ಕೋಲ್ಕತ್ತಾ: ಮಮತಾ ಬ್ಯಾನರ್ಜಿ ಅವರೊಂದಿಗೆ ಮುನಿಸಿಕೊಂಡಿರುವ ಸಹೋದರನ ಕಾಳಿ ಪೂಜೆಯಲ್ಲಿ (Kali Puja) ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಸುವೇಂದು ಅಧಿಕಾರಿ (Suvendu Adhikari) ಭಾಗಿಯಾಗಿದ್ದಾರೆ.
ಪಶ್ಚಿಮ ಬಂಗಾಳದ ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ‘ಪರಾ’ (ನೆರೆಹೊರೆ) ಎಂದು ಕರೆಯಲ್ಪಡುವ ಪ್ರದೇಶವು ನಿನ್ನೆ ಎಂದಿಗಿಂತ ಹೆಚ್ಚು ಗಿಜಿಗುಡುತ್ತಿತ್ತು. ಮುಖ್ಯಮಂತ್ರಿ ಸುವೇಂದು ಅಧಿಕಾರಿ ಅಲ್ಲಿಗೆ ಭೇಟಿ ನೀಡಿದ್ದರು. ಅವರು ಮುಖ್ಯಮಂತ್ರಿಯಾದ ನಂತರ ನೀಡಿದ ಮೊದಲ ಭೇಟಿ ಇದಾಗಿತ್ತು.
ಮಂಗಳವಾರ ಸಂಜೆ ಅವರು ಹರೀಶ್ ಚಟರ್ಜಿ ಬೀದಿಗೆ ಆಗಮಿಸಿದಾಗ, ಆ ಪ್ರದೇಶದ ಪ್ರತಿಯೊಂದು ಮನೆಯಿಂದಲೂ ಮಹಿಳೆಯರು, ವೃದ್ಧರು ಮತ್ತು ಮಕ್ಕಳು ಅವರನ್ನು ಸ್ವಾಗತಿಸಲು ಹೊರಬಂದರು. ಅನೇಕರು ಅವರ ಮೇಲೆ ಹೂವುಗಳನ್ನು ಸುರಿಸುತ್ತಿರುವುದು ಕಂಡುಬಂತು. ಈ ವೇಳೆ ಅಧಿಕಾರಿ ಅವರು ಜನರೊಂದಿಗೆ ಆತ್ಮೀಯವಾಗಿ ಮಾತನಾಡುತ್ತಿರುವುದೂ ಕಂಡುಬಂದಿತು. ಇದನ್ನೂ ಓದಿ: 11 ದಿನದಲ್ಲಿ 30 ಲಕ್ಷಕ್ಕೂ ಅಧಿಕ ಭಕ್ತರಿಂದ ಹಾಸನಾಂಬೆ ದರ್ಶನ – ಇಂದು ದೇವಾಲಯದ ಗರ್ಭಗುಡಿ ಬಾಗಿಲು ಬಂದ್
ಮಮತಾ ಬ್ಯಾನರ್ಜಿ ಅವರ ಸಹೋದರ ಸ್ವಪನ್ (ಬಾಬುನ್) ಬ್ಯಾನರ್ಜಿ ಅವರೊಂದಿಗೆ ಗುರುತಿಸಿಕೊಂಡಿರುವ ಕ್ಲಬ್ ಒಂದರ ವತಿಯಿಂದ ಆಯೋಜಿಸಲಾಗಿದ್ದ ಕಾಳಿ ಪೂಜೆಯಲ್ಲಿ ಸಿಎಂ ಅಧಿಕಾರಿ ಪಾಲ್ಗೊಂಡರು. ದೇವಿಗೆ ವಿಶೇಷ ಪಾರ್ಥನೆ ಸಲ್ಲಿಸಿದರು.
ಹತ್ತಿರದಲ್ಲಿದ್ದ ಇನ್ನೂ ಕೆಲವು ಪಂಡಾಲ್ಗಳಿಗೆ ಸಿಎಂ ಭೇಟಿ ನೀಡಿದರು. ಇವುಗಳಲ್ಲಿ ‘ಸೇವಕ್ ಸಂಘ’ ಮತ್ತು ‘ತರುಣ್ ಯುವಕ್ ಸಂಘ’ ಕೂಡ ಸೇರಿವೆ. ಈ ಎರಡೂ ಮಂಟಪಗಳು ಮಮತಾ ಬ್ಯಾನರ್ಜಿ ಅವರ ನಿವಾಸದ ಪಕ್ಕದಲ್ಲೇ ಇವೆ.
ಬಾಬುನ್ ಬ್ಯಾನರ್ಜಿ ಅವರು ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಕಿರಿಯ ಸಹೋದರರಾಗಿದ್ದಾರೆ. ಅವರು ಕಾಳಿಘಾಟ್ ಸ್ಪೋರ್ಟ್ಸ್ ಅಸೋಸಿಯೇಷನ್ನ ಸಂಚಾಲಕರಾಗಿದ್ದು, ಹರೀಶ್ ಚಟರ್ಜಿ ಸ್ಟ್ರೀಟ್ನ ಪ್ರವೇಶದ್ವಾರದಲ್ಲಿ ಹಲವು ವರ್ಷಗಳಿಂದ ಕಾಳಿ ಪೂಜೆಯನ್ನು ಆಯೋಜಿಸುತ್ತಾ ಬಂದಿದ್ದಾರೆ. ಇದನ್ನೂ ಓದಿ: ಇಸ್ಕಾನ್ನಲ್ಲಿ ಸಂಭ್ರಮದಿಂದ ನೆರವೇರಿದ ಗೋವರ್ಧನ ಪೂಜೆ
