ದೈನಂದಿನ ಕಚೇರಿ ಕೆಲಸದಿಂದ ಹಿಡಿದು ಸರ್ಕಾರದ ಪ್ರಮುಖ ಇಲಾಖೆಗಳು ಮತ್ತು ವಿಮಾನಯಾನ ಸೇವೆಗಳವರೆಗೆ ಇಂದು ಇಡೀ ಜಗತ್ತು ಡಿಜಿಟಲ್ ಕ್ಲೌಡ್ ಮೇಲೆಯೇ ಹೆಚ್ಚು ಅವಲಂಬಿತವಾಗಿದೆ. ಆದರೆ, ಇಂತಹ ತಾಂತ್ರಿಕ ವ್ಯವಸ್ಥೆಗಳ ಬೆನ್ನೆಲುಬಾಗಿರುವ ದೈತ್ಯ ತಂತ್ರಜ್ಞಾನ ಸಂಸ್ಥೆ ಮೈಕ್ರೋಸಾಫ್ಟ್ನ ಸೇವೆಗಳಲ್ಲಿ ಕೆಲಕಾಲ ಉಂಟಾದ ಜಾಗತಿಕ ವ್ಯತ್ಯಯ ಮತ್ತೊಮ್ಮೆ ದೊಡ್ಡ ಆತಂಕ ಸೃಷ್ಟಿಸಿತ್ತು.
ಕೇವಲ ಒಂದಷ್ಟು ಇಮೇಲ್ಗಳು ಅಥವಾ ಆಫೀಸ್ ಅಪ್ಲಿಕೇಷನ್ಗಳು ಸ್ಥಗಿತಗೊಂಡಿದ್ದಲ್ಲ, ಬದಲಿಗೆ ಈ ದಿಢೀರ್ ತಾಂತ್ರಿಕ ದೋಷವು ವಿಶ್ವದಾದ್ಯಂತ ವ್ಯವಹಾರಗಳು, ಆಡಳಿತಾತ್ಮಕ ಕೆಲಸಗಳು ಮತ್ತು ಕೋಟ್ಯಂತರ ಬಳಕೆದಾರರನ್ನು ಕೆಲಕಾಲ ಕಂಗಾಲಾಗಿಸಿತ್ತು. ಡಿಜಿಟಲ್ ಲೋಕದ ಈ ಅವಲಂಬನೆ ಎಷ್ಟು ಸುಲಭವಾಗಿ ಇಡೀ ವ್ಯವಸ್ಥೆಯನ್ನು ಸ್ತಬ್ಧಗೊಳಿಸಬಲ್ಲದು ಎಂಬುದಕ್ಕೆ ಈ ಘಟನೆ ಕನ್ನಡಿ ಹಿಡಿದಿದೆ. ಹಾಗಾದರೆ, ಈ ಜಾಗತಿಕ ವ್ಯತ್ಯಯಕ್ಕೆ ಅಸಲಿ ಕಾರಣವೇನು? ತಂತ್ರಜ್ಞಾನ ದೈತ್ಯರ ಈ ಯಡವಟ್ಟು ಜಗತ್ತಿಗೆ ನೀಡಿರುವ ಪಾಠವೇನು? ಸಂಪೂರ್ಣ ಮಾಹಿತಿ ಇಲ್ಲಿದೆ?

ಏನಿದು ಮೈಕ್ರೋಸಾಫ್ಟ್?
ಮೈಕ್ರೋಸಾಫ್ಟ್ (Microsoft) ಜಾಗತಿಕ ಮಟ್ಟದಲ್ಲಿ ಲಕ್ಷಾಂತರ ಬಳಕೆದಾರರಿಗೆ ಮತ್ತು ಸಂಸ್ಥೆಗಳಿಗೆ ಕ್ಲೌಡ್ ಕಂಪ್ಯೂಟಿಂಗ್, ಇಮೇಲ್ (ಔಟ್ಲುಕ್), ಆನ್ಲೈನ್ ಸಭೆಗಳು (ಟೀಮ್ಸ್) ಹಾಗೂ ಕೃತಕ ಬುದ್ಧಿಮತ್ತೆ (ಕೋಪೈಲಟ್) ಮುಂತಾದ ಪ್ರಮುಖ ಡಿಜಿಟಲ್ ಸೇವೆಗಳನ್ನು ಒದಗಿಸುತ್ತದೆ. ಈ ಎಲ್ಲಾ ಸೇವೆಗಳು ವಿಶ್ವದಾದ್ಯಂತ ಹರಡಿರುವ ಅತ್ಯಾಧುನಿಕ ಡೇಟಾ ಕೇಂದ್ರಗಳ (Data Centres) ಸರ್ವರ್ಗಳ ಮೂಲಕ ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ. ಆದರೆ ನ.12ರಂದು ಮೈಕ್ರೋಸಾಫ್ಟ್ನ ಬಹು ಡೇಟಾ ಕೇಂದ್ರಗಳಲ್ಲಿ ಹಠಾತ್ ಸರ್ವರ್ ವೈಫಲ್ಯ ಉಂಟಾಗಿ, ಕಂಪನಿಯ ಪ್ರಮುಖ ಸೇವೆಗಳ ಕಾರ್ಯನಿರ್ವಹಣೆಯಲ್ಲಿ ವ್ಯತ್ಯಯ ಕಂಡುಬಂದಿತ್ತು. ಸದ್ಯ ಸಮಸ್ಯೆ ಸರಿಯಾಗಿದೆ.
ಏಕಾಏಕಿ ಸಮಸ್ಯೆ ಎದುರಾಗಿದ್ದು ಏಕೆ?
ಪ್ರಮುಖ ತಂತ್ರಜ್ಞಾನ ಕಂಪನಿಗಳ ಮೇಲೆ ಜಗತ್ತು ಎಷ್ಟು ಅವಲಂಬಿತವಾಗಿದೆ ಎಂಬುದನ್ನು ಪ್ರಮುಖ ಮೈಕ್ರೋಸಾಫ್ಟ್ ವ್ಯತ್ಯಯವು ಬಹಿರಂಗಪಡಿಸಿದೆ. ಔಟ್ಲುಕ್, ಟೀಮ್ಸ್ ಮತ್ತು ಕೋಪೈಲಟ್ ಸೇರಿದಂತೆ ಮೈಕ್ರೋಸಾಫ್ಟ್ ಸೇವೆಗಳು ಸ್ಥಗಿತಗೊಂಡ ನಂತರ, ವ್ಯಾಪಾರಗಳು ಮತ್ತು ಸರ್ಕಾರಿ ಇಲಾಖೆಗಳಿಂದ ಹಿಡಿದು ಆಸ್ಪತ್ರೆಗಳು ಮತ್ತು ಸಾರ್ವಜನಿಕ ಸೇವೆಗಳವರೆಗೆ ಹಲವಾರು ದೇಶಗಳ ಸಂಸ್ಥೆಗಳು ಅಡಚಣೆಯನ್ನು ಎದುರಿಸಿದವು.

ಬಹು ಡೇಟಾ ಕೇಂದ್ರಗಳಲ್ಲಿ ಸರ್ವರ್ ವೈಫಲ್ಯಗಳಿಗೆ ಅಡಚಣೆಯು ಲಿಂಕ್ ಆಗಿದೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.. ಹಲವಾರು ಸರ್ವರ್ಗಳ ಅಲಭ್ಯತೆಯು ಉಳಿದ ಮೂಲಸೌಕರ್ಯಗಳ ಮೇಲೆ ಹೆಚ್ಚುವರಿ ಒತ್ತಡವನ್ನು ಹೇರುವಂತೆ ಮಾಡಿತು, ಇದು ಅದರ ಸೇವೆಗಳ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿತು. ಆದರೆ ಇದು ಸೈಬರ್ ದಾಳಿ ಅಲ್ಲ ಎಂದು ಕಂಪನಿ ಹೇಳಿದೆ. ಆದಾಗ್ಯೂ, ಸಾಮಾನ್ಯ ಕಾರ್ಯಾಚರಣೆಗಳನ್ನು ಪುನಃಸ್ಥಾಪಿಸಲು ಎಂಜಿನಿಯರ್ಗಳು ಕೆಲಸ ಮಾಡುತ್ತಿದ್ದಂತೆ ನಿಖರವಾದ ಕಾರಣವನ್ನು ಇನ್ನೂ ತನಿಖೆ ಮಾಡಲಾಗುತ್ತಿದೆ.
ಸಾಮಾನ್ಯವಾಗಿ ಈ ಸರ್ವರ್ಗಳು ಕಂಪ್ಯೂಟರ್ನ ಮೆದುಳಿನಂತೆ ಕೆಲಸ ಮಾಡುತ್ತವೆ. ನಾವು ಕಳುಹಿಸುವ ಇಮೇಲ್ ಅಥವಾ ಮಾಡುವ ಕೆಲಸಗಳೆಲ್ಲವೂ ಈ ಸರ್ವರ್ಗಳ ಮೂಲಕವೇ ನಡೆಯುತ್ತವೆ. ಇದರಿಂದಾಗಿ ಮೈಕ್ರೋಸಾಫ್ಟ್ನ ಇಡೀ ಡಿಜಿಟಲ್ ವ್ಯವಸ್ಥೆಯಲ್ಲಿ ವ್ಯತ್ಯಯ ಉಂಟಾಗಿ, ಜಗತ್ತಿನಾದ್ಯಂತ ಔಟ್ಲುಕ್, ಟೀಮ್ಸ್ ಮತ್ತು ಇತರ ಸೇವೆಗಳು ಏಕಾಏಕಿ ಸಂಪೂರ್ಣವಾಗಿ ಸ್ತಬ್ಧಗೊಂಡವು.

ವಿವಿಧ ದೇಶಗಳಲ್ಲಿ ಸೇವೆ ವ್ಯತ್ಯಯ
ಈ ತಾಂತ್ರಿಕ ಅಡಚಣೆಯಿಂದಾಗಿ ಹಲವು ದೇಶಗಳು ತೀವ್ರ ತೊಂದರೆ ಅನುಭವಿಸಿದವು. ಬ್ರಿಟನ್ನಲ್ಲಿ ಪೊಲೀಸ್ ಇಲಾಖೆಯು ಸಾರ್ವಜನಿಕರಿಂದ ಆನ್ಲೈನ್ ಅಪರಾಧ ವರದಿಗಳನ್ನು ಸ್ವೀಕರಿಸಲು ಪರದಾಡಬೇಕಾಯಿತು ಮತ್ತು ರಾಷ್ಟ್ರೀಯ ಆರೋಗ್ಯ ಸೇವೆಯ ಭಾಗಗಳಿಗೂ ತೊಂದರೆಯಾಯಿತು.
ಜರ್ಮನಿಯ ರಾಷ್ಟ್ರೀಯ ರೈಲು ಕಂಪನಿಯಾದ ಡಾಯ್ಚ ಬಾನ್ ರೈಲುಗಳ ವೇಳಾಪಟ್ಟಿ ಮಾಹಿತಿಯನ್ನು ಪ್ರಯಾಣಿಕರಿಗೆ ಕಳುಹಿಸುವಲ್ಲಿ ಮತ್ತು ನಿರ್ವಹಿಸುವಲ್ಲಿ ವಿಫಲವಾಯಿತು. ಇದರೊಂದಿಗೆ ಆಸ್ಟ್ರೇಲಿಯಾ, ಜಪಾನ್, ಫ್ರಾನ್ಸ್, ನೆದರ್ಲ್ಯಾಂಡ್ಸ್, ಕೆನಡಾ ಮತ್ತು ಅಮೆರಿಕದಂತಹ ಪ್ರಮುಖ ದೇಶಗಳಲ್ಲಿ ಮೈಕ್ರೋಸಾಫ್ಟ್ ವ್ಯವಸ್ಥೆಗಳನ್ನು ನೆಚ್ಚಿಕೊಂಡಿದ್ದ ದೊಡ್ಡ ದೊಡ್ಡ ಕಂಪನಿಗಳು, ಸರ್ಕಾರಿ ಕಚೇರಿಗಳು ಹಾಗೂ ಸಾಂಸ್ಥಿಕ ಸಂವಹನಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡವು.

ಭಾರತದಲ್ಲೂ ಸಮಸ್ಯೆ:
ಭಾರತದಲ್ಲಿ ಮೈಕ್ರೋಸಾಫ್ಟ್ 365 ಅಪ್ಲಿಕೇಶನ್ಗಳಾದ ಔಟ್ಲುಕ್ (Outlook), ಟೀಮ್ಸ್ (Teams) ಮತ್ತು ಕೋಪೈಲಟ್ (CoPilot AI) ಬಳಕೆದಾರರಿಗೆ ಲಾಗಿನ್ ಮಾಡಲು ಮತ್ತು ಕಾರ್ಯನಿರ್ವಹಿಸಲು ತೀವ್ರ ತೊಂದರೆಯಾಯಿತು. ವಿಶೇಷವಾಗಿ ಕಚೇರಿ ಕೆಲಸಗಳು, ಆನ್ಲೈನ್ ಸಂವಹನ ಮತ್ತು ಇಮೇಲ್ ಸೇವೆಗಳು ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡವು.
ವಿಮಾನಯಾನ ಕ್ಷೇತ್ರದಲ್ಲೂ ಇದರ ಬಿಸಿ ತಟ್ಟಿದ್ದು, ಸ್ಪೈಸ್ಜೆಟ್ (SpiceJet) ಸೇರಿದಂತೆ ಕೆಲವು ವಿಮಾನಯಾನ ಸಂಸ್ಥೆಗಳು ದೆಹಲಿಯಿಂದ ಹೊರಡಬೇಕಿದ್ದ ವಿಮಾನಗಳನ್ನು ರದ್ದುಗೊಳಿಸಬೇಕಾಯಿತು ಮತ್ತು ಕೆಲವು ವಿಮಾನಗಳು ವಿಳಂಬವಾದವು. ಇದರೊಂದಿಗೆ ಇಂಡಿಗೋ (IndiGo) ಮತ್ತು ಆಕಾಶ ಏರ್ (Akasa Air) ಸಂಸ್ಥೆಗಳ ಗ್ರಾಹಕ ಬೆಂಬಲ ಹಾಗೂ ಇಮೇಲ್ ಸೇವೆಗಳಿಗೂ ಸ್ವಲ್ಪ ಮಟ್ಟಿಗೆ ಅಡ್ಡಿಯುಂಟಾಯಿತು.

ಐಟಿ ವಲಯ ಮತ್ತು ಕಾರ್ಪೊರೇಟ್ ಕಚೇರಿಗಳಲ್ಲಿ ಕ್ಲೌಡ್ ಆಧಾರಿತ ಪ್ರಾಜೆಕ್ಟ್ಗಳು, ಒನ್ಡ್ರೈವ್ (OneDrive) ಹಾಗೂ ಶೇರ್ಪಾಯಿಂಟ್ (SharePoint) ಮೂಲಕ ಕಡತಗಳನ್ನು (Documents) ತೆರೆಯಲು ಮತ್ತು ಎಡಿಟ್ ಮಾಡಲು ಉದ್ಯೋಗಿಗಳು ಪರದಾಡಬೇಕಾಯಿತು. ಆದಾಗ್ಯೂ, ಭಾರತದ ಕೇಂದ್ರ ಸರ್ಕಾರದ ಅಧಿಕೃತ ಸಂವಹನ ವ್ಯವಸ್ಥೆಗಳು ಮತ್ತು ಪ್ರಮುಖ ಹಣಕಾಸು ಮೂಲಸೌಕರ್ಯಗಳು (ರಿಸ್ಕ್ ಬ್ಯಾಂಕ್ ಮತ್ತು ಯುಪಿಐ ಪಾವತಿ ವ್ಯವಸ್ಥೆಗಳು) ಪ್ರತ್ಯೇಕ ವ್ಯವಸ್ಥೆ ಹೊಂದಿದ್ದರಿಂದ ಸಮಸ್ಯೆ ಕಡಿಮೆಯಿತ್ತು.
36 ಗಂಟೆ ಬಳಿಕ ಸಮಸ್ಯೆಗೆ ಪರಿಹಾರ
ತನ್ನ ಸೇವೆಗಳಿಗೆ 36 ಗಂಟೆಗಳಿಗೂ ಹೆಚ್ಚು ಕಾಲ ಅಡಚಣೆುಂಟುಮಾಡಿದ ಪ್ರಮುಖ ಜಾಗತಿಕ ವ್ಯತ್ಯಯವನ್ನು ಮೈಕ್ರೋಸಾಫ್ಟ್ ಪರಿಹರಿಸಿದೆ. ನವೆಂಬರ್ 12ರಂದು ಪ್ರಾರಂಭವಾದ ಈ ಅಡಚಣೆಯು ಹಲವಾರು ದೇಶಗಳಾದ್ಯಂತ ಬಳಕೆದಾರರ ಮೇಲೆ ಪರಿಣಾಮ ಬೀರಿತು. ಎರಡು ದಿನಗಳ ಕಾಲ ಇಮೇಲ್ಗಳು, ವರ್ಚುವಲ್ ಸಭೆಗಳು ಮತ್ತು ಕ್ಲೌಡ್ ಆಧಾರಿತ ಅಪ್ಲಿಕೇಶನ್ಗಳಿಗೆ ಪ್ರವೇಶವನ್ನು ಅಸ್ತವ್ಯಸ್ತಗೊಳಿಸಿದ ವ್ಯತ್ಯಯಕ್ಕೆ ಮೈಕ್ರೋಸಾಫ್ಟ್ ಕೊನೆಗೂ ತೆರೆ ಎಳೆದಿದೆ.
ವ್ಯತ್ಯಯವು ತಾಂತ್ರಿಕ ಸಮಸ್ಯೆಯಿಂದ ಉಂಟಾಗಿದೆ ಹೊರತು ದುರುದ್ದೇಶಪೂರ್ವಕ ಅಥವಾ ಸೈಬರ್ ಚಟುವಟಿಕೆಯಿಂದ ಅಲ್ಲ. ಜೊತೆಗೆ ಅಡಚಣೆಗೆ ಕೃತಕ ಬುದ್ಧಿಮತ್ತೆಯೂ ಕಾರಣವಲ್ಲ ಎಂದು ಮೈಕ್ರೋಸಾಫ್ಟ್ ತಿಳಿಸಿದೆ.

ವ್ಯವಹಾರಗಳಿಗೆ ‘ಪ್ಲಾನ್ ಬಿ’ ಏಕೆ ಬೇಕು?
ಮೈಕ್ರೋಸಾಫ್ಟ್ ದೈತ್ಯ ಸಂಸ್ಥೆಯಲ್ಲಿ ವ್ಯತ್ಯಯ ಉಂಟಾದಾಗ ಈ ಚರ್ಚೆ ಮುನ್ನೆಲೆ ಬಂದಿದೆ. ಕಂಪನಿಗಳ ತಮ್ಮ ಪ್ರಾಥಮಿಕ ವ್ಯವಸ್ಥೆಗಳು ವಿಫಲವಾದಾಗ ವ್ಯವಹಾರಗಳು, ಸಂವಹನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವ ಪರ್ಯಾಯ ಇಮೇಲ್ ಸೇವಾ ವ್ಯವಸ್ಥೆ ಇಟ್ಟುಕೊಂಡಿರಬೇಕು. ಮುಖ್ಯ ವ್ಯವಸ್ಥೆಯಲ್ಲಿ ವ್ಯತ್ಯಯವನ್ನು ಅನುಭವಿಸಿದಾಗ ಪರ್ಯಾಯ ವ್ಯವಸ್ಥೆಯ ಅಗತ್ಯತೆ ಇರುತ್ತದೆ.
ಸದ್ಯ ಮೈಕ್ರೋಸಾಫ್ಟ್ ಇಂಜಿನಿಯರ್ಗಳು ಸಮಸ್ಯೆಯನ್ನು ಪರಿಹರಿಸಿದ ಹಿನ್ನೆಲೆಯಲ್ಲಿ ಪ್ರಸ್ತುತ ಭಾರತದಲ್ಲೂ ಎಲ್ಲಾ ಸೇವೆಗಳು ಯಶಸ್ವಿಯಾಗಿ ಮರುಸ್ಥಾಪನೆಗೊಂಡಿವೆ. ಬಾಧಿತ ಸರ್ವರ್ಗಳನ್ನು ಸರಿಪಡಿಸಿ ಡೇಟಾ ಕೇಂದ್ರಗಳನ್ನು ಮರುಸ್ಥಾಪಿಸಿರುವುದರಿಂದ, ಪ್ರಸ್ತುತ ಈ ವ್ಯತ್ಯಯವು ಸಂಪೂರ್ಣವಾಗಿ ಬಗೆಹರಿದಿದ್ದು ಎಲ್ಲಾ ಸೇವೆಗಳು ಎಂದಿನಂತೆ ಸರಾಗವಾಗಿ ಕಾರ್ಯನಿರ್ವಹಿಸುತ್ತಿವೆ.

