ನವದೆಹಲಿ: ಮಾಜಿ ಪ್ರಧಾನಿ ರಾಜೀವ್ ಗಾಂಧಿ(Rajiv Gandhi) ಮತ್ತು ಸೋನಿಯಾ ಗಾಂಧಿ(Sonia Gandhi) ಅವರ ನಡುವಿನ ಆಳವಾದ ಪ್ರೀತಿ ಮತ್ತು ಅನ್ಯೋನ್ಯ ದಾಂಪತ್ಯ ಜೀವನದ ಕುರಿತು ಪುತ್ರ ರಾಹುಲ್ ಗಾಂಧಿ (Rahul Gandhi) ಹಂಚಿಕೊಂಡಿರುವ ಬಾಲ್ಯದ ನೆನಪುಗಳು ಇದೀಗ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿವೆ.
ದೆಹಲಿಯಲ್ಲಿ ಸೋಮವಾರ ನಡೆದ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ ‘ಬಿಲಾಂಗಿಂಗ್: ಎ ಜರ್ನಿ ಆಫ್ ಲವ್’ (Belonging: A Journey of Love) ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ರಾಹುಲ್ ಗಾಂಧಿ ತಮ್ಮ ಪೋಷಕರ ಬಾಂಧವ್ಯದ ಹಲವು ಅಪರೂಪದ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ.
ಅಪ್ಪನ ತೊಡೆಯ ಮೇಲೆ ಕುಳಿತಿರುತ್ತಿದ್ದರು
ಬಾಲ್ಯದ ದಿನಗಳನ್ನು ಮೆಲುಕು ಹಾಕಿದ ರಾಹುಲ್ ಗಾಂಧಿ, “ನಮ್ಮ ಮನೆಯಲ್ಲಿ ಪ್ರತಿದಿನ ಊಟದ ಸಮಯದಲ್ಲಿ ತಾಯಿ ಸೋನಿಯಾ ಗಾಂಧಿ ಅವರು ತಂದೆ ರಾಜೀವ್ ಗಾಂಧಿ ಅವರ ತೊಡೆಯ ಮೇಲೆ ಕುಳಿತಿರುತ್ತಿದ್ದರು. ನನ್ನ ಬಾಲ್ಯದಲ್ಲಿ ಪ್ರಪಂಚದ ಎಲ್ಲಾ ಮನೆಗಳಲ್ಲೂ ತಂದೆ-ತಾಯಿ ಹೀಗೆಯೇ ಅನ್ಯೋನ್ಯವಾಗಿ ಕುಳಿತಿರುತ್ತಾರೆ ಎಂದು ನಾನು ಭಾವಿಸಿದ್ದೆ. ಆದರೆ, ದೊಡ್ಡವನಾದ ಮೇಲೆ ನನ್ನ ಸ್ನೇಹಿತರ ಮನೆಗಳಿಗೆ ಹೋದಾಗ ಅಲ್ಲಿನ ಪೋಷಕರು ಬೇರೆ ಬೇರೆಯಾಗಿ ಕುಳಿತಿರುವುದನ್ನು ಕಂಡು ನನಗೆ ಆಶ್ಚರ್ಯವಾಗಿತ್ತು” ಎಂದು ನಗುತ್ತಾ ಹೇಳಿದ್ದಾರೆ. ಇದನ್ನೂ ಓದಿ: ಅಪ್ಪ, ಅಮ್ಮ ಭೇಟಿಯಾಗಿದ್ದ ರೆಸ್ಟೋರೆಂಟ್ಗೆ ಗರ್ಲ್ಫ್ರೆಂಡ್ ಜೊತೆ ಹೋಗಿದ್ದೆ – ಮೊದಲ ಬಾರಿ ಗೆಳತಿ ಬಗ್ಗೆ ರಾಹುಲ್ ಗಾಂಧಿ ಮಾತು
🚨 RAHUL GANDHI – “At every meal, my mother used to sit on my father’s lap. I thought it was completely normal and would be shocked whenever I saw that this wasn’t the case at any of my friends’ homes during lunch or dinner” https://t.co/hF46Ofww0b
— News Algebra (@NewsAlgebraIND) November 16, 2026
ಒಂದೇ ಒಂದು ಜಗಳ:
ತಮ್ಮ ತಂದೆ-ತಾಯಿಯ ನಡುವೆ ಅಪಾರ ಪ್ರೀತಿಯಿದ್ದ ಕಾರಣ, ಅವರಿಬ್ಬರೂ ಜಗಳವಾಡಿದ್ದನ್ನು ತಾವು ನೋಡಿದ್ದೇ ಅಪರೂಪ ಎಂದು ರಾಹುಲ್ ತಿಳಿಸಿದರು. “ನನಗೆ ನೆನಪಿರುವಂತೆ ಅವರಿಬ್ಬರ ನಡುವೆ ಜಗಳವಾಗಿದ್ದು ಒಂದೇ ಒಂದು ಬಾರಿ. ಅದು ಕೂಡ ಬಾಲ್ಯದಲ್ಲಿ ನನಗೆ ಮತ್ತು ಸಹೋದರಿ ಪ್ರಿಯಾಂಕಾಗೆ ಆಟವಾಡಲು ಕಂಪ್ಯೂಟರ್ ಕೊಡಿಸುವ ವಿಚಾರದಲ್ಲಿ ಭಿನ್ನಾಭಿಪ್ರಾಯ ಮೂಡಿತ್ತು. ಅದನ್ನು ಬಿಟ್ಟರೆ ಅವರಿಬ್ಬರೂ ಪರಸ್ಪರ ಅಷ್ಟೊಂದು ಪ್ರೀತಿ ಮತ್ತು ಗೌರವದಿಂದ ಬದುಕಿದ್ದರು” ಎಂದು ರಾಹುಲ್ ಸ್ಮರಿಸಿದರು.
ಇದೇ ವೇಳೆ ಇಂಗ್ಲೆಂಡ್ನ ಕೇಂಬ್ರಿಡ್ಜ್ನಲ್ಲಿ ರಾಜೀವ್ ಮತ್ತು ಸೋನಿಯಾ ಮೊದಲ ಬಾರಿಗೆ ಭೇಟಿಯಾದ ರೆಸ್ಟೋರೆಂಟ್ಗೆ ತಾವು ಭೇಟಿ ನೀಡಿದ್ದ ಕ್ಷಣವನ್ನೂ ರಾಹುಲ್ ನೆನಪಿಸಿಕೊಂಡರು. ಕೇಂಬ್ರಿಡ್ಜ್ನ ರೆಸ್ಟೋರೆಂಟ್ ಮೊದಲ ಬಾರಿಗೆ ಇಬ್ಬರೂ ಭೇಟಿಯಾಗಿ ಪ್ರೀತಿಯಲ್ಲಿ ಬಿದ್ದಿದ್ದರು. ತಾವು ಕೇಂಬ್ರಿಡ್ಜ್ನಲ್ಲಿ ವ್ಯಾಸಂಗ ಮಾಡುತ್ತಿದ್ದಾಗ ಆ ಐತಿಹಾಸಿಕ ಸ್ಥಳಕ್ಕೆ ಭೇಟಿ ನೀಡಿ, ತಮ್ಮ ಪೋಷಕರ ಪ್ರೇಮಕಥೆ ಆರಂಭವಾದ ಕ್ಷಣಗಳನ್ನು ನೆನೆದು ಭಾವುಕರಾಗಿದ್ದಾಗಿ ರಾಹುಲ್ ಹಂಚಿಕೊಂಡಿದ್ದಾರೆ.
Sorry, Ma’am, he couldn’t spare you the embarrassment even on such a special day of your life. The nation figured it out long ago. Hopefully you’ll see it now too; this product is beyond launching and relaunching
— Himanta Biswa Sarma (@himantabiswa) November 16, 2026
ಬಿಜೆಪಿ ನಾಯಕರ ಟೀಕೆ:
ರಾಹುಲ್ ಗಾಂಧಿ ಅವರು ತಮ್ಮ ತಂದೆ-ತಾಯಿಯ ಕುರಿತು ಮಾತನಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ. ಕಾಂಗ್ರೆಸ್ ಬೆಂಬಲಿಗರು ಇದನ್ನು ಸುಂದರ ಕೌಟುಂಬಿಕ ಬಾಂಧವ್ಯ ಎಂದು ಶ್ಲಾಘಿಸುತ್ತಿದ್ದರೆ, ಮತ್ತೊಂದೆಡೆ ಬಿಜೆಪಿ ನಾಯಕರು ಇದನ್ನು ರಾಜಕೀಯವಾಗಿ ಟೀಕಿಸಿದ್ದಾರೆ. ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸೇರಿದಂತೆ ಹಲವು ಬಿಜೆಪಿ ಮುಖಂಡರು ರಾಹುಲ್ ಹೇಳಿಕೆಗೆ ವ್ಯಂಗ್ಯವಾಡಿದ್ದು, ಸಾರ್ವಜನಿಕ ವೇದಿಕೆಯಲ್ಲಿ ಇಂತಹ ವೈಯಕ್ತಿಕ ವಿಚಾರಗಳನ್ನು ಪ್ರಸ್ತಾಪಿಸಿರುವುದಕ್ಕೆ ಟೀಕಾಪ್ರಹಾರ ನಡೆಸಿದ್ದಾರೆ.
“ಕ್ಷಮಿಸಿ ಮೇಡಂ, ನಿಮ್ಮ ಜೀವನದ ಇಂತಹ ವಿಶೇಷ ದಿನದಂದೂ ಅವರು ನಿಮಗೆ ಮುಜುಗರ ತರುವುದನ್ನು ತಪ್ಪಿಸಲಿಲ್ಲ. ಇಡೀ ದೇಶಕ್ಕೆ ಈ ಸತ್ಯ ಬಹಳ ಹಿಂದೆಯೇ ಅರ್ಥವಾಗಿದೆ. ಈಗಲಾದರೂ ನಿಮಗೆ ಇದು ಅರ್ಥವಾಗಬಹುದು ಎಂದು ಭಾವಿಸುತ್ತೇನೆ; ಈ ಪ್ರಾಡಕ್ಟ್ ಪದೇ ಪದೇ ಲಾಂಚ್ ಮತ್ತು ರೀ-ಲಾಂಚ್ ಮಾಡುವುದನ್ನೂ ಮೀರಿದೆ” ಎಂದು ಅಸ್ಸಾಂ ಸಿಎಂ ಬರೆದಿದ್ದಾರೆ.
