ್ಯತೆ
ಎಥೆನಾಲ್ನಲ್ಲಿ ಪೆಟ್ರೋಲ್ಗೆ ಹೋಲಿಸಿದ್ರೆ ಕಡಿಮೆ ಪ್ರಮಾಣದ ಶಕ್ತಿ ಇರುತ್ತದೆ. ಹೀಗಾಗಿ E20 ಪೆಟ್ರೋಲ್ ಬಳಸುವ ಕೆಲವು ವಾಹನಗಳಲ್ಲಿ ಮೈಲೇಜ್ ಕಡಿಮೆಯಾಗಬಹುದು.
ಸರ್ಕಾರ ಮತ್ತು ವಾಹನ ಉದ್ಯಮದ ಅಧ್ಯಯನಗಳ ಪ್ರಕಾರ, E20 ಬಳಕೆಗೆ ವಿನ್ಯಾಸಗೊಳಿಸಿ ಹೊಂದಾಣಿಕೆ ಮಾಡಲಾದ ವಾಹನಗಳಲ್ಲಿ ಮೈಲೇಜ್ ವ್ಯತ್ಯಾಸ ಸುಮಾರು ಶೇ.1 ರಿಂದ 2ರ ಷ್ಟಿರಬಹುದು. ಆದರೆ E10 ಬಳಕೆಗೆ ಸಿದ್ಧಪಡಿಸಲಾದ ಕೆಲವು ಹಳೆಯ ವಾಹನಗಳಲ್ಲಿ ಮೈಲೇಜ್ ಶೇ.3ರಿಂದ 6ರ ವರೆಗೆ ಕಡಿಮೆಯಾಗುವ ಸಾಧ್ಯತೆ ಇದೆ. ಈ ಪರಿಣಾಮವು ವಾಹನಗಳ ಮಾದರಿ, ಎಂಜಿನ್ ತಂತ್ರಜ್ಞಾನ, ಚಾಲನಾ ವಿಧಾನ ಮತ್ತು ನಿರ್ವಹಣೆಯನ್ನು ಅವಲಂಬಿಸಿರುತ್ತದೆ. ಆದ್ದರಿಂದ ಎಲ್ಲ ವಾಹನಗಳ ಮೈಲೇಜ್ ಒಂದೇ ಪ್ರಮಾಣದಲ್ಲಿ ಕಡಿಮೆಯಾಗುತ್ತದೆ ಎಂದು ಹೇಳಲು ಸಾಧ್ಯವಿಲ್ಲ.
2. ವಾಹನದ ಎಂಜಿನ್ ಮತ್ತು ಬಿಡಿಭಾಗಗಳ ಹೊಂದಾಣಿಕೆ
ಕೆಲವು ವಾಹನಗಳಲ್ಲಿರುವ ಇಂಧನ ವ್ಯವಸ್ಥೆಯ ಬಿಡಿಭಾಗಗಳೊಂದಿಗೆ ಎಥೆನಾಲ್ ವಿಭಿನ್ನವಾಗಿ ವರ್ತಿಸಬಹುದು. ಅಲ್ಲದೇ, ಎಥೆನಾಲ್ ನೀರನ್ನು ಹೀರಿಕೊಳ್ಳುವ ಗುಣ ಹೊಂದಿದೆ. ಇಂಧನದಲ್ಲಿ ಅಗತ್ಯಕ್ಕಿಂತ ಹೆಚ್ಚು ನೀರು ಸೇರಿದರೆ, ಎಥೆನಾಲ್ ಮತ್ತು ನೀರಿನ ಮಿಶ್ರಣವು ಪೆಟ್ರೋಲ್ನಿಂದ ಬೇರ್ಪಟ್ಟು ಕೆಳಭಾಗದಲ್ಲಿ ಸಂಗ್ರಹವಾಗಬಹುದು. ಈ ಪ್ರಕ್ರಿಯೆಯನ್ನು ಫೇಸ್ ಸೆಪರೇಷನ್ (Phase Separation) ಎಂದು ಕರೆಯಲಾಗುತ್ತದೆ. ಇದರಿಂದ ಎಂಜಿನ್ ಕಾರ್ಯನಿರ್ವಹಣೆಯಲ್ಲಿ ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಆದರೆ ನಿಗದಿತ ಗುಣಮಟ್ಟದ ಇಂಧನ, ಸರಿಯಾದ ಸಂಗ್ರಹಣೆ ಮತ್ತು ಆಧುನಿಕ ವಾಹನಗಳ ವಿನ್ಯಾಸದ ಮೂಲಕ ಈ ಅಪಾಯವನ್ನು ನಿಯಂತ್ರಿಸಬಹುದು.
3. ನೀರಿನ ಬಳಕೆ ಮತ್ತು ಕೃಷಿ ಮೇಲಿನ ಒತ್ತಡ
ಎಥೆನಾಲ್ ಉತ್ಪಾದನೆಗೆ ಕಬ್ಬು ಪ್ರಮುಖ ಕಚ್ಚಾ ವಸ್ತುವಾಗಿದೆ. ಆದರೆ ಕಬ್ಬು ಹೆಚ್ಚು ನೀರು ಬೇಡುವ ಬೆಳೆಯಾಗಿದೆ. ಎಥೆನಾಲ್ ಉತ್ಪಾದನೆ ಹೆಚ್ಚಿಸುವ ಉದ್ದೇಶದಿಂದ ನೀರಿನ ಕೊರತೆ ಇರುವ ಪ್ರದೇಶಗಳಲ್ಲಿ ಕಬ್ಬಿನ ಕೃಷಿ ವಿಸ್ತರಿಸಿದರೆ, ಅಂತರ್ಜಲ ಮತ್ತು ನೀರಾವರಿ ವ್ಯವಸ್ಥೆಯ ಮೇಲೆ ಹೆಚ್ಚಿನ ಒತ್ತಡ ಉಂಟಾಗಬಹುದು. ಇದರ ಜೊತೆಗೆ ಮೆಕ್ಕೆಜೋಳ ಮತ್ತು ಇತರ ಆಹಾರ ಧಾನ್ಯಗಳನ್ನ ಎಥೆನಾಲ್ ತಯಾರಿಕೆಗೆ ಹೆಚ್ಚಾಗಿ ಬಳಸುವುದರಿಂದ ಆಹಾರ ಮತ್ತು ಪಶು ಆಹಾರದ ಲಭ್ಯತೆ ಹಾಗೂ ಬೆಲೆಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಹೀಗಾಗಿ ಕೃಷಿ ಅವಶೇಷಗಳು, ಹಾಳಾದ ಧಾನ್ಯಗಳು ಮತ್ತು ಆಹಾರೇತರ ಜೈವಿಕ ಮೂಲಗಳಿಂದ ಎಥೆನಾಲ್ ಉತ್ಪಾದಿಸುವುದಕ್ಕೂ ಹೆಚ್ಚಿನ ಆದ್ಯತೆ ನೀಡುವತ್ತ ಸರ್ಕಾರ ಚಿಂತನೆ ನಡೆಸುತ್ತಿದೆ.
E20 ಪೆಟ್ರೋಲ್ ಬಳಸೋದ್ರಿಂದ ಎಂಜಿನ್ ಹಾಳಾಗುತ್ತದೆಯೇ?
ಇದು ವಾಹನದ ವಿನ್ಯಾಸ ಮತ್ತು ತಯಾರಕರ ಮಾರ್ಗಸೂಚಿಯ ಮೇಲೆ ಅವಲಂಬಿತವಾಗಿರುತ್ತದೆ. ಸಂಸತ್ತಿನಲ್ಲಿ ಕೇಂದ್ರ ಸರ್ಕಾರ ನೀಡಿರುವ ಮಾಹಿತಿಯ ಪ್ರಕಾರ, 2023ರ ಏಪ್ರಿಲ್ 1ರ ನಂತರ ಮಾರಾಟವಾದ ವಾಹನಗಳನ್ನ E20 ಇಂಧನಕ್ಕೆ ಹೊಂದಿಕೆಯಾಗುವ ಸಾಮಗ್ರಿಗಳನ್ನ ಬಳಸಿ ತಯಾರಿಸಲಾಗಿದೆ. ಅದಕ್ಕೂ ಮೊದಲು ಮಾರಾಟವಾದ ವಾಹನಗಳು ಸಾಮಾನ್ಯವಾಗಿ E10 ಇಂಧನಕ್ಕೆ ಹೊಂದಿಕೆಯಾಗುವಂತೆ ವಿನ್ಯಾಸಗೊಳಿಸಲಾಗಿದೆ. ಇದರ ಅರ್ಥ ಹಳೆಯ ವಾಹನಗಳಿಗೆ E20 ಪೆಟ್ರೋಲ್ ಹಾಕಿದ ತಕ್ಷಣ ಎಂಜಿನ್ ಹಾಳಾಗುತ್ತದೆ ಎಂದಲ್ಲ. ಆದರೆ ವಾಹನವು E20 ಇಂಧನಕ್ಕೆ ಹೊಂದಿಕೆಯಾಗುತ್ತದೆಯೇ ಎಂಬುದನ್ನ ಪರಿಶೀಲಿಸುವುದು ಮುಖ್ಯ. ಆದ್ರೆ ಕೆಲವು ಹಳೆಯ ವಾಹನಗಳಲ್ಲಿ ದೀರ್ಘಕಾಲ ಹೆಚ್ಚಿನ ಪ್ರಮಾಣದ ಇಥನಾಲ್ ಮಿಶ್ರಿತ ಇಂಧನ ಬಳಸುವುದರಿಂದ ಇಂಧನ ವ್ಯವಸ್ಥೆಯ ಕೆಲವು ಬಿಡಿಭಾಗಗಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಒಟ್ಟಿನಲ್ಲಿ ಎಥೆನಾಲ್ ಮಿಶ್ರಿತ ಪೆಟ್ರೋಲ್ ಭಾರತದ ಇಂಧನ ಭದ್ರತೆ, ರೈತರ ಆದಾಯ ಮತ್ತು ಮಾಲಿನ್ಯ ನಿಯಂತ್ರಣದ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಬಹುದು. ಆದರೆ ಇದರ ಯಶಸ್ಸು ಪೆಟ್ರೋಲ್ನಲ್ಲಿ ಎಥೆನಾಲ್ ಪ್ರಮಾಣ ಹೆಚ್ಚಿಸುವುದರಿಂದ ಮಾತ್ರ ಸಾಧ್ಯವಿಲ್ಲ. ನೀರಿನ ಸಮರ್ಪಕ ನಿರ್ವಹಣೆ, ಸುಸ್ಥಿರ ಕೃಷಿ ಪದ್ಧತಿಗಳು, ಇಂಧನದ ಗುಣಮಟ್ಟ, ಹಳೆಯ ವಾಹನಗಳ ಹೊಂದಾಣಿಕೆ ಮತ್ತು ಗ್ರಾಹಕರಿಗೆ ಸರಿಯಾದ ಮಾಹಿತಿ ನೀಡುವುದೂ ಅಷ್ಟೇ ಮುಖ್ಯವಾಗಿದೆ.
