– ಕೋರ್ ಟೀಂ ಒಡೆಯದಂತೆ ತಡೆಯಲು ಯತೀಂದ್ರ ಸಂಧಾನ ಕಸರತ್ತು
ಮೈಸೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(Siddaramaiah) ಅವರ ಆಪ್ತ ವಲಯ ಅಧಿಕೃತವಾಗಿ ಛಿದ್ರವಾಗುವ ಅಂಚಿಗೆ ಬಂದು ನಿಂತಿದೆ. ದಶಕಗಳ ಕಾಲ ಸಿದ್ದರಾಮಯ್ಯ ಜೊತೆ ನೆರಳಿನಂತಿದ್ದ ಸಚಿವ ಡಾ. ಹೆಚ್.ಸಿ. ಮಹದೇವಪ್ಪ(Mahadevappa) ಮುನಿಸು ತಾರಕಕ್ಕೇರಿರುವ ಬೆನ್ನಲ್ಲೇ ತಂದೆಯ ಕೋರ್ ಟೀಂ ಒಡೆದು ಹೋಗದಂತೆ ಕಾಪಾಡಲು ಪುತ್ರ ಯತೀಂದ್ರ(Yathindra Siddaramaiah) ನಡೆಸಿದ ಸಂಧಾನ ಮಾತುಕತೆ ವಿಫಲವಾಗಿದೆ.
ಯಾವುದೇ ಪೂರ್ವಸೂಚನೆ ನೀಡದೆ ಯತೀಂದ್ರ ಸಿದ್ದರಾಮಯ್ಯ ಅವರು ಬುಧವಾರ ಮಧ್ಯಾಹ್ನ ನೇರವಾಗಿ ಮಹದೇವಪ್ಪ ಇದ್ದ ಸ್ಥಳಕ್ಕೆ ತೆರಳಿ ಭೇಟಿ ಮಾಡಿದರು. ದಿಢೀರ್ ಭೇಟಿಯಿಂದ ಒಂದು ಕ್ಷಣ ಮಹದೇವಪ್ಪ ಅಚ್ಚರಿಗೊಂಡರು.
ಈ ವೇಳೆ ಮಾತನಾಡಿದ ಯತೀಂದ್ರ, ನೀವು ಮತ್ತು ಅಪ್ಪ ಕೂತು ಮಾತನಾಡಬೇಕು. ಹೊರಗಡೆ ನಿಮ್ಮಿಬ್ಬರ ನಡುವೆ ಬಿರುಕು ಮೂಡಿದೆ ಎಂದು ಬೇರೆ ಬೇರೆ ರೀತಿಯ ಸುದ್ದಿಗಳು ಹರಿದಾಡುತ್ತಿವೆ. ಇದು ನಿಲ್ಲಬೇಕಾದರೆ ನೀವಿಬ್ಬರೂ ಒಟ್ಟಿಗೆ ಕುಳಿತು ಮಾತನಾಡಬೇಕು, ಒಂದಾಗಬೇಕು ಎಂದು ಹೇಳಿದ್ದಾರೆ.
ಇದಕ್ಕೆ ಮಹದೇವಪ್ಪ “ಜಗಳವಾಡಿದ್ದರೆ ತಾನೇ ಒಂದಾಗೋದು? ಸಿದ್ದರಾಮಯ್ಯನವರಿಗೆ ನನ್ನ ಜೊತೆ ಮಾತನಾಡಬೇಕು ಎಂದಿದ್ದರೆ ಅವರು ಯಾವಾಗ ಬೇಕಾದರೂ ಕರೆಯಲಿ, ನಾನೇ ಹೋಗಿ ಮಾತನಾಡುತ್ತೇನೆ. ಆದರೆ ನಮ್ಮಿಬ್ಬರ ನಡುವೆ ಯಾರ ಮಧ್ಯಸ್ಥಿಕೆಯೂ ಬೇಡ” ಖಡಕ್ ಆಗಿಯೇ ತಿಳಿಸಿದ್ದಾರೆ.
ಈ ಮೂಲಕ ಮಹದೇವಪ್ಪ ಅವರು ಸಂಧಾನದ ಚೆಂಡನ್ನು ಕ್ಷಣಾರ್ಧದಲ್ಲಿ ಸಿದ್ದರಾಮಯ್ಯ ಅವರ ಅಂಗಳಕ್ಕೇ ಎಸೆದರು. ಇದಕ್ಕೆ ಯತೀಂದ್ರ ಅವರು “ಸರಿ ಅಂಕಲ್” ಎಂದಷ್ಟೇ ಹೇಳಿ ಸುಮ್ಮನಾದರು ಎಂಬ ವಿಚಾರ ಮೂಲಗಳಿಂದ ತಿಳಿದು ಬಂದಿದೆ.
ಪ್ರತ್ಯೇಕ ಶಕ್ತಿ ಪ್ರದರ್ಶನ
ಸಂವಿಧಾನ ದಿನಾಚರಣೆಯ ನೆಪದ ಸಿದ್ದರಾಮಯ್ಯ ಮತ್ತು ಮಹದೇವಪ್ಪ ನಡುವಿನ ಆಂತರಿಕ ಕದನ ಈಗ ಬೀದಿಗೆ ಬಂದಿದೆ. ನವೆಂಬರ್ 26ರಂದು ಮೈಸೂರಿನಲ್ಲಿ ಇಬ್ಬರೂ ನಾಯಕರು ಪ್ರತ್ಯೇಕವಾಗಿ ಶಕ್ತಿ ಪ್ರದರ್ಶನಕ್ಕೆ ಸಜ್ಜಾಗಿದ್ದಾರೆ.
ಒಂದೇ ದಿನ, ಮೈಸೂರಿನ ಬೇರೆ ಬೇರೆ ಸ್ಥಳಗಳಲ್ಲಿ ಎರಡು ಪ್ರತ್ಯೇಕ ಸಂವಿಧಾನ ದಿನಾಚರಣೆ ಕಾರ್ಯಕ್ರಮಗಳು ಆಯೋಜನೆಗೊಂಡಿವೆ. ಒಂದು ಕಾರ್ಯಕ್ರಮಕ್ಕೆ ಸಿದ್ದರಾಮಯ್ಯ ನೇತೃತ್ವ ವಹಿಸುತ್ತಿದ್ದರೆ, ಮತ್ತೊಂದಕ್ಕೆ ಮಹದೇವಪ್ಪ ಮುಂದಾಳತ್ವ ವಹಿಸಿದ್ದಾರೆ. ಒಂದೇ ಪಕ್ಷದ ಇಬ್ಬರು ಹಿರಿಯ ನಾಯಕರ ಈ ಪ್ರತ್ಯೇಕ ಕಾರ್ಯಕ್ರಮ ಕಾಂಗ್ರೆಸ್ ನಾಯಕರಿಗೆ ತೀವ್ರ ಮುಜುಗರ ತಂದಿಟ್ಟಿದೆ.
ನೀವೊಂದು ಕಡೆ, ನಾವೊಂದು ಕಡೆ ಪ್ರತ್ಯೇಕವಾಗಿ ಕಾರ್ಯಕ್ರಮ ಮಾಡುವುದು ಬೇಡ. ಪಕ್ಷದ ದೃಷ್ಟಿಯಿಂದ ಹಾಗೂ ನಿಮ್ಮ ಮತ್ತು ಅಪ್ಪನ ಸ್ನೇಹದ ಹಿತದೃಷ್ಟಿಯಿಂದ ಇದು ಅಪಾಯಕಾರಿ. ದಯವಿಟ್ಟು ಪ್ರತ್ಯೇಕ ಕಾರ್ಯಕ್ರಮ ಮಾಡುವ ನಿರ್ಧಾರವನ್ನು ಹಿಂಪಡೆಯಿರಿ, ಎಲ್ಲರೂ ಒಟ್ಟಾಗಿ ಒಂದೇ ವೇದಿಕೆಯಲ್ಲಿ ಸಂವಿಧಾನ ದಿನ ಆಚರಿಸೋಣ ಎಂದು ಯತೀಂದ್ರ ಮನವಿ ಮಾಡಿದರು.
ನಾನು ಸಂವಿಧಾನ ದಿನಾಚರಣೆ ಹೆಸರಿನಲ್ಲಿ ರಾಜಕಾರಣ ಮಾಡುತ್ತಿಲ್ಲ. ಹತ್ತಾರು ದಲಿತ ಮತ್ತು ಪ್ರಗತಿಪರ ಸಂಘಟನೆಗಳು ಸ್ವಯಂಪ್ರೇರಿತವಾಗಿ ಕಾರ್ಯಕ್ರಮ ಆಯೋಜಿಸಿ ನನ್ನನ್ನು ಕರೆದಿವೆ. ಅವರೇ ಮೊದಲು ದಿನಾಂಕ ಮತ್ತು ಕಾರ್ಯಕ್ರಮ ಘೋಷಣೆ ಮಾಡಿದ್ದರು, ನಾನು ಒಪ್ಪಿಕೊಂಡಿದ್ದೇನೆ. ಈಗ ಸಕಲ ಸಿದ್ಧತೆಗಳೂ ಪೂರ್ಣಗೊಂಡಿವೆ. ಸಿದ್ಧತೆ ಮುಗಿದ ನಂತರ ನೀವು ಬಂದು ಹೀಗೆ ಮಾತನಾಡಿದರೆ ನಾನು ಹಿಂದಕ್ಕೆ ಸರಿಯಲು ಸಾಧ್ಯವಿಲ್ಲ. ಈಗ ನೀವು ಮಾಡುತ್ತೇವೆ ಎಂದರೆ ಅದಕ್ಕೆ ನಾನೇನು ಹೇಳಲಿ, ಎಲ್ಲವೂ ನಿಮ್ಮಿಷ್ಟ ಎಂದು ಸ್ಪಷ್ಟವಾಗಿ ನಿರಾಕರಿಸಿದರು.
