ಮಂಗಳೂರು: ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆಯ ಕ್ಯಾಂಟೀನ್ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ. ಪ್ರವೀಣ್ ಕುಮಾರ್ ಸಿಹೆಚ್ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಮುಕ್ಕ ಸುರತ್ಕಲ್ ಇಲ್ಲಿರುವ ಶ್ರೀನಿವಾಸ ವೈದ್ಯಕೀಯ ಕಾಲೇಜು ಹಾಗೂ ಆಸ್ಪತ್ರೆ ಕ್ಯಾಂಟೀನ್ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ.
ಕ್ಯಾಂಟೀನ್ನಲ್ಲಿ ನೀಡಲಾಗುವ ಆಹಾರದ ಗುಣಮಟ್ಟ ಹಾಗೂ ಸುರಕ್ಷತೆಯ ಬಗ್ಗೆ ಪರಿಶೀಲಿಸಿದ್ದಾರೆ. ವೈದ್ಯಕೀಯ ಕಾಲೇಜಿನ ಹಾಸ್ಟೆಲ್ ಮೆಸ್ ಅಡುಗೆ ಕೋಣೆಗೆ ಧಿಡೀರ್ ಭೇಟಿ ನೀಡಿ ಪರೀಕ್ಷಿಸಿದ್ದಾರೆ. ಆಹಾರ ಸಿದ್ಧಪಡಿಸಲು ಬಳಸಲಾಗುವ ಸಾಮಗ್ರಿಗಳ ಮಾದರಿಗಳನ್ನು ಅಧಿಕಾರಿಗಳು ಸಂಗ್ರಹಿಸಿದ್ದಾರೆ. ಆಹಾರ ತಯಾರಿಕೆಗೆ ಬಳಸಲಾಗುವ ವಸ್ತುಗಳ ಗುಣಮಟ್ಟ ಪರಿಶೀಲನೆಗೆ ಆಹಾರ ಮಾದರಿ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ರೋಗಿಗಳಿಗೆ ನೀಡಲಾಗುವ ಆಹಾರಗಳನ್ನು ಉತ್ತಮ ಗುಣಮಟ್ಟದಿಂದ ಹಾಗೂ ಸುರಕ್ಷಿತವಾಗಿ ತಯಾರಿಸಿ ನೀಡಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ.
ಮುಲ್ಕಿ ಕಾರ್ನಾಡ್ ವ್ಯಾಪ್ತಿಯಲ್ಲಿ ಇರುವ ಬೇಕರಿಗಳಲ್ಲಿ ಹಬ್ಬಗಳಿಗೆ ತಯಾರಿಸಲಾಗುವ ಸಿಹಿ ತಿಂಡಿಗಳ ಗುಣಮಟ್ಟ ಹಾಗೂ ಸುರಕ್ಷತೆ ಪರಿಶೀಲಿಸುವ ವಿಶೇಷ ಅಭಿಯಾನ ಕೈಗೊಳ್ಳಲಾಯಿತು. ಸಿಹಿ ತಿಂಡಿಗಳಿಗೆ ಬಣ್ಣಗಳನ್ನು ಬಳಸದಂತೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಲಾಯಿತು. ಸರಿಯಾಗಿ ಶುಚಿತ್ವ ಕಾಪಾಡಿಕೊಳ್ಳದ ಬೇಕರಿಗಳಿಗೆ ನೋಟಿಸ್ ಕೊಡಲಾಗಿದೆ. ಬಣ್ಣಗಳನ್ನು ಬಳಸಿ ತಯಾರಿಸಿದ ಸಂಶಯಾಸ್ಪದ ಸಿಹಿ ತಿಂಡಿಗಳನ್ನು ಸೀಸ್ ಮಾಡಿ ಸೀಲ್ ಮಾಡಲಾಯಿತು. ಪರೀಕ್ಷೆಗಾಗಿ ಆಹಾರ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಯಿತು.
