ನವದೆಹಲಿ: ದೆಹಲಿಯ ಚಾವರಿ ಬಜಾರ್ ಪ್ರದೇಶದಲ್ಲಿ ಕಟ್ಟಡ ಕುಸಿದುಬಿದ್ದು (Delhi Building Collapse) ಮೃತಪಟ್ಟವರ ಸಂಖ್ಯೆ ಆರಕ್ಕೆ ಏರಿಕೆಯಾಗಿದೆ.
ಮೃತಪಟ್ಟವರನ್ನು ಸಂಜೀತ್ ಕುಮಾರ್, ಕಿಶೋರಿ ಸಾಹ್, ಪಂಕಜ್ ಶರ್ಮಾ, ವಿಪಿನ್ ರಾಮ್, ಶಂತು ಮತ್ತು ದಿನೇಶ್ ಸಾಹ್ ಎಂದು ಗುರುತಿಸಲಾಗಿದೆ. ಮೃತಪಟ್ಟವರಲ್ಲಿ ಐವರು ಬಿಹಾರದವರಾಗಿದ್ದಾರೆ. ವಿಪಿನ್ ರಾಮ್ ದೆಹಲಿಯ ಫಾಜಿಲ್ಪುರದ ಮಂಡಾವಾಲಿಯಲ್ಲಿರುವ ಸಾಕೇತ್ ಬ್ಲಾಕ್ನ ನಿವಾಸಿಯಾಗಿದ್ದ ಎಂದು ತಿಳಿದುಬಂದಿದೆ. ಇದನ್ನೂ ಓದಿ: ಗಾಜಿಯಾಬಾದ್ನಲ್ಲಿ ಮನೆಯ ಸ್ಲ್ಯಾಬ್ ಕುಸಿತ – ಓರ್ವ ಸಾವು, ಹಲವರು ಸಿಲುಕಿರುವ ಶಂಕೆ
ಗುರುವಾರ (ನ.5) ಬೆಳಗ್ಗೆ ಸುಮಾರು 10:30ರ ಸುಮಾರಿಗೆ, ಹಳೆಯ ದೆಹಲಿಯ ಚಾವ್ರಿ ಬಜಾರ್ ಪ್ರದೇಶದಲ್ಲಿರುವ ಅಜ್ಮೇರಿ ಗೇಟ್ ಬಳಿಯ ಗಲಿ ಶೀಶ್ ಮಹಲ್, ಗಲಿ ಶೆಹತಾರಾದಲ್ಲಿ ನಿರ್ಮಾಣ ಹಂತದಲ್ಲಿದ್ದ ಮೂರು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿತ್ತು. ಆಗ ಇಬ್ಬರು ಮೃತಪಟ್ಟಿದ್ದರು. ಬಳಿಕ ಅವಶೇಷಗಳ ಅಡಿ ಸಿಲುಕಿದ್ದವರ ರಕ್ಷಣೆಗೆ 30 ರಕ್ಷಣಾ ಸಿಬ್ಬಂದಿಯ ತಂಡ ಕಾರ್ಯಾಚರಣೆ ನಡೆಸಿತ್ತು.
ಈ ಘಟನೆಯ ಬಳಿಕ ಮೂವರು ಗುತ್ತಿಗೆದಾರರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ಗುತ್ತಿಗೆದಾರರನ್ನು ಸಿರಾಜ್, ತಾಜುದ್ದೀನ್ ಮತ್ತು ಫುರ್ಕಾನ್ ಎಂದು ಗುರುತಿಸಲಾಗಿದೆ. ಇವರು ಹರಿಯಾಣದ ಫರಿದಾಬಾದ್ ಜಿಲ್ಲೆಯ ದೌಜ್ ತಹಸಿಲ್ನ ಸಿರೋಹಿ ಗ್ರಾಮದ ನಿವಾಸಿಗಳಾಗಿದ್ದಾರೆ. ಬಂಧಿತರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 105ರ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.
ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ (SDM) ಮನೋಜ್ ಕುಮಾರ್ ಈ ಬಗ್ಗೆ ಮಾತನಾಡಿ, ಕಟ್ಟಡ ಕುಸಿಯಲು ಸಣ್ಣ ನಿವೇಶನದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವನ್ನು ನಿರ್ಮಿಸಿರುವುದು ಕಾರಣವಾಗಿರಬಹುದು. ಕಾಂಕ್ರೀಟ್ ಗಟ್ಟಿಯಾಗುವ ಮೊದಲೇ ತಾತ್ಕಾಲಿಕ ಆಧಾರಗಳನ್ನು (ಸಪೋರ್ಟ್ಗಳನ್ನು) ತೆಗೆದಿರಬಹುದು ಎಂದು ಹೇಳಿದ್ದರು.
ಈ ಪ್ರದೇಶವು ಕಿರಿದಾಗಿದ್ದು, ಹೆಚ್ಚು ಜನನಿಬಿಡವಾಗಿರುವುದರಿಂದ ರಕ್ಷಣಾ ತಂಡಗಳಿಗೆ ದೊಡ್ಡ ಸವಾಲಾಗಿ ಪರಿಣಮಿಸಿತ್ತು. ಈ ಕಟ್ಟಡವು ಕೇವಲ ಮೂರು ಅಡಿ ಅಗಲವಿರುವ, ಡೆಡ್-ಎಂಡ್ ಗಲ್ಲಿಯೊಂದರ ತುದಿಯಲ್ಲಿದೆ. ಇದರಿಂದಾಗಿ ವಾಹನಗಳು, ರಕ್ಷಣಾ ತಂಡದ ಭಾರೀ ಯಂತ್ರೋಪಕರಣಗಳು ಅಲ್ಲಿಗೆ ತಲುಪಲು ಸಾಧ್ಯವಾಗಿರಲಿಲ್ಲ. ಇದನ್ನೂ ಓದಿ: ದೆಹಲಿಯ ಚಾವರಿ ಬಜಾರ್ನಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿತ – ಇಬ್ಬರು ಸಾವು, ಹಲವರು ಸಿಲುಕಿರುವ ಶಂಕೆ
