ಬೆಂಗಳೂರು: ಕನ್ನಡದ ಖ್ಯಾತ ಚಿಂತಕ, ಭಾಷಾವಿಜ್ಞಾನಿ ಮತ್ತು ಹಿರಿಯ ಸಾಹಿತ್ಯ ವಿಮರ್ಶಕ ಪ್ರೊ. ಕೆ.ವಿ. ನಾರಾಯಣ (79) ಅವರು ನಿಧನರಾಗಿದ್ದಾರೆ.
ನಗರದ ಯಲಹಂಕದಲ್ಲಿ ನೆಲೆಸಿದ್ದ ನಾರಾಯಣ (KV Narayana) ಅವರಿಗೆ ಗುರುವಾರ ತಡರಾತ್ರಿ ಆರೋಗ್ಯದಲ್ಲಿ ತೀವ್ರ ಏರುಪೇರು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು. ಮೃತರು ಪತ್ನಿ ಎಚ್.ಎಸ್. ಶ್ರೀಮತಿ, ಓರ್ವ ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕಿನ ಕಂಪಲಾಪುರದಲ್ಲಿ 1948ರಲ್ಲಿ ಜನಿಸಿದ ಕೆ.ವಿ. ನಾರಾಯಣ ಅವರು, ಬೆಂಗಳೂರು ವಿಶ್ವವಿದ್ಯಾಲಯದಿಂದ ಕನ್ನಡದಲ್ಲಿ(Kannada) ಎಂ.ಎ. ಸ್ನಾತಕೋತ್ತರ ಪದವಿ ಪಡೆದರು. ಬಳಿಕ ಖ್ಯಾತ ಸಾಹಿತಿ ರಾಷ್ಟ್ರಕವಿ ಡಾ. ಜಿ.ಎಸ್. ಶಿವರುದ್ರಪ್ಪ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ ಸಂಶೋಧನೆ ಪೂರ್ಣಗೊಳಿಸಿದರು.
ಬೆಂಗಳೂರಿನ ನ್ಯಾಷನಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಶೈಕ್ಷಣಿಕ ವೃತ್ತಿ ಆರಂಭಿಸಿದ ಅವರು ಬೆಂಗಳೂರು ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಕೇಂದ್ರದಲ್ಲಿ ಭಾಷಾವಿಜ್ಞಾನ ಮತ್ತು ಸಾಹಿತ್ಯ ಮೀಮಾಂಸೆಯ ಪ್ರಾಧ್ಯಾಪಕರಾಗಿ ದೀರ್ಘಕಾಲ ಬೋಧನೆ ಮಾಡಿದರು. ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾ ನಿಕಾಯದ ಡೀನ್, ಕುಲಸಚಿವ ಹಾಗೂ ಪ್ರಭಾರ ಕುಲಪತಿಯಂತಹ ಉನ್ನತ ಹುದ್ದೆಗಳನ್ನು ಯಶಸ್ವಿಯಾಗಿ ನಿಭಾಯಿಸಿ, ಆಡಳಿತಾತ್ಮಕ ಮತ್ತು ಶೈಕ್ಷಣಿಕ ಚಟುವಟಿಕೆಗಳಿಗೆ ಭದ್ರ ಬುನಾದಿ ಹಾಕಿಕೊಟ್ಟರು.
ಖ್ಯಾತ ವಿಮರ್ಶಕ, ಭಾಷಾತಜ್ಞ ಹಾಗೂ ಹಿರಿಯ ಸಾಹಿತಿ ಶ್ರೀ ಕೆ.ವಿ. ನಾರಾಯಣ ಅವರ ನಿಧನದ ಸುದ್ದಿ ತಿಳಿದು ತೀವ್ರ ದುಃಖವಾಗಿದೆ.
ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ಬೆಳವಣಿಗೆಗೆ ಶ್ರೀ ಕೆ.ವಿ. ನಾರಾಯಣ ಅವರು ಅಮೂಲ್ಯ ಕೊಡುಗೆಗಳನ್ನು ನೀಡಿದ್ದರು. ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾಗಿ, ಕುವೆಂಪು ಭಾಷಾ ಭಾರತಿ ಅಧ್ಯಕ್ಷರಾಗಿ ಸಲ್ಲಿಸಿದ ಅವರ ಸೇವೆ ಸದಾ ಸ್ಮರಣೀಯ.
ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ ಲೋಕಕ್ಕೆ ತುಂಬಲಾರದ ನಷ್ಟವಾಗಿದೆ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಅವರ ಕುಟುಂಬ ವರ್ಗ ಮತ್ತು ಅಭಿಮಾನಿಗಳಿಗೆ ಈ ದುಃಖವನ್ನು ಭರಿಸುವ ಶಕ್ತಿ ಸಿಗಲಿ ಎಂದು ಪ್ರಾರ್ಥಿಸುತ್ತೇನೆ.
ಓಂ ಶಾಂತಿ.
— DK Shivakumar (@DKShivakumar) November 6, 2026
ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷರಾಗಿಯೂ ದಕ್ಷ ಸೇವೆ ಸಲ್ಲಿಸಿದ ಪ್ರೊ. ಕೆ.ವಿ.ಎನ್, ಕನ್ನಡ ಭಾಷಾ ಚಿಂತನೆಗೆ ಆಧುನಿಕ ಮತ್ತು ವೈಜ್ಞಾನಿಕ ಆಯಾಮವನ್ನು ತಂದುಕೊಟ್ಟ ಅಗ್ರಗಣ್ಯರು. ಕನ್ನಡವನ್ನು ಕೇವಲ ಸಾಹಿತ್ಯಿಕ ಭಾಷೆಯಾಗಷ್ಟೇ ಉಳಿಸದೆ ಸಾರ್ವಕಾಲಿಕ ಜ್ಞಾನಶಿಸ್ತಿನ ಭಾಷೆಯನ್ನಾಗಿ ವಿಸ್ತರಿಸುವ ಮಹತ್ವಾಕಾಂಕ್ಷೆಯಿಂದ ಅವರು ರೂಪಿಸಿದ ‘ಕರ್ನಾಟಕ ಓದು’ ಕಾರ್ಯಾಗಾರ ಸರಣಿ ಸಂಶೋಧನಾ ವಲಯದಲ್ಲಿ ಹೊಸ ಸಂಚಲನ ಮೂಡಿಸಿತ್ತು.
ಕನ್ನಡ ಸಾರಸ್ವತ ಲೋಕಕ್ಕೆ ಸಲ್ಲಿಸಿದ ಅನನ್ಯ ಸೇವೆಗಾಗಿ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಹಾಗೂ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಅನೇಕ ಪ್ರತಿಷ್ಠಿತ ಗೌರವಗಳು ಇವರಿಗೆ ಸಂದಿವೆ. ಪ್ರೊ. ಕೆ.ವಿ. ನಾರಾಯಣ್ ಅವರ ಅಗಲಿಕೆಯಿಂದ ಕನ್ನಡ ಸಾಹಿತ್ಯ, ಭಾಷಾ ವಿಜ್ಞಾನ ಮತ್ತು ಶೈಕ್ಷಣಿಕ ಲೋಕದ ಧೀಮಂತ ಕೊಂಡಿಯೊಂದು ಕಳಚಿದಂತಾಗಿದ್ದು, ನಾಡಿನ ಸಾಹಿತಿಗಳು, ಸಂಶೋಧಕರು ಹಾಗೂ ಅಪಾರ ಶಿಷ್ಯವೃಂದ ತೀವ್ರ ಸಂತಾಪ ಸೂಚಿಸಿದೆ.
