– ನಕ್ಸಲ್ ಪೀಡಿತ ಪ್ರದೇಶದಲ್ಲಿ ಈಗ ಅಭಿವೃದ್ಧಿಯ ಹೊಸ ಅಲೆ; ಮೋದಿ ಬಣ್ಣನೆ
ಬಸ್ತಾರ್: ಪ್ರಧಾನಿ ನರೇಂದ್ರ ಮೋದಿ (PM Modi) ಅವರಿಂದು ಛತ್ತೀಸ್ಗಢದ ಬಸ್ತಾರ್ನಲ್ಲಿ (Bastar) (ದೀರ್ಘಕಾಲ ನಕ್ಸಲ್ ಪೀಡಿತವಾಗಿದ್ದ ಪ್ರದೇಶ) ಭದ್ರತಾ ಪಡೆಗಳ ಸಿಬ್ಬಂದಿಯೊಂದಿಗೆ ದೀಪಾವಳಿ ಹಬ್ಬ ಆಚರಿಸಿದರು.
ಈ ಸಂದರ್ಭದಲ್ಲಿ ಭದ್ರತಾ ಸಿಬ್ಬಂದಿಯೊಂದಿಗೆ ಸಂವಾದ ನಡೆಸಿದ ಪ್ರಧಾನಿ, ದೇಶದ ರಕ್ಷಣೆಯಲ್ಲಿ ಅವರು ನಿರ್ವಹಿಸುತ್ತಿರುವ ಪಾತ್ರವನ್ನು ಶ್ಲಾಘಿಸಿದರು. ಅಲ್ಲದೇ, ಭದ್ರತಾ ಸಿಬ್ಬಂದಿಯೆಲ್ಲರೂ ತಮ್ಮ ಕುಟುಂಬದ ಸದಸ್ಯರಿದ್ದಂತೆ ಎಂದು ಹೇಳಿದರು.
ದೇಶಾದ್ಯಂತ ಹಾಗೂ ವಿದೇಶಗಳಲ್ಲಿರುವ ಕೋಟ್ಯಂತರ ಭಾರತೀಯರು (Indians) ಬೆಳಕಿನ ಹಬ್ಬ ದೀಪಾವಳಿಯನ್ನ ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ, ದೇಶ ಕಾಯುತ್ತಿರುವ ಯೋಧರೊಂದಿಗೆ ಹಬ್ಬ ಆಚರಿಸಲು ತಾವು ಆಗಮಿಸಿರುವುದಾಗಿ ಮೋದಿ ತಿಳಿಸಿದರು.
A very special Diwali with our brave security forces in Bastar, Chhattisgarh. https://t.co/7I5aOQdMSk
— Narendra Modi (@narendramodi) November 8, 2026
ದೇಶದ ಗಡಿಗಳಲ್ಲಿ ಹಾಗೂ ದೇಶದ ಒಳಭಾಗದಲ್ಲಿ ರಾಷ್ಟ್ರದ ರಕ್ಷಣೆ ಮಾಡುತ್ತಿರುವ ಭದ್ರತಾ ಸಿಬ್ಬಂದಿಯೆಲ್ಲರೂ ತಮ್ಮ ಕುಟುಂಬದ ಭಾಗವಾಗಿದ್ದಾರೆ. ಇಂದು ದೇಶದಾದ್ಯಂತ ಹಾಗೂ ಜಗತ್ತಿನ ಪ್ರತಿಯೊಂದು ಮೂಲೆಗಳಲ್ಲೂ ಕೋಟ್ಯಂತರ ಭಾರತೀಯರು ಬೆಳಕಿನ ಹಬ್ಬ ದೀಪಾವಳಿಯನ್ನ ಆಚರಿಸುತ್ತಿದ್ದಾರೆ. ದೂರದ ಊರುಗಳಿಂದಲೂ ಜನರು ತಮ್ಮ ಮನೆಗಳಿಗೆ ಮರಳುತ್ತಿದ್ದಾರೆ. ಕುಟುಂಬದವರು ಹಾಗೂ ಪ್ರೀತಿಪಾತ್ರರು ಒಂದೆಡೆ ಸೇರಿ ಸಂಭ್ರಮಿಸುವ ವಿಶೇಷ ಸಂದರ್ಭವಿದು. ನಾನೂ ಕೂಡ ನಿಮ್ಮೊಂದಿಗೆ ದೀಪಾವಳಿ ಆಚರಿಸಲು ಇಲ್ಲಿಗೆ ಬಂದಿದ್ದೇನೆ ಎಂದು ಪ್ರಧಾನಿ ಹೇಳಿದರು.
ದೇಶದ ಗಡಿಗಳಲ್ಲಿ ಹಾಗೂ ದೇಶದ ಒಳಗೆ ರಾಷ್ಟ್ರವನ್ನು ರಕ್ಷಿಸುತ್ತಿರುವವರು, ದೇಶದ ಕಾವಲುಗಾರರು ಹಾಗೂ ಭಾರತಮಾತೆಯ ಧೈರ್ಯಶಾಲಿ ಪುತ್ರರು ಮತ್ತು ಪುತ್ರಿಯರಾದ ನೀವೆಲ್ಲರೂ ನನ್ನ ಕುಟುಂಬದ ಸದಸ್ಯರು ಎಂದು ಮೋದಿ ತಿಳಿಸಿದರು.
‘ಬಸ್ತಾರ್ನ ಕಾಡುಗಳಲ್ಲಿ ದೀಪಾವಳಿ ಆಚರಿಸಲು ಬಂದಿದ್ದೇನೆ’
ಮುಂದುವರಿದು ಮಾತನಾಡಿದ ಮೋದಿ… ಈ ಬಾರಿ ಬಸ್ತಾರ್ನ ಕಾಡುಗಳಲ್ಲಿ ದೀಪಾವಳಿ ಆಚರಿಸಲು ನಾನು ಬಂದಿದ್ದೇನೆ. ಒಂದು ಕಾಲದಲ್ಲಿ ನಕ್ಸಲಿಸಂನ ಸಮಸ್ಯೆ ತೀವ್ರವಾಗಿದ್ದ ಪ್ರದೇಶವಿದು. ಆದರೆ, ನಿಮ್ಮ ತ್ಯಾಗ ಮತ್ತು ಸಮರ್ಪಣೆಯಿಂದಾಗಿ ಇದೇ ಪ್ರದೇಶದಲ್ಲಿ ಇಂದು ನಕ್ಸಲಿಸಂನ ಪ್ರಭಾವ ಅಂತ್ಯಗೊಂಡಿದ್ದು, ಅಭಿವೃದ್ಧಿಯ ಹೊಸ ಅಲೆ ಆರಂಭವಾಗಿದೆ ಎಂದು ಬಣ್ಣಿಸಿದರು.
