ಹ್ಯಾಮಿಲ್ಟನ್: ನ್ಯೂಜಿಲೆಂಡ್ ವಿರುದ್ಧದ 5ನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲೂ ಯುವ ಆಟಗಾರ ವೈಭವ್ ಸೂರ್ಯವಂಶಿಗೆ (Vaibhav Sooryavanshi) ಭಾರತ ತಂಡದ ಆಡುವ 11ರ ಬಳಗದಲ್ಲಿ ಸ್ಥಾನ ಸಿಕ್ಕಿಲ್ಲ. ಐದು ಪಂದ್ಯಗಳ ಸರಣಿಯಲ್ಲಿ 3-2ರ ಮುನ್ನಡೆ ಸಾಧಿಸಿದ ಭಾರತ, ಸರಣಿ ತನ್ನದಾಗಿಸಿಕೊಂಡ 15 ವರ್ಷದ ಪ್ರತಿಭಾನ್ವಿತ ಆಟಗಾರನಿಗೆ ಮತ್ತೊಂದು ಅವಕಾಶ ನೀಡಿಲ್ಲ. ಈ ಆಯ್ಕೆ ಕ್ರಿಕೆಟ್ ಅಭಿಮಾನಿಗಳಲ್ಲಿ ಚರ್ಚೆಗೆ ಕಾರಣವಾಗಿದೆ.
ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ (Gautam Gambhir) ಕೇವಲ 2 ಪಂದ್ಯಗಳಲ್ಲಿ ಮಾತ್ರ ಆಡಿದ್ದರು. ಸರಣಿಯ ಕೊನೆಯ ಪಂದ್ಯದಲ್ಲಾದರೂ ಅವರಿಗೆ ಅವಕಾಶ ಸಿಗಬಹುದು ಎಂಬ ನಿರೀಕ್ಷೆ ಇತ್ತು. ಆದರೆ, ಭಾರತ ತಂಡ ತನ್ನ ಹಿಂದಿನ ಬ್ಯಾಟಿಂಗ್ ಸಂಯೋಜನೆಯನ್ನೇ ಮುಂದುವರಿಸಲು ನಿರ್ಧರಿಸಿತು. ಅಂತಿಮ ಪಂದ್ಯಕ್ಕೆ ತಂಡದಲ್ಲಿ 2 ಬದಲಾವಣೆ ಮಾಡಲಾಗಿತ್ತಾದ್ರೂ, ಎರಡೂ ಬದಲಾವಣೆಗಳು ಬೌಲಿಂಗ್ ವಿಭಾಗದಲ್ಲೇ ಆಗಿತ್ತು. ಹೀಗಾಗಿ ವೈಭವ್ಗೆ ಕೊನೇ ಪಂದ್ಯದಲ್ಲಿ ಆಡುವ ಅವಕಾಶವೂ ಕೈತಪ್ಪಿತು.
ಈ ಕುರಿತು ಪಂದ್ಯದ ಆರಂಭಕ್ಕೂ ಮುನ್ನ ಮಾತನಾಡಿದ ಟೀಂ ಇಂಡಿಯಾ ಮುಖ್ಯಕೋಚ್ ಗೌತಮ್ ಗಂಭೀರ್, ತಮ್ಮ ಆಯ್ಕೆ ನಿರ್ಧಾರಗಳನ್ನ ಸಮರ್ಥಿಸಿಕೊಂಡಿದ್ದಾರೆ. ಎಲ್ಲರನ್ನೂ ಖುಷಿಪಡಿಸುವುದು ನನ್ನ ಕೆಲಸವಲ್ಲ, ಬದಲಿಗೆ ತಂಡದ ಹಿತದೃಷ್ಟಿಯಿಂದ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ನನ್ನ ಜವಾಬ್ದಾರಿ. ಜನಪ್ರಿಯ ನಿರ್ಧಾರಗಳನ್ನ ತೆಗೆದುಕೊಳ್ಳುವುದಕ್ಕಿಂತ ಸರಿಯಾದ ನಿರ್ಧಾರಗಳನ್ನ ತೆಗೆದುಕೊಳ್ಳುವುದು ನನ್ನ ಕೆಲಸ. ನಾನು ಆ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದೇನೆ ಅಂತಾ ಹೇಳಿದರು.
ಸೋಷಿಯಲ್ ಮೀಡಿಯಾದಲ್ಲಿ ತಂಡದ ಆಯ್ಕೆ ಬಗ್ಗೆ ಎದ್ದಿದ್ದ ಪ್ರಶ್ನೆಗಳಿಗೂ ಉತ್ತರಿಸಿದ ಗಂಭೀರ್, ತಂಡದ ಆದ್ಯತೆಗಳು ಹೊರಗಿನ ಅಭಿಪ್ರಾಯಗಳಿಗಿಂತ ಮುಖ್ಯವಾಗಿರಬೇಕು. ಜನಪ್ರಿಯ ನಿರ್ಧಾರಗಳನ್ನು ತೆಗೆದುಕೊಳ್ಳುವುದು ತುಂಬಾ ಸುಲಭ. ಆದರೆ, ನನ್ನ ಪ್ರಕಾರ ಸರಿಯಾದ ನಿರ್ಧಾರ ತೆಗೆದುಕೊಳ್ಳುವುದು ಮುಖ್ಯ. ಅಲ್ಲದೆ, ಡ್ರೆಸ್ಸಿಂಗ್ ರೂಮ್ನಲ್ಲಿ ಪ್ರತಿಯೊಬ್ಬ ಆಟಗಾರನಿಗೂ ಭದ್ರತೆಯ ಭಾವನೆ ಇರುವಂತೆ ನೋಡಿಕೊಳ್ಳುವುದು ನನ್ನ ಜವಾಬ್ದಾರಿ ಎಂದು ತಿಳಿಸಿದ್ರು.
ಭಾರತ ತಂಡದಲ್ಲಿ ಸಾಕಷ್ಟು ಪ್ರತಿಭಾವಂತ ಆಟಗಾರರಿದ್ದಾರೆ. ದೀರ್ಘಕಾಲದಿಂದ ಉತ್ತಮ ಪ್ರದರ್ಶನ ನೀಡುತ್ತಿರುವ ಆಟಗಾರರಿಗೆ ಹೆಚ್ಚಿನ ಅವಕಾಶ ನೀಡುವುದು ಅಗತ್ಯ. ಈ ಸರಣಿಯಲ್ಲೂ ನಾವು ಇದೇ ರೀತಿಯ ನಿರ್ಧಾರವನ್ನ ಅನುಸರಿಸಿದ್ದೇವೆ ಎಂದು ಗಂಭೀರ್ ಹೇಳಿದ್ರು.


