ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯ (Delhi) ಪಹರ್ಗಂಜ್ (Paharganj) ಪ್ರದೇಶದಲ್ಲಿ ಭಾನುವಾರ ಸಂಜೆ ನಿರ್ಮಾಣ ಹಂತದಲ್ಲಿದ್ದ ಕಟ್ಟಡದ ಮೇಲ್ಛಾವಣಿಯ ಸ್ಲ್ಯಾಬ್ ಕುಸಿದು (Roof Slab Collapse) ಎಂಟು ಮಂದಿ ಗಾಯಗೊಂಡಿದ್ದಾರೆ.
ಪಹರ್ಗಂಜ್ನ ಸಂಗತ್ರಾಶನ್ ಪ್ರದೇಶದಲ್ಲಿ ಸರ್ಕಾರಿ ಬಾಲಕಿಯರ ಹಿರಿಯ ಪ್ರೌಢಶಾಲೆಯ ಎದುರಿನ ಕಟ್ಟಡದಲ್ಲಿ ಈ ಘಟನೆ ನಡೆದಿದೆ. ಇಲ್ಲಿ ಹೋಟೆಲ್ ನಿರ್ಮಾಣ ಕಾರ್ಯ ನಡೆಯುತ್ತಿತ್ತು. ಕಟ್ಟಡದ ಎರಡನೇ ಮಹಡಿಯ ಮೇಲ್ಛಾವಣಿಯ ಸ್ಲ್ಯಾಬ್ ಹಾಕುವ ಸಂದರ್ಭದಲ್ಲಿ ಕಟ್ಟಡದ ಒಂದು ಭಾಗ ಕುಸಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕೌಟುಂಬಿಕ ಕಲಹ – ವಿಷ ಸೇವಿಸಿ ಕಿರಿಯ ಮಹಿಳಾ ಆರೋಗ್ಯ ಸುರಕ್ಷಾಧಿಕಾರಿ ಆತ್ಮಹತ್ಯೆ
ಕಟ್ಟಡದ ಒಂದು ಭಾಗ ಕುಸಿದಿರುವ ಬಗ್ಗೆ ಪಹರ್ಗಂಜ್ ಪೊಲೀಸ್ ಠಾಣೆಗೆ ಪೊಲೀಸ್ ನಿಯಂತ್ರಣ ಕೊಠಡಿಯಿಂದ ಕರೆ ಬಂದಿತ್ತು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ರಕ್ಷಣಾ ಕಾರ್ಯಾಚರಣೆ ಆರಂಭಿಸಿದರು. ಘಟನೆಯಲ್ಲಿ ಎಂಟು ಮಂದಿ ಗಾಯಗೊಂಡಿದ್ದು, ಅವರನ್ನು ಚಿಕಿತ್ಸೆಗಾಗಿ ಲೇಡಿ ಹಾರ್ಡಿಂಜ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಗೊಂಡವರನ್ನು ಶೇಖ್ ಸದ್ದಾಂ (37), ಶೇಖ್ ರಾಜಾ (20), ಮೊಹಮ್ಮದ್ ಸುಹೇಲ್ (50), ಸಂಜುದ್ ಖಾನ್ (40), ಗೌತಮ್ ಯಾದವ್ (28), ವರುಣ್ ಯಾದವ್ (36), ರಾಜಾ (36) ಮತ್ತು ಮಂಟ್ಸು (40) ಎಂದು ಗುರುತಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದನ್ನೂ ಓದಿ: ನ.17ರಂದು ಮೇಲುಕೋಟೆಯಲ್ಲಿ ಅದ್ಧೂರಿ ರಾಜಮುಡಿ ಕಿರೀಟಧಾರಣಾ ಮಹೋತ್ಸವ
ಪ್ರಾಥಮಿಕ ಮಾಹಿತಿಯ ಪ್ರಕಾರ, ಗಾಯಗೊಂಡವರಲ್ಲಿ ಕೆಲವರಿಗೆ ಮೂಳೆ ಮುರಿತವಾಗಿದ್ದು, ಇನ್ನು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳ ವೈದ್ಯಕೀಯ ತಪಾಸಣೆ ಹಾಗೂ ಚಿಕಿತ್ಸೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದ್ದಾರೆ. ಇದನ್ನೂ ಓದಿ: ಸ್ಪೇಸ್ಎಕ್ಸ್ ಸಾಧನೆ – ರಾಕೆಟ್ ಉಡಾವಣಾ ಸ್ಥಳದಲ್ಲೇ ಬೃಹತ್ ಸ್ಟಾರ್ಶಿಪ್ ಯಶಸ್ವಿ ಲ್ಯಾಂಡಿಂಗ್!
ಪ್ರಾಥಮಿಕ ಪರಿಶೀಲನೆ ವೇಳೆ ಕಟ್ಟಡದ ಆಧಾರ ಸ್ತಂಭಗಳು ತೇವವಾಗಿರುವುದು ಕಂಡುಬಂದಿದೆ. ಅಲ್ಲದೆ, ಕಟ್ಟಡ ಒಂದು ಬದಿಗೆ ವಾಲಿದಂತೆ ಕಾಣಿಸಿಕೊಂಡಿದ್ದು, ಅದರ ಸ್ಥಿರತೆಯ ಬಗ್ಗೆ ಆತಂಕ ವ್ಯಕ್ತವಾಗಿದೆ. ಕಟ್ಟಡ ಕುಸಿಯಲು ಕಾರಣವಾದ ಪರಿಸ್ಥಿತಿಗಳ ಕುರಿತು ತನಿಖೆ ನಡೆಸಲಾಗುತ್ತಿದ್ದು, ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೊಲೀಸ್ ಅಧಿಕಾರಿ ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ರಾಜ್ಯ ರಾಜಕಾರಣಕ್ಕೆ ಬರುವ ಬಗ್ಗೆ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ಮಾಡುತ್ತೇನೆ: ಹೆಚ್ಡಿಕೆ
ಇನ್ನು ಕಟ್ಟಡ ಕುಸಿತದ ಬಗ್ಗೆ ಸಂಜೆ 4:40ಕ್ಕೆ ದೆಹಲಿ ಅಗ್ನಿಶಾಮಕ ಇಲಾಖೆಗೆ ಕರೆ ಬಂದಿತ್ತು. ತಕ್ಷಣ ಎರಡು ಅಗ್ನಿಶಾಮಕ ವಾಹನಗಳು ಹಾಗೂ ತುರ್ತು ಪ್ರತಿಕ್ರಿಯಾ ತಂಡವನ್ನು ಸ್ಥಳಕ್ಕೆ ಕಳುಹಿಸಲಾಗಿತ್ತು. ಅಗ್ನಿಶಾಮಕ ಇಲಾಖೆ ಅಧಿಕಾರಿಗಳ ಪ್ರಕಾರ, ನಿರ್ಮಾಣ ಕಾರ್ಯ ನಡೆಯುತ್ತಿದ್ದ ಸಂದರ್ಭದಲ್ಲಿ ಮೇಲ್ಛಾವಣಿಯ ಸ್ಲ್ಯಾಬ್ ಕುಸಿದಿರುವ ಬಗ್ಗೆ ಮಾಹಿತಿ ಬಂದಿತ್ತು. ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ತಲುಪುವ ಮೊದಲೇ ಪೊಲೀಸ್ ನಿಯಂತ್ರಣ ಕೊಠಡಿಯ ಸಿಬ್ಬಂದಿ ಹಾಗೂ ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ಸ್ಥಳಾಂತರಿಸಿದ್ದರು. ಇದನ್ನೂ ಓದಿ: ಉಡುಪಿ | ಬೆಂಗಳೂರಿಗೆ ಹೊರಟಿದ್ದ ಟೆಕ್ಕಿ ಅಪಘಾತಕ್ಕೆ ಬಲಿ
