ಬೆಂಗಳೂರು: ನಾವು ಸ್ವಾತಂತ್ರ್ಯ ದಿನವನ್ನು ಎಷ್ಟು ಅರ್ಥಪೂರ್ಣವಾಗಿ ಗೌರವದಿಂದ ಆಚರಿಸುತ್ತೇವೋ, ಅದೇ ರೀತಿ ಕರ್ನಾಟಕದಲ್ಲಿ ಕನ್ನಡ ರಾಜ್ಯೋತ್ಸವವನ್ನು(Kannada Rajyotsava) ಆಚರಿಸಬೇಕು. ಪ್ರತಿಯೊಬ್ಬ ಶಾಸಕರು, ಸಂಸದರು, ಮಂತ್ರಿಗಳು ಕಟ್ಟುನಿಟ್ಟಾಗಿ ಈ ಕನ್ನಡ ರಾಜ್ಯೋತ್ಸವದಲ್ಲಿ ಭಾಗವಹಿಸಬೇಕಾಗಿತ್ತು. ಆದರೆ, ಅವರು ದೆಹಲಿಯಲ್ಲಿ(Delhi) ಹೋರಾಟಕ್ಕೆ ಹೋಗಿರುವುದು ಸಂವಿಧಾನ ವಿರೋಧಿ ನೀತಿ ಎಂದು ಸಂಸದ ಗೋವಿಂದ ಕಾರಜೋಳ(Govind Karjola) ಅವರು ಖಂಡಿಸಿದ್ದಾರೆ.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸಚಿವರು ಸಾಂವಿಧಾನಿಕ ಸಂಸ್ಥೆಗಳ ಮೇಲೆ ಅಪನಂಬಿಕೆ ಹುಟ್ಟಿಸಲಿಕ್ಕೆ ಹುನ್ನಾರ ಮಾಡಿದ್ದಾರೆ ಎಂದು ಟೀಕಿಸಿದರು.
ಎಲ್ಲಾ ಕನ್ನಡ ತಾಯಿ ಮಕ್ಕಳಿಗೆ 71ನೆಯ ಕನ್ನಡ ರಾಜ್ಯೋತ್ಸವದ ಶುಭಾಶಯ ಕೋರಿದರು. ಕರ್ನಾಟಕದ ಏಕೀಕರಣಕ್ಕಾಗಿ ದುಡಿದಂತಹ ಸಾವಿರ ಸಾವಿರ ಮಹನೀಯರನ್ನು ಈ ಸಂದರ್ಭದಲ್ಲಿ ನೆನೆಸುವಂತೆ ಅವರು ಒತ್ತಾಯಿಸಿದರು.ಕನ್ನಡ ನಾಡು-ನುಡಿಗಾಗಿ ಹೋರಾಟ ಮಾಡಿ ನಮ್ಮನ್ನ ಅಗಲಿರುವ ಎಲ್ಲಾ ಮಹನೀಯರನ್ನೂ ಸ್ಮರಿಸುವುದಾಗಿ ತಿಳಿಸಿದರು.
ವಿಶೇಷವಾಗಿ ಕರ್ನಾಟಕದ ಏಕೀಕರಣಕ್ಕಾಗಿ ಹೋರಾಟ ಮಾಡಿದ ಚಿತ್ರದುರ್ಗ ಜಿಲ್ಲೆಯ ಸಿದ್ದವ್ವನಹಳ್ಳಿಯ ಎಸ್. ನಿಜಲಿಂಗಪ್ಪನವರ ಹೋರಾಟವನ್ನು ನಾವು ಈ ಸಂದರ್ಭದಲ್ಲಿ ಸ್ಮರಿಸಬೇಕು. ಕನ್ನಡ ನಾಡು, ಕನ್ನಡ ಭಾಷೆ, ನೆಲ ಹರಿದು ಹಂಚಿ ಹೋಗಿತ್ತು. ಅದನ್ನು ಒಗ್ಗೂಡಿಸಿದ ಶ್ರೇಯಸ್ಸು, ಕೀರ್ತಿ ಸಿದ್ದವ್ವನಹಳ್ಳಿ ನಿಜಲಿಂಗಪ್ಪನವರಿಗೆ ಸಲ್ಲುತ್ತದೆ ಎಂದು ನುಡಿದರು.
ದಿವಂಗತ ದೇವರಾಜ ಅರಸು ಅವರನ್ನು ನೆನೆಸುತ್ತೇನೆ. ಅರಸು ಅವರು ರಾಜ್ಯದ ಮುಖ್ಯಮಂತ್ರಿಯಾಗಿ ‘ಕರ್ನಾಟಕ ರಾಜ್ಯ’ ಎಂಬ ಹೆಸರು ಇಡುವುದರ ಮೂಲಕ ಕನ್ನಡಿಗರ ಆಶಯವನ್ನು ಈಡೇರಿಸಿದವರು. ಕನ್ನಡ ಭಾಷೆಗೆ ಸಾವಿರ ವರ್ಷದ ಹೋರಾಟಗಳಿದೆ, 3000 ವರ್ಷದ ಇತಿಹಾಸ ಇದೆ. ಈ ನೆಲದಲ್ಲಿ ಕನ್ನಡ ಭಾಷೆ ಮತ್ತು ಹಿಂದೂ ಧರ್ಮ, ಭಾರತ ದೇಶದಲ್ಲಿ ಹಿಂದೂ ಧರ್ಮ, ಕರ್ನಾಟಕದಲ್ಲಿ ಕನ್ನಡ ಯಾವತ್ತೂ ಕೂಡ ನಶಿಸಿ ಹೋಗಲಿಕ್ಕೆ ಸಾಧ್ಯವಿಲ್ಲ ಎಂದು ತಿಳಿಸಿದರು. ಪ್ರತಿಯೊಬ್ಬರೂ ಕನ್ನಡ ಭಾಷೆಯನ್ನು ಕಲಿಯಬೇಕು, ಕನ್ನಡ ಭಾಷೆಯಲ್ಲಿ ವ್ಯವಹರಿಸಬೇಕು ಎಂದು ಮನವಿ ಮಾಡಿದರು.
