– ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ
ಬೆಂಗಳೂರು: ರಾಜ್ಯದ ವಿವಿಧ ನಿಗಮ-ಮಂಡಳಿಗಳು ಹಾಗೂ ಪ್ರಾಧಿಕಾರಗಳಿಗೆ ಬುಧವಾರ 428 ಕಾರ್ಯಕರ್ತರನ್ನು ನಿರ್ದೇಶಕರು ಹಾಗೂ ಸದಸ್ಯರನ್ನಾಗಿ ನೇಮಕ ಮಾಡಿ ರಾಜ್ಯ ಸರ್ಕಾರ (Karnataka Government) ಆದೇಶ ಹೊರಡಿಸಿದೆ. ಜಾತಿ, ಪ್ರಾದೇಶಿಕತೆ ಮತ್ತು ಸಮುದಾಯಗಳ ಲೆಕ್ಕಾಚಾರದೊಂದಿಗೆ ಅಳೆದು ತೂಗಿ ಪಟ್ಟಿ ಸಿದ್ಧಪಡಿಸಲಾಗಿದ್ದರೂ, ಕಲಬುರಗಿ, ಚಿತ್ರದುರ್ಗ ಹಾಗೂ ರಾಮನಗರ ಜಿಲ್ಲೆಗಳ ನೇಮಕಾತಿಯಲ್ಲಿ ಆಗಿರುವ ಭಾರಿ ಎಡವಟ್ಟುಗಳು ಇದೀಗ ಸರ್ಕಾರಕ್ಕೆ ಮುಜುಗರ ತಂದೊಡ್ಡಿವೆ.
ಕಲಬುರಗಿಯಲ್ಲಿ ಡ್ರಗ್ಸ್ ಸರಬರಾಜು ಆರೋಪದಡಿ ಜೈಲು ಸೇರಿದ್ದ ದಕ್ಷಿಣ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಲಿಂಗರಾಜ್ ಕಣ್ಣಿ ಅವರನ್ನು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ (KKRTC) ನಿರ್ದೇಶಕರನ್ನಾಗಿ ನೇಮಕ ಮಾಡಿರುವುದು ತೀವ್ರ ಚರ್ಚೆಗೆ ಗ್ರಾಸವಾಗಿದೆ.
2025ರ ಜೂನ್ 22ರಂದು 27 ಸಾವಿರ ರೂ. ಮೌಲ್ಯದ ನಿಷೇಧಿತ 120 ಕೋಡಿನ್ ಫಾಸ್ಫೇಟ್ ಬಾಟಲಿಗಳನ್ನು ಸರಬರಾಜು ಮಾಡುತ್ತಿದ್ದ ಪ್ರಕರಣದಲ್ಲಿ ಮುಂಬೈ ಪೊಲೀಸರು ಎನ್ಡಿಪಿಎಸ್ (NDPS) ಕಾಯ್ದೆಯಡಿ ಲಿಂಗರಾಜ್ ಕಣ್ಣಿಯನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಈ ಘಟನೆಯ ಬಳಿಕ ಸ್ವತಃ ಕಾಂಗ್ರೆಸ್ ಪಕ್ಷವೇ ಅವರನ್ನು ಉಚ್ಛಾಟನೆ ಮಾಡಿತ್ತು. ಇದೀಗ ಉಚ್ಛಾಟಿತ ಹಾಗೂ ಡ್ರಗ್ಸ್ ಕೇಸ್ ಆರೋಪಿಗೆ ನಿಗಮದ ನಿರ್ದೇಶಕ ಸ್ಥಾನ ನೀಡಿರುವುದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ಚಿತ್ರದುರ್ಗದಲ್ಲಿ ಆರ್ಎಸ್ಎಸ್ ಕಾರ್ಯಕರ್ತ ಹಾಗೂ ಬಿಜೆಪಿ ನಗರ ಮಂಡಲದ ಮಾಜಿ ಅಧ್ಯಕ್ಷರಾಗಿದ್ದ ಲೀಲಾಧರ ಠಾಕೂರ್ ಅವರಿಗೆ ಕರ್ನಾಟಕ ರೇಷ್ಮೆ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನ ನೀಡಲಾಗಿದೆ. ಚಿತ್ರದುರ್ಗ ಕಾಂಗ್ರೆಸ್ ಶಾಸಕ ಕೆ.ಸಿ. ವೀರೇಂದ್ರ ಪಪ್ಪಿ ಅವರ ಆಪ್ತರಾಗಿರುವ ಠಾಕೂರ್ಗೆ ಮಣೆ ಹಾಕಿರುವುದು ಸ್ಥಳೀಯ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ರಾಮನಗರ ಜಿಲ್ಲೆಯ ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ರಾಜಕೀಯ ಜಟಾಪಟಿ ತೀವ್ರಗೊಂಡಿರುವ ಬೆನ್ನಲ್ಲೇ, ‘ಗ್ರೇಟರ್ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ’ಕ್ಕೆ ಮಾಜಿ ಶಾಸಕ ಸಿ.ಎಂ. ಲಿಂಗಪ್ಪ ಅವರ ಪುತ್ರ ಎಲ್. ಚಂದ್ರಶೇಖರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ.
ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರಿಗೆ ಅಧಿಕಾರ ನೀಡುವ ಉದ್ದೇಶದಿಂದ ಮಾಡಲಾದ ಈ ನೇಮಕಾತಿ ಪಟ್ಟಿಯಲ್ಲಿ ವಿವಾದಿತ ವ್ಯಕ್ತಿಗಳು ಹಾಗೂ ಅನ್ಯ ಪಕ್ಷದ ಹಿನ್ನೆಲೆಯುಳ್ಳವರಿಗೆ ಅವಕಾಶ ನೀಡಿರುವುದು ಕಾಂಗ್ರೆಸ್ ವಲಯದಲ್ಲೇ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ.
