ಡಿಯರ್ ಮೇಘಾ
ದೀಪಾವಳಿ (Deepavali) ಬಂತೆಂದರೆ ಎಲ್ಲೆಡೆ ದೀಪಗಳ ಬೆಳಕು, ಬಣ್ಣಬಣ್ಣದ ರಂಗೋಲಿ, ಪಟಾಕಿಗಳ ಸದ್ದು… ಎಲ್ಲವೂ ಸೇರಿ ಮನಸ್ಸಿಗೆ ಅದೆಷ್ಟು ಸಂಭ್ರಮ. ಈ ಹಬ್ಬದಲ್ಲಿ ನನಗೆ ಎಲ್ಲಕ್ಕಿಂತ ಹೆಚ್ಚು ನೆನಪಾಗೋದು ನೀನು. ಯಾಕೆ ಗೊತ್ತಾ? ಸಾವಿರ ದೀಪಗಳು ಒಟ್ಟಿಗೆ ಬೆಳಗಿದರೂ, ನನ್ನ ಬದುಕಿನಲ್ಲಿ ನೀನು ತಂದ ಬೆಳಕಿಗೆ ಅವು ಸಮನಾಗದು! ನೀನು ನನ್ನ ಜೀವನಕ್ಕೆ ಬಂದ ಮೇಲೆ ಸಾಮಾನ್ಯ ದಿನಗಳೂ ಹಬ್ಬದಂತಾಗಿವೆ.
ಈ ದೀಪಾವಳಿಗೆ ನಿನ್ನ ಕೈ ಹಿಡಿದು ಮನೆಯ ಮುಂದೆ ದೀಪ ಹಚ್ಚಬೇಕು ಎಂಬ ಆಸೆ. ಆ ಪುಟ್ಟ ಹಣತೆಯ ಬೆಳಕಿನಲ್ಲಿ ನಿನ್ನ ಮುಖವನ್ನು ನೋಡುತ್ತಾ, ನಿನ್ನ ಕಣ್ಣಲ್ಲಿನ ಹೊಳಪನ್ನು ಮನಸಾರೆ ಆಸ್ವಾದಿಸಬೇಕು. ದೀಪದ ಜ್ವಾಲೆ ಗಾಳಿಗೆ ಅಲುಗಾಡಿದಾಗ ನೀನು ಅದನ್ನು ಕೈಯಿಂದ ಮರೆ ಮಾಡಿ ಕಾಪಾಡುವಂತೆ, ಬದುಕಿನ ಕಷ್ಟಗಳಿಗೆಲ್ಲ ಹೀಗೆ ಜೊತೆಯಾಗಿ ತಡೆಯಬೇಕು! ಬದುಕಿನ ದಾರಿಯಲ್ಲಿ ಎಷ್ಟೇ ಕತ್ತಲು ಬಂದರೂ, ಪರಸ್ಪರ ಕೈ ಬಿಡದೆ ಬೆಳಕಿನ ಕಡೆಗೆ ಸಾಗಬೇಕು. ಇದನ್ನೂ ಓದಿ: ನೀನಂತೂ ನನಗೆ ಸಿಗಲಿಲ್ಲ.. ಆದರೆ..!
ನೀನು ಆ ದಿನ ನನ್ನ ಕಣ್ಣಿಗೆ ಸೌಂದರ್ಯದ ಉಡುಗೊರೆ ಕೊಡಬೇಕು! ಹೇಗೆ ಗೊತ್ತಾ? ಸೀರೆಯುಟ್ಟು, ಮಲ್ಲಿಗೆ ಮುಡಿದು, ಕಣ್ಮುಂದೆ ಸುಳಿದಾಡಬೇಕು. ನಿನ್ನ ಹಣೆಯ ಮೇಲಿನ ಕುಂಕುಮ, ನಿನ್ನ ಮುಖದ ಮೇಲಿನ ನಗು, ನಿನ್ನ ಕಣ್ಣಲ್ಲಿನ ಪ್ರೀತಿ ಕೋಟಿ ದೀಪಗಳಾಗಿ ಬೆಳಗಬೇಕು! ಇದನ್ನೂ ಓದಿ: ನಿನ್ನನ್ನು ಒಲಿಸಿಕೊಳ್ಳುವ ಮಾರ್ಗ.. ಸ್ವರ್ಗಕ್ಕಿರುವ ಏಕೈಕ ದಾರಿ!
ಆ ಬೆಳಕಲ್ಲಿ ನಾನು ದೇವರ ಬಳಿ ಏನುಜ ಬೇಡಿಕೊಳ್ಳುತ್ತೇನೆ ಗೊತ್ತಾ? ನಿನ್ನ ಮುಖದ ನಗು ಎಂದಿಗೂ ಮಾಸದಿರಲಿ, ನಮ್ಮಿಬ್ಬರ ನಡುವೆ ಎಷ್ಟೇ ಕೋಪ ಬಂದರೂ ಮನಸ್ಸುಗಳು ದೂರವಾಗದಿರಲಿ. ಪ್ರತಿ ವರ್ಷ ನಿನ್ನ ಕೈ ಹಿಡಿದು ದೀಪ ಹಚ್ಚುವ ಭಾಗ್ಯ ನನಗೆ ಸಿಗಲಿ. ನಮ್ಮ ಪ್ರೀತಿಯ ಬೆಳಕು ಸದಾಕಾಲ ಬೆಳಗಲಿ ಅಂತ. ಇದನ್ನೂ ಓದಿ: ನಿನ್ನೂರಿನ ದಾರಿಯಲ್ಲಿ ಬೀಸುವ ಗಾಳಿ ನಿನ್ನ ಆಲಿಂಗನವ ನೆನಪಿಸುತ್ತಿದೆ..!
ದೀಪಗಳ ಬೆಳಕಿನಲ್ಲಿ ನಿನ್ನ ಕೆನ್ನೆಯ ಕೆಂಪು ರಂಗನ್ನೂ, ಕೆಂದುಟಿಗಳ ಜೇನನ್ನು ಹತ್ತಿರದಿಂದ ಸವಿಯಬೇಕು. ಪಟಾಕಿಗಳ ಸದ್ದಿನ ನಡುವೆ ನಿನ್ನ ಕಿವಿಯಲ್ಲಿ ಪ್ರೀತಿಯ (Love) ಮಾತುಗಳನ್ನು ಪಿಸುಗುಟ್ಟಬೇಕು. ಜಗತ್ತೇ ಬೆಳಕಿನಲ್ಲಿ ಮಿಂದೇಳುವಾಗ, ನಾವಿಬ್ಬರೂ ಪ್ರೇಮ ಜ್ಯೋತಿಯ ಬೆಚ್ಚಗಿನ ಅಪ್ಪುಗೆಯಲ್ಲಿ ಕಳೆದುಹೋಗಬೇಕು! ಇದನ್ನೂ ಓದಿ: ನಾನು ಹೋಗು ಅಂದ ತಕ್ಷಣ ನನ್ನ ಬಿಟ್ಟು ಹೋಗ್ಬಿಟ್ಟೆ ಅಲ್ವಾ.. ನಿನಗೆ ಅದೇ ಬೇಕಿತ್ತೇನೋ..?
ಇಂತಿ
ಸದಾ ನಿನ್ನ ಪ್ರೀತಿಯ ಬೆಳಕನ್ನು ಬಯಸುವ ಗೆಳೆಯ
