ಚೆನ್ನೈ: ತಮಿಳುನಾಡಿಗೆ ಪ್ರತ್ಯೇಕ ರಾಜ್ಯ ಧ್ವಜ ಪರಿಚಯಿಸಲಾಗುವುದು ಎಂದು ಟಿವಿಕೆ (TVK) ಸಚಿವ ಆಧವ್ ಅರ್ಜುನ (Aadhav Arjuna) ಹೇಳಿರುವ ಮಾತು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಸಚಿವನ ಮಾತಿಗೆ ಬಿಜೆಪಿ ವಿರೋಧ ವ್ಯಕ್ತಪಡಿಸಿದ್ದು, ಪ್ರತ್ಯೇಕ ಧ್ವಜದ ಪ್ರಸ್ತಾಪ ಪ್ರತ್ಯೇಕತಾವಾದಿ ಮನಸ್ಥಿತಿಗೆ ಪ್ರೋತ್ಸಾಹ ನೀಡಬಹುದು ಎಂದು ಟೀಕಿಸಿದೆ.
ಹಲವು ರಾಜ್ಯಗಳು ತಮ್ಮದೇ ಆದ ಧ್ವಜಗಳನ್ನು ಹೊಂದಿವೆ. ಆದರೆ, ತಮಿಳುನಾಡಿಗೆ ಪ್ರತ್ಯೇಕ ಧ್ವಜವಿಲ್ಲ. ಹೀಗಾಗಿ ರಾಜ್ಯಕ್ಕೆ ಪ್ರತ್ಯೇಕ ಧ್ವಜ ಪರಿಚಯಿಸಲಾಗುವುದು ಎಂದು ಆಧವ್ ಅರ್ಜುನ ಹೇಳಿದ್ದಾರೆ.
ಬಿಜೆಪಿ ವಿರೋಧ
ಭಾರತೀಯ ಸಂವಿಧಾನದಲ್ಲಿ ರಾಜ್ಯ ಧ್ವಜಕ್ಕೆ ನಿಷೇಧವಿಲ್ಲ ಎಂದು ಹೇಳಲಾಗುತ್ತಿದ್ದರೂ, ಬಿಜೆಪಿ ಈ ಪ್ರಸ್ತಾಪವನ್ನು ಪ್ರಶ್ನಿಸಿದೆ. ಸೋಷಿಯಲ್ ಮೀಡಿಯಾದ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಬಿಜೆಪಿ ನಾಯಕ ವಿನೋಜ್ ಪಿ. ಸೆಲ್ವಂ, ಇಂತಹ ಹೇಳಿಕೆಗಳು ಪ್ರತ್ಯೇಕತಾವಾದಿ ಮನಸ್ಥಿತಿಯನ್ನು ಬೆಳೆಸುವ ಅಪಾಯವಿದೆ ಎಂದು ಟೀಕಿಸಿದ್ದಾರೆ.
ತಮಿಳು ಮತ್ತು ಭಾರತೀಯ ಗುರುತುಗಳನ್ನು ಪರಸ್ಪರ ವಿರುದ್ಧವಾದ ನಿಷ್ಠೆಗಳಂತೆ ನೋಡುವ ಪರಿಸ್ಥಿತಿ ನಿರ್ಮಾಣವಾಗಬಾರದು. ತಮಿಳು ಗುರುತು ಮತ್ತು ಭಾರತೀಯ ಗುರುತು ಎರಡರ ಬಗ್ಗೆಯೂ ಹೆಮ್ಮೆ ಇರಬೇಕು. ಹೀಗಿರುವಾಗ ಅನಗತ್ಯವಾಗಿ ವಿಭಜನೆ ಸೃಷ್ಟಿಸುವುದೇಕೆ ಎಂದು ಪ್ರಶ್ನಿಸಿದ್ದಾರೆ.
ತಮಿಳು ಭಾಷೆ ಮತ್ತು ಸಂಸ್ಕೃತಿಗೆ ಪ್ರತ್ಯೇಕ ಧ್ವಜದ ಅಗತ್ಯವಿಲ್ಲ. ಭಾರತೀಯ ತ್ರಿವರ್ಣ ಧ್ವಜದ ಅಡಿಯಲ್ಲಿ ತಮಿಳು ಗುರುತಿಗೆ ಯಾವುದೇ ಕೊರತೆಯಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಇದನ್ನೂ ಓದಿ: ಉಲ್ಟಾ ಹೊಡೆದ ಐ ವಿಟ್ನೆಸ್ ಪುನೀತ್ಗೆ ಇಂದು ಎಸ್ಪಿಪಿ ಪ್ರಶ್ನೆ – ದರ್ಶನ್ಗೆ ಮತ್ತೆ ಸಂಕಷ್ಟ?
ತಮಿಳು ಭಾಷೆ ಕಡ್ಡಾಯ
ತಮ್ಮ ಭಾಷಣದಲ್ಲಿ ಆಧವ್ ಅರ್ಜುನ ದ್ವಿಭಾಷಾ ನೀತಿಯನ್ನು ಅಗತ್ಯ ಎಂದು ಸಮರ್ಥಿಸಿಕೊಂಡಿದ್ದಾರೆ. ಶಾಲಾ ಹಂತದಿಂದಲೇ ಮಾತೃಭಾಷೆ ತಮಿಳಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ಇಂಗ್ಲಿಷ್ ಕೇವಲ ವ್ಯವಹಾರದ ಭಾಷೆ. ಚೀನಾ, ಜಪಾನ್ ಮತ್ತು ಫ್ರಾನ್ಸ್ನಂತಹ ದೇಶಗಳಲ್ಲಿ ಜನರು ತಮ್ಮದೇ ಭಾಷೆಯಲ್ಲಿ ಮಾತನಾಡುತ್ತಾರೆ. ಅದೇ ರೀತಿ ತಮಿಳು ಕೇವಲ ಆಯ್ಕೆಯ ಭಾಷೆಯಾಗಿರಬಾರದು. ಅದನ್ನು ಕಡ್ಡಾಯಗೊಳಿಸಬೇಕು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿರುವ ವಿನೋಜ್ ಪಿ. ಸೆಲ್ವಂ, ತಮಿಳು ಭಾಷೆಯ ಬಗ್ಗೆ ನಿಜವಾದ ಕಾಳಜಿ ಇದ್ದರೆ ಎಲ್ಲ ಕ್ಷೇತ್ರಗಳಲ್ಲೂ ಸಮಾನವಾಗಿ ಅದನ್ನು ಅನ್ವಯಿಸಬೇಕು ಎಂದು ಹೇಳಿದ್ದಾರೆ.
ದೇವಾಲಯಗಳಲ್ಲಿ ತಮಿಳು ಭಾಷೆಗೆ ಆದ್ಯತೆ ನೀಡುವಂತೆ ಒತ್ತಾಯಿಸುವವರು ಚರ್ಚ್ ಮತ್ತು ಮಸೀದಿಗಳಲ್ಲಿಯೂ ಅದೇ ನೀತಿಯನ್ನು ಅನುಸರಿಸುವಂತೆ ಕೇಳುತ್ತಾರೆಯೇ ಎಂದು ಪ್ರಶ್ನಿಸಿದ್ದಾರೆ. ತಮಿಳು ಮಾಧ್ಯಮದ ವಿದ್ಯಾರ್ಥಿಗಳಿಗಾಗಿ ರೂಪಿಸಿರುವ ಯೋಜನೆಗಳು, ಯುವಕರಿಗೆ ಉದ್ಯೋಗಾವಕಾಶಗಳು, ತಮಿಳು ಸಂಶೋಧನೆ ಹಾಗೂ ಉದ್ಯಮಿಗಳಿಗೆ ನೀಡುವ ಅವಕಾಶಗಳ ಬಗ್ಗೆ ಸ್ಪಷ್ಟ ಗುರಿ ಮತ್ತು ಕಾಲಮಿತಿಯನ್ನು ಸರ್ಕಾರ ಪ್ರಕಟಿಸಬೇಕು ಎಂದು ಆಗ್ರಹಿಸಿದ್ದಾರೆ. ಧ್ವಜ ವಿನ್ಯಾಸ ಮಾಡುವುದು ಸುಲಭ. ಆದರೆ, ರಾಜ್ಯದ ಭವಿಷ್ಯವನ್ನು ರೂಪಿಸಲು ಶ್ರಮ ಅಗತ್ಯ ಎಂದು ಸಚಿವರ ಪ್ರಸ್ತಾಪವನ್ನು ಟೀಕಿಸಿದ್ದಾರೆ.ಇದನ್ನೂ ಓದಿ: ಬಿಗ್ಬಾಸ್ ಮನೆಯಿಂದ ಅಗ್ನಿಪರೀಕ್ಷೆಯ ಕುಮಾರಿ ಔಟ್ – ಕಣ್ಣೀರಿಟ್ಟ ಕಿರಣ್ ಶಾಸ್ತ್ರಿ
