ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ದೊಡ್ನಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಓಂಕಾರ ಕಾಲೋನಿಯ ಬಾವಿಗಳಿಗೆ ಕಲುಷಿತ ಆಯಿಲ್ ಸೇರ್ಪಡೆ ಗೊಂಡಿದ್ದು, ಆರಕ್ಕೂ ಹೆಚ್ಚು ಬಾವಿಗಳು ಕಲುಷಿತಗೊಂಡಿದೆ.
ಬಾವಿ ನೀರಿನ್ನು ತೆಗೆದು ಕಡ್ಡಿ ಗೀರಿದರೆ ಬೆಂಕಿ ಹೊತ್ತಿಕೊಳ್ಳುತ್ತಿದ್ದು, ಕಳೆದ ಒಂದು ವಾರದ ಈಚೆಗೆ ಬಾವಿಯಲ್ಲಿ ನೀರಿನ ಮೇಲ್ಮೈನಲ್ಲಿ ದಪ್ಪ ದ್ರವರೂಪದ ಆಯಿಲ್ ಶೇಖರಣೆ ಕಂಡು ಸ್ಥಳೀಯರು ಗ್ರಾಮಪಂಚಾಯ್ತಿ ಕಚೇರಿಗೆ ದೂರು ನೀಡಿದ್ದಾರೆ. ಬಾವಿಯಲ್ಲಿ ಆಯಿಲ್ ಶೇಖರಣೆಯಿಂದ ಗಬ್ಬು ವಾಸನೆ ಹೊಡೆಯುತಿದ್ದರೆ, ಸೀಮೆಎಣ್ಣೆ, ಆಯಿಲ್ ಮಿಶ್ರಿತ ವಾಸನೆ ಬರುತ್ತಿದೆ.
ಸ್ಥಳಕ್ಕೆ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪ್ರೀತಿ ಶೆಟ್ಟಿ ಹಾಗೂ ಗ್ರಾಮೀಣ ಕುಡಿಯುವ ನೀರಿನ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನೀರಿನ ಪರೀಕ್ಷೆ ನಡೆಸಿದಾಗ ಕುಡಿಯಲು ಯೋಗ್ಯವಲ್ಲ ಎಂದು ವರದಿ ಬಂದಿದೆ. ಆದರೆ, ಯಾವ ಕಲ್ಮಷ ಆಯಿಲ್ ಸೇರಿದೆ ಎಂಬ ಬಗ್ಗೆ ಶೋಧನೆಗೆ ನೀರಿನ ಮಾದರಿಯನ್ನ ಪರೀಕ್ಷೆಗೆ ಕಳುಹಿಸಲಾಗಿದೆ.
ಆಯಿಲ್ ಮಿಶ್ರಣವಾಗಲು ಏನು ಕಾರಣ ಎಂದು ಅನತಿ ದೂರದಲ್ಲೇ ಇರುವ ವಿದ್ಯುತ್ ಪವರ್ ಗ್ರಿಡ್ ಬಳಿ ಸಹ ತಪಾಸಣೆ ಮಾಡಿದ್ರೂ ಮೂಲ ಸಮಸ್ಯೆ ಪತ್ತೆಯಾಗಿಲ್ಲ. ಹೀಗಾಗಿ, ಸ್ಥಳ ಶೋಧಕ್ಕೆ ತಜ್ಞರಿಗೂ ಬುಲಾವ್ ನೀಡಲಾಗಿದೆ. ಇಡೀ ಕಾಲೋನಿಯಲ್ಲಿ ಈ ರೀತಿ ನೀರು ಕಲುಷಿತವಾಗಿದ್ದರಿಂದ ಓಂಕಾರ ಕಾಲೋನಿಯ ಜನರಿಗೆ ಪರ್ಯಾಯ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಿದ ಗ್ರಾಪಂ ಅಧಿಕಾರಿಗಳು ವ್ಯವಸ್ಥೆ ಮಾಡಿದ್ದಾರೆ.

