ನವದೆಹಲಿ: ಜವಹರಲಾಲ್ ನೆಹರು (Jawaharlal Nehru) ಅವರು ಸರ್ದಾರ್ ವಲ್ಲಭಬಾಯಿ ಪಟೇಲ್ (Sardar Patel) ಅವರ ಮತಗಳನ್ನು ಕದ್ದು ದೇಶದ ಮೊದಲ ಪ್ರಧಾನಿಯಾದರು ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರಾ (BJP MP Sambit Patra) ಗಂಭೀರ ಆರೋಪ ಮಾಡಿದ್ದಾರೆ.
ನವದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಲ್ಲಿಕಾರ್ಜುನ್ ಖರ್ಗೆ (Mallikarjun Kharge) ಮತಗಳ್ಳತನ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ಹೌದು ಮತಗಳ್ಳತನ ನಿಜಕ್ಕೂ ನಡೆದಿದೆ. ಇಂದು ಅಕ್ಟೋಬರ್ 31 ಸರ್ದಾರ್ ಪಟೇಲ್ ಅವರ ಜನ್ಮದಿನ. ಭಾರತದಲ್ಲಿ ಎಂದಾದರೂ ಮತ ಕಳ್ಳತನ ನಡೆದಿದ್ದರೆ, ಅದನ್ನು ಗಾಂಧಿ ಕುಟುಂಬದ ಮೊದಲ ಸದಸ್ಯರಾದ ಪಂಡಿತ್ ಜವಾಹರಲಾಲ್ ನಡೆಸಿದ್ದರು. ಸ್ವತಂತ್ರ ಭಾರತದಲ್ಲಿ ಮೊದಲು ಮತ ಕಳ್ಳತನ ಮಾಡಿದ್ದೇ ಜವಹರಲಾಲ ನೆಹರು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮದ್ವೆಯಾದ ಆರೇ ವರ್ಷಕ್ಕೆ 12 ಮಕ್ಕಳು ಹೇಗೆ ಬಂದ್ರು? – ಮತದಾರರ ಪಟ್ಟಿಯಲ್ಲಿನ ವಿಚಿತ್ರ ದಾಖಲೆ ಮುಂದಿಟ್ಟ ಬಿಜೆಪಿ
ದೇಶದ ಮೊದಲ ಪ್ರಧಾನಿಯನ್ನು ಆಯ್ಕೆ ಮಾಡುವ ಪ್ರಕ್ರಿಯೆಯಲ್ಲಿ ಹಲವಾರು ಹಿರಿಯ ಕಾಂಗ್ರೆಸ್ (Congress) ನಾಯಕರು ಉನ್ನತ ಹುದ್ದೆಗಾಗಿ ಪಟೇಲ್ ಅವರನ್ನು ಬೆಂಬಲಿಸಿದ್ದರು, ಆದರೆ ನೆಹರು ಅಂತಿಮವಾಗಿ ಅವರ ಆಯ್ಕೆಯನ್ನು ಮೀರಿ ಆ ಸ್ಥಾನವನ್ನು ಪಡೆದರು ಎಂದು ಕಿಡಿಕಾರಿದ್ದಾರೆ.
ಸರ್ದಾರ್ ವಲ್ಲಭಭಾಯ್ ಪಟೇಲ್ ಅವರನ್ನು ಪ್ರಧಾನ ಮಂತ್ರಿಯಾಗಿ ಆಯ್ಕೆ ಮಾಡಲು ನಾಯಕರು ಮತ ಚಲಾಯಿಸಿದ್ದರು. ಆ ಮತಗಳನ್ನು ಕದಿಯುವ ಮೂಲಕ ಪಂಡಿತ್ ಜವಾಹರಲಾಲ್ ನೆಹರು ಅವರು ದೇಶದ ಪ್ರಧಾನ ಮಂತ್ರಿಯಾದರು ಎಂದು ಆಕ್ರೋಶ ಹೊರಹಾಕಿದ್ದಾರೆ.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ (Gyanesh Kumar) ವಿರುದ್ಧ ವಿರೋಧ ಪಕ್ಷದ ಪ್ರತಿಭಟನೆ ವಿರೋಧಿಸಿ ಮಾತನಾಡಿದ ಅವರು, ಕಾಂಗ್ರೆಸ್ ನೇತೃತ್ವದ ಈ ಕಸರತ್ತು ಸಂಸತ್ತು ಮತ್ತು ಸಾವಿಧಾನಿಕ ಸಂಸ್ಥೆಗಳ ಘನತೆಯನ್ನು ದುರ್ಬಲಗೊಳಿಸುವ ಪ್ರಯತ್ನವಾಗಿದೆ. ಈ `ಮಾಕ್ ಸಂಸತ್’ ವಾಸ್ತವವಾಗಿ ಸಂಸತ್ತನ್ನೇ ಅಪಹಾಸ್ಯ ಮಾಡುತ್ತಿದೆ ಎಂದಿದ್ದಾರೆ.ಇದನ್ನೂ ಓದಿ: ದೆಹಲಿ ಮಾಲಿನ್ಯ ನಿಯಂತ್ರಣಕ್ಕೆ ಕಠಿಣ ಕ್ರಮ – ಸರ್ಕಾರಿ ಕಚೇರಿಗಳಲ್ಲಿ ಶೇ.50ರಷ್ಟು ಸಿಬ್ಬಂದಿಗೆ ಮಾತ್ರ ಕೆಲಸ
