ಹಾಸನ: ಹಾಸನಾಂಬೆ (Hasanamba) ದರ್ಶನಕ್ಕೆ ಧರ್ಮ ದರ್ಶನ ಸಾಲಿನ ಕೌಂಟರ್ನಿಂದ ಪ್ರತಿ ನಿಮಿಷಕ್ಕೆ 250 – 267 ಜನ ಒಳಗೆ ಹೋಗುತ್ತಾರೆ. ಒಟ್ಟಾರೆ ಒಂದು ದಿನಕ್ಕೆ ಸುಮಾರು 2.5 ಲಕ್ಷ ಭಕ್ತರು ದೇವಿಯ ದರ್ಶನ ಪಡೆಯುತ್ತಾರೆ ಎಂದು ಜಿಲ್ಲಾಧಿಕಾರಿ ಕೆ.ಎಸ್ ಲತಾಕುಮಾರಿ ಅವರು ಹೇಳಿದರು.
ದೇವಾಲಯದ (Hasanamba Temple) ಆವರಣದಲ್ಲಿ ʻಪಬ್ಲಿಕ್ ಟಿವಿʼ ಜೊತೆ ಅವರು ಮಾತನಾಡಿದರು. ಈ ವೇಳೆ, ಹಾಸನಾಂಬೆ ದರ್ಶನಕ್ಕೆ ಸಾಗರೋಪಾದಿಯಲ್ಲಿ ಜನ ಆಗಮಿಸುತ್ತಿದ್ದಾರೆ. ಭಾನುವಾರ (ನ.1) ಭಾರೀ ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದರು. ನಿನ್ನೆಗೆ ಹೋಲಿಸಿದರೆ ಇಂದು (ನ.2) ಭಕ್ತರ ಸಂಖ್ಯೆ ಕಡಿಮೆ ಇದೆ. ಒಂದೊಂದು ದಿನ ಭಕ್ತರ ಸಂಖ್ಯೆ ಹೆಚ್ಚಿರುತ್ತದೆ. ಒಂದೊಂದು ದಿನ ಕಡಿಮೆ ಇರುತ್ತದೆ. ಯಾವುದೇ ಗೊಂದಲಗಳಿಲ್ಲದೆ ಭಕ್ತರು ದೇವಿ ದರ್ಶನ ಪಡೆಯುತ್ತಿದ್ದಾರೆ. ಶುಕ್ರವಾರ ಹಾಗೂ ಭಾನುವಾರ ನಿರೀಕ್ಷೆಗೂ ಮೀರಿ ಭಕ್ತರು ದೇವಿ ದರ್ಶನ ಪಡೆದಿದ್ದಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಹಾಸನಾಂಬೆ ದರ್ಶನಕ್ಕೆ ಭಕ್ತಸಾಗರ – ಮೂರು ದಿನದಲ್ಲಿ 5 ಕೋಟಿ.ಗೂ ಅಧಿಕ ಆದಾಯ
ಭಕ್ತರು ಹೆಚ್ಚಾದರೆ ಐದರಿಂದ ಆರು ಗಂಟೆಯೊಳಗೆ ದೇವಿ ದರ್ಶನ ಆಗುತ್ತದೆ. ಇಂದು ಭಕ್ತರು ಸಂಖ್ಯೆ ಕಡಿಮೆ ಇರುವುದರಿಂದ ಎರಡರಿಂದ ಮೂರು ಗಂಟೆಯೊಳಗೆ ದೇವಿ ದರ್ಶನ ಆಗುತ್ತಿದೆ. ಇನ್ನೂ 1000, 300 ರೂ. ವಿಶೇಷ ದರ್ಶನದ ಟಿಕೆಟ್ನಿಂದ ಹಾಗೂ ಲಾಡು ಮಾರಾಟದಿಂದ ಹೆಚ್ಚು ಆದಾಯ ಬಂದಿದೆ. ಎಲ್ಲಾ ಭಕ್ತರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.
ದೇವಿ ದರ್ಶನ ಪಡೆದ ಭಕ್ತರು ಮಹಾನಗರಪಾಲಿಕೆಯ ವಸ್ತು ಪ್ರದರ್ಶನ ಮೈದಾನಕ್ಕೆ ಭೇಟಿ ನೀಡಿ, ಕಬ್ಬಡಿ, ನಾಡಕುಸ್ತಿ, ವಾಲಿಬಾಲ್, ಟಗರು ಪ್ರದರ್ಶನ, ಶ್ವಾನ ಪ್ರದರ್ಶನ ವೀಕ್ಷಿಸಬೇಕು. ಮುಂದಿನ ದಿನಗಳಲ್ಲೂ ಭಕ್ತರು ಆಗಮಿಸಿ ದೇವಿ ದರ್ಶನ ಪಡೆಯುವಂತೆ ಮನವಿ ಮಾಡಿದರು. ಇದನ್ನೂ ಓದಿ: ಹಾಸನಾಂಬ ದರ್ಶನೋತ್ಸವಕ್ಕೆ ಭಕ್ತಸಾಗರ – ʻಅಣ್ಣಾವ್ರʼ ಸಿನಿಮಾ ಹಾಡಿಗೆ ಸಚಿವ ಶಿವಲಿಂಗೇಗೌಡ ಭರ್ಜರಿ ಡ್ಯಾನ್ಸ್!

