ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ(Dehli) ವಾಯುಮಾಲಿನ್ಯದ ಪ್ರಮಾಣ ತೀವ್ರ ಮಟ್ಟದತ್ತ ಏರಿಕೆಯಾಗುತ್ತಿರುವ ಹಿನ್ನೆಲೆ ಸುಪ್ರೀಂ ಕೋರ್ಟ್ (Supreme Court) ಕಳವಳ ವ್ಯಕ್ತಪಡಿಸಿದೆ. ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (AQI) ಅಪಾಯಕಾರಿ ಮಟ್ಟದತ್ತ ಸಾಗುತ್ತಿರುವ ಸಂದರ್ಭದಲ್ಲಿ ನ್ಯಾಯಾಲಯವು ದೆಹಲಿಯ ಹವಾಮಾನದ ಬಗ್ಗೆ ವ್ಯಂಗ್ಯಭರಿತವಾಗಿ ಪ್ರತಿಕ್ರಿಯಿಸಿದೆ.
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ನೇತೃತ್ವದ ನ್ಯಾಯಮೂರ್ತಿಗಳಾದ ಜಾಯ್ಮಾಲ್ಯ ಬಾಗ್ಚಿ ಮತ್ತು ವಿ. ಮೊಹನಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು ದೆಹಲಿ-ಎನ್ಸಿಆರ್ ವಾಯುಮಾಲಿನ್ಯಕ್ಕೆ ಸಂಬಂಧಿಸಿದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆ ನಡೆಸಿತು. ಇದನ್ನೂ ಓದಿ: ಸಿಜೆಐ ವಿರುದ್ಧ ಆಕ್ಷೇಪಾರ್ಹ ಪೋಸ್ಟ್ – ಕೇರಳ ಕಾಂಗ್ರೆಸ್ಗೆ ಸುಪ್ರೀಂ ಕೋರ್ಟ್ ನೋಟಿಸ್
ವಿಚಾರಣೆ ಆರಂಭಿಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನೀವೆಲ್ಲರೂ ದೆಹಲಿಯ ಹವಾಮಾನವನ್ನು ಆನಂದಿಸುತ್ತಿದ್ದೀರಿ ಎಂದು ಭಾವಿಸುತ್ತೇನೆ ಎಂದು ವ್ಯಂಗ್ಯಭರಿತವಾಗಿ ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಾಲಯದ ಸಹಾಯಕ ಹಿರಿಯ ವಕೀಲೆ ಅಪರಾಜಿತಾ ಸಿಂಗ್, ದೆಹಲಿಯ ವಾಯುಮಾಲಿನ್ಯ ತೀವ್ರ ಹಂತದ ಸಮೀಪದಲ್ಲಿದೆ. ಮಾಲಿನ್ಯದಿಂದಾಗಿ ಮಾತನಾಡಲೂ ಕಷ್ಟವಾಗುತ್ತಿದೆ. ದಿನಕ್ಕೆ 30 ಸಿಗರೇಟ್ ಸೇದಿದಷ್ಟೇ ಮಾಲಿನ್ಯದ ಪರಿಣಾಮ ಉಂಟಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.
ನವೆಂಬರ್ 5ರಂದು ದೆಹಲಿಯ ವಾಯುಮಾಲಿನ್ಯದಲ್ಲಿ ಶೇ.14ರಷ್ಟು ಕೊಡುಗೆ ಬೆಳೆ ತ್ಯಾಜ್ಯ ಸುಡುವಿಕೆಯಿಂದ ಬಂದಿದೆ. ಆದರೆ ದೆಹಲಿಯಲ್ಲಿ ಈಗಾಗಲೇ ಮಾಲಿನ್ಯ ಹೆಚ್ಚಿದ್ದು, ಬೆಳೆ ತ್ಯಾಜ್ಯ ಸುಡುವಿಕೆ ಪರಿಸ್ಥಿತಿಯನ್ನು ಮತ್ತಷ್ಟು ಹದಗೆಡಿಸುತ್ತಿದೆ ಎಂದು ನ್ಯಾಯಲಯಕ್ಕೆ ತಿಳಿಸಿದರು.ಇದನ್ನೂ ಓದಿ: ಪಾಕ್ನ ವಿವಾದಿತ ಧರ್ಮಗುರು ಅನುಯಾಯಿ ಸಮಾಧಿ ಮೇಲೆ ಕಲ್ಮ ವಿರೋಧಿ ಬರಹ – ಚಿಕ್ಕಮಗಳೂರಲ್ಲಿ ಬೂದಿ ಮುಚ್ಚಿದ ಕೆಂಡ
ಇದೇ ವೇಳೆ ವಾಹನಗಳ ಹೊಗೆ ಮತ್ತು ಸಂಚಾರ ದಟ್ಟಣೆಯೇ ದೆಹಲಿ-ಎನ್ಸಿಆರ್ನ ವಾಯುಮಾಲಿನ್ಯದ ಪ್ರಮುಖ ಸಮಸ್ಯೆಗಳಲ್ಲಿ ಒಂದಾಗಿದೆ. ದೆಹಲಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಹನಗಳ ಸಂಖ್ಯೆ ಮತ್ತು ಸಂಚಾರ ದಟ್ಟಣೆಯನ್ನು ನಿಯಂತ್ರಿಸುವ ಅಗತ್ಯವಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು.
ಬೆಳೆ ತ್ಯಾಜ್ಯ ಸುಡುವುದನ್ನು ತಡೆಯಲು ರೈತರಿಗೆ ಮುಂಚಿತವಾಗಿಯೇ ಸೂಕ್ತ ಆರ್ಥಿಕ ಪ್ರೋತ್ಸಾಹ ನೀಡಬೇಕು. ಬೆಳೆ ತ್ಯಾಜ್ಯ ಖರೀದಿ ದರವನ್ನು ಮುಂಚಿತವಾಗಿ ಪ್ರಕಟಿಸುವ ಮೂಲಕ ರೈತರು ಅದನ್ನು ಸುಡುವ ಬದಲು ಮಾರಾಟ ಮಾಡಲು ಉತ್ತೇಜಿಸಬಹುದು. ಗ್ರಾಮ ಪಂಚಾಯಿತಿಗಳಲ್ಲಿಯೂ ಬೆಳೆ ತ್ಯಾಜ್ಯ ಸಂಗ್ರಹಣೆ ಮತ್ತು ನಿರ್ವಹಣೆಗೆ ಅಗತ್ಯ ಯಂತ್ರೋಪಕರಣ ಹಾಗೂ ವ್ಯವಸ್ಥೆಗಳನ್ನು ಕಲ್ಪಿಸಬೇಕೆಂದು ಎಂದು ನ್ಯಾಯಾಲಯ ಸಲಹೆ ನೀಡಿತು.ಇದನ್ನೂ ಓದಿ: 3 ಕೋಟಿ ಮೌಲ್ಯದ ಆಸ್ತಿಗಾಗಿ ಬೆಂಗಳೂರಿನಲ್ಲಿ 7 ಜನರ ನರಮೇಧ!
ಇನ್ನು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯ ಅಂಕಿಅಂಶಗಳ ಪ್ರಕಾರ, ನವೆಂಬರ್ 6ರ ಬೆಳಿಗ್ಗೆ 8 ಗಂಟೆಗೆ ದೆಹಲಿಯ ಒಟ್ಟಾರೆ ಎಕ್ಯೂಐ 389 ದಾಖಲಾಗಿತ್ತು. ಬೆಳಿಗ್ಗೆ 9 ಗಂಟೆಗೆ ಅದು 391ಕ್ಕೆ ಏರಿಕೆಯಾಗಿತ್ತು. ನಗರದ 59 ವಾಯು ಗುಣಮಟ್ಟ ಮಾಪನ ಕೇಂದ್ರಗಳ ಪೈಕಿ 30 ಕೇಂದ್ರಗಳಲ್ಲಿ ಗಾಳಿಯ ಗುಣಮಟ್ಟ ತೀವ್ರ ಹಂತಕ್ಕೆ ತಲುಪಿತ್ತು. ರೋಹಿಣಿಯಲ್ಲಿ 475 ಮತ್ತು ಐಐಟಿ ದೆಹಲಿ ಪ್ರದೇಶದಲ್ಲಿ 472 ಎಕ್ಯೂಐ ದಾಖಲಾಗಿತ್ತು.
ದೀಪಾವಳಿ ಹಬ್ಬ ಸಮೀಪಿಸುತ್ತಿರುವ ಹಿನ್ನೆಲೆ ವಾಯುಮಾಲಿನ್ಯ ಮತ್ತಷ್ಟು ಹೆಚ್ಚಾಗುವ ಆತಂಕವೂ ಎದುರಾಗಿದೆ. ನಿರ್ಬಂಧಗಳ ಜೊತೆಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಹಾಗೂ ವಾಹನಗಳು, ಬೆಳೆ ತ್ಯಾಜ್ಯ ಸುಡುವಿಕೆ ಸೇರಿದಂತೆ ಮಾಲಿನ್ಯದ ಎಲ್ಲ ಮೂಲಗಳ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ವಿಚಾರಣೆ ಸಮಯದಲ್ಲಿ ನ್ಯಾಯಾಲಯ ಗಮನ ಸೆಳೆದಿದೆ.ಇದನ್ನೂ ಓದಿ: ಅ.16ರಿಂದ 31ರವರೆಗೆ 15 ದಿನದಲ್ಲಿ 7 ಕೊಲೆ – ನರಮೇಧಕ್ಕೆ ಮಗಳು ಸಾಥ್, ತಪ್ಪೊಪ್ಪಿಕೊಂಡ ಹಂತಕ
