-ಡಿ.1ರಂದು ಕರಡು ಪಟ್ಟಿ ಪ್ರಕಟ, ಜ.20ರಂದು ಅಂತಿಮ ಪಟ್ಟಿ ಬಿಡುಗಡೆ
ನವದೆಹಲಿ: ಕರ್ನಾಟಕ (Karnataka) ಮತ್ತು ಮೇಘಾಲಯ (Meghalaya) ರಾಜ್ಯಗಳಲ್ಲಿ 2027ರ ಜನವರಿ 1 ಅನ್ನು ಅರ್ಹತಾ ದಿನಾಂಕವಾಗಿ ಪರಿಗಣಿಸಿ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ (SSR) ನಡೆಸುವಂತೆ ಕೇಂದ್ರ ಚುನಾವಣಾ ಆಯೋಗ ಆದೇಶಿಸಿದೆ.
ಈ ಸಂಬಂಧ ಎರಡೂ ರಾಜ್ಯಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ಆಯೋಗ ಪತ್ರ ಬರೆದಿದ್ದು, ಅರ್ಹ ಮತದಾರರ ಹೆಸರು ಸೇರ್ಪಡೆ, ತಿದ್ದುಪಡಿ ಹಾಗೂ ಮತದಾರರ ಪಟ್ಟಿಯಲ್ಲಿನ ಲೋಪಗಳನ್ನು ಸರಿಪಡಿಸಲು ಸೂಚಿಸಿದೆ. ಯುವ ಮತದಾರರು ಹಾಗೂ ಮೊದಲ ಬಾರಿಗೆ ಮತದಾನಕ್ಕೆ ಅರ್ಹರಾಗುವವರ ಹೆಸರು ನೋಂದಣಿಗೆ ವಿಶೇಷ ಆದ್ಯತೆ ನೀಡುವಂತೆ ತಿಳಿಸಿದೆ. ಇದನ್ನೂ ಓದಿ: ದಕ್ಷಿಣ ಪಿನಾಕಿನಿ ನದಿಗೆ ಹಾರಿ ಮಹಿಳೆ ಆತ್ಮಹತ್ಯೆ – ಮೃತದೇಹ ಹೊರತೆಗೆಯಲು ಬಂದ ವ್ಯಕ್ತಿಯೂ ನೀರಿನಲ್ಲಿ ಮುಳುಗಿ ಸಾವು
ಆಯೋಗ ಪ್ರಕಟಿಸಿರುವ ವೇಳಾಪಟ್ಟಿಯ ಪ್ರಕಾರ, ನವೆಂಬರ್ 23ರೊಳಗೆ ಮತಗಟ್ಟೆಗಳ ತರ್ಕಬದ್ಧ ಮರುಹೊಂದಾಣಿಕೆ ಕಾರ್ಯ ಪೂರ್ಣಗೊಳಿಸಬೇಕು. ಡಿಸೆಂಬರ್ 1ರಂದು ಕರಡು ಮತದಾರರ ಪಟ್ಟಿ ಪ್ರಕಟವಾಗಲಿದ್ದು, ಅಂದಿನಿಂದ ಡಿಸೆಂಬರ್ 31ರವರೆಗೆ ಹೆಸರು ಸೇರ್ಪಡೆ, ತಿದ್ದುಪಡಿ ಮತ್ತು ಆಕ್ಷೇಪಣೆ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ. ಸ್ವೀಕೃತ ಅರ್ಜಿಗಳು ಹಾಗೂ ಆಕ್ಷೇಪಣೆಗಳನ್ನು 2027ರ ಜನವರಿ 14ರೊಳಗೆ ವಿಲೇವಾರಿ ಮಾಡಬೇಕು. ಜನವರಿ 20ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುತ್ತದೆ.
ಇದರ ಜೊತೆಗೆ 2027ರ ಏಪ್ರಿಲ್ 1, ಜುಲೈ 1 ಮತ್ತು ಅಕ್ಟೋಬರ್ 1ರ ಅರ್ಹತಾ ದಿನಾಂಕಗಳನ್ನು ಆಧರಿಸಿಯೂ ಮುಂಗಡ ಅರ್ಜಿಗಳನ್ನು ಸ್ವೀಕರಿಸಲು ಚುನಾವಣಾ ಆಯೋಗ ಅವಕಾಶ ನೀಡಿದೆ. ಈ ಅರ್ಜಿಗಳನ್ನು ಸಂಬಂಧಿತ ತ್ರೈಮಾಸಿಕ ಅವಧಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ.ಇದನ್ನೂ ಓದಿ: ಧನ್ವೀರ್-ವಿಜಯಲಕ್ಷ್ಮಿ ಜಟಾಪಟಿ ಕೇಸ್| ನಟನಿಗೆ ಬಿಗ್ ರಿಲೀಫ್
ಮತದಾರರ ಪಟ್ಟಿಗೆ ಹೊಸದಾಗಿ ಹೆಸರು ಸೇರ್ಪಡೆಗೊಳಿಸಲು ನಮೂನೆ-6, ಹೆಸರು ಸೇರ್ಪಡೆ ಅಥವಾ ಅಳಿಸುವಿಕೆಗೆ ಆಕ್ಷೇಪಣೆ ಸಲ್ಲಿಸಲು ನಮೂನೆ-7 ಹಾಗೂ ವಿಳಾಸ ಬದಲಾವಣೆ, ವಿವರಗಳ ತಿದ್ದುಪಡಿ ಮತ್ತು ಮತದಾರರ ಗುರುತಿನ ಚೀಟಿ ಬದಲಾವಣೆಗೆ ನಮೂನೆ-8 ಬಳಸುವಂತೆ ಸೂಚಿಸಲಾಗಿದೆ. ಆಧಾರ್ ಸಂಖ್ಯೆ ನೀಡುವುದು ಸ್ವಯಂಪ್ರೇರಿತವಾಗಿದ್ದು, ಆಧಾರ್ ನೀಡದ ಕಾರಣಕ್ಕೆ ಹೆಸರು ಸೇರ್ಪಡೆ ಅರ್ಜಿಯನ್ನು ತಿರಸ್ಕರಿಸುವಂತಿಲ್ಲ ಅಥವಾ ಪಟ್ಟಿಯಲ್ಲಿರುವ ಹೆಸರನ್ನು ಅಳಿಸುವಂತಿಲ್ಲ ಎಂದು ಸ್ಪಷ್ಟಪಡಿಸಿದೆ.
ಮತದಾರರ ಪಟ್ಟಿಯಲ್ಲಿ ಮೃತಪಟ್ಟವರು, ಶಾಶ್ವತವಾಗಿ ಸ್ಥಳಾಂತರಗೊಂಡವರು ಹಾಗೂ ಒಂದಕ್ಕಿಂತ ಹೆಚ್ಚು ಬಾರಿ ನೋಂದಣಿಯಾದವರ ಹೆಸರುಗಳನ್ನು ನಿಯಮಾನುಸಾರ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು. ಯಾವುದೇ ಅರ್ಹ ಮತದಾರರ ಹೆಸರು ಕೈಬಿಡದಂತೆ ಹಾಗೂ ಅನರ್ಹರ ಹೆಸರು ಸೇರ್ಪಡೆಯಾಗದಂತೆ ಎಚ್ಚರಿಕೆ ವಹಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ.ಇದನ್ನೂ ಓದಿ: ಮುಂಬೈನಲ್ಲಿ 200 ಜನ ರೆಡಿಯಾಗಿದ್ದಾರೆ – ಅಮಿತಾಬ್ ಬಚ್ಚನ್ಗೆ ಗ್ಯಾಂಗ್ಸ್ಟರ್ ಗೋಲ್ಡಿ ಧಿಲ್ಲೋನ್ನಿಂದ ಜೀವ ಬೆದರಿಕೆ
ತಪ್ಪಾಗಿ ಹೆಸರು ಅಳಿಸುವುದನ್ನು ತಡೆಯಲು ವಿಶೇಷ ಪರಿಶೀಲನಾ ಕ್ರಮಗಳನ್ನೂ ಜಾರಿಗೊಳಿಸಲಾಗಿದೆ. ಒಂದು ಮತಗಟ್ಟೆಯ ಒಟ್ಟು ಮತದಾರರ ಪೈಕಿ ಶೇ.2ಕ್ಕಿಂತ ಹೆಚ್ಚು ಹೆಸರುಗಳನ್ನು ಅಳಿಸುವ ಪ್ರಸ್ತಾವನೆ ಇದ್ದರೆ ಅಥವಾ ಒಬ್ಬರೇ ಐದಕ್ಕಿಂತ ಹೆಚ್ಚು ಹೆಸರುಗಳ ಅಳಿಸುವಿಕೆಗೆ ಆಕ್ಷೇಪಣೆ ಸಲ್ಲಿಸಿದ್ದರೆ, ಸಂಬಂಧಪಟ್ಟ ಚುನಾವಣಾ ನೋಂದಣಾಧಿಕಾರಿ ಖುದ್ದಾಗಿ ಪರಿಶೀಲನೆ ನಡೆಸಬೇಕು.
ಮತದಾರರ ಅನುಕೂಲಕ್ಕಾಗಿ ಜಿಲ್ಲಾ ಮತ್ತು ವಿಧಾನಸಭಾ ಕ್ಷೇತ್ರಗಳ ಮಟ್ಟದಲ್ಲಿ ಸಹಾಯ ಕೇಂದ್ರಗಳನ್ನು ಸ್ಥಾಪಿಸುವಂತೆಯೂ ಆಯೋಗ ಸೂಚಿಸಿದೆ. ವಲಸೆ ಕಾರ್ಮಿಕರು, ನಿರಾಶ್ರಿತರು, ಮಹಿಳೆಯರು, ಹಿರಿಯ ನಾಗರಿಕರು, ಅಂಗವಿಕಲರು ಹಾಗೂ ದುರ್ಬಲ ವರ್ಗಗಳ ಮತದಾರರ ನೋಂದಣಿಗೆ ವಿಶೇಷ ಅಭಿಯಾನ ನಡೆಸುವಂತೆ ನಿರ್ದೇಶನ ನೀಡಿದೆ. ಮತದಾರರು ಆನ್ಲೈನ್ನಲ್ಲಿ ವೋಟರ್ ಸರ್ವಿಸ್ ಪೋರ್ಟಲ್ ಅಥವಾ ಇಸಿಐನೆಟ್ ಆಪ್ ಮೂಲಕವೂ ಅರ್ಜಿ ಸಲ್ಲಿಸಬಹುದಾಗಿದೆ.ಇದನ್ನೂ ಓದಿ: ಮೇಕೆದಾಟು ಯೋಜನೆ ನಮ್ಮ ಹಕ್ಕು, ಹೆಚ್ಡಿಕೆ ನೇತೃತ್ವದಲ್ಲೇ ದೆಹಲಿಗೆ ಹೋಗೋಣ, ಅನುಮತಿ ಕೊಡಿಸಲಿ: ಡಿ.ಕೆ.ಸುರೇಶ್
