– 100 ಎಕ್ರೆ ಜಮೀನು ಕೊಟ್ಟಿದ್ದೇವೆ ಅಂತಾ ಡಿಕೆಶಿ ಸಮ್ಮುಖದಲ್ಲೇ ಹೇಳಿದ್ದ ಸಚಿವ ಚೆಲುವರಾಯಸ್ವಾಮಿ
– ಸಚಿವರ ಹೇಳಿಕೆ ಸುಳ್ಳು ಅಂತಾ ಕೇಂದ್ರ ಸಚಿವರ ಕಚೇರಿ ತೀವ್ರ ಅತೃಪ್ತಿ
ಮಂಡ್ಯ: ಕೇಂದ್ರ ಸರ್ಕಾರದ ಬೃಹತ್ ಕೈಗಾರಿಕೆ ಸಚಿವಾಲಯದ ಅಧೀನದ ಆಟೋಮೋಟಿವ್ ರಿಸರ್ಚ್ ಅಸೋಸಿಯೇಷನ್ ಆಫ್ ಇಂಡಿಯಾ (ARAI) ವತಿಯಿಂದ ಮಂಡ್ಯದಲ್ಲಿ ಸ್ಥಾಪಿಸಲು ಪ್ರಸ್ತಾಪಿಸಲಾಗಿರುವ ನಿರ್ಮಾಣ ಮತ್ತು ಮೂಲಸೌಕರ್ಯ ಉಪಕರಣಗಳ ಪರೀಕ್ಷಾ ಕೇಂದ್ರ ಹಾಗೂ ಎಲೆಕ್ಟ್ರಿಕ್ ವಾಹನ ಪರೀಕ್ಷಾ ಕೇಂದ್ರ ಸ್ಥಾಪನೆಗಾಗಿ ಭೂಮಿ ಮಂಜೂರು ಮಾಡಲಾಗಿದೆ ಎಂದು ಸಚಿವ ಎನ್. ಚಲುವರಾಯಸ್ವಾಮಿ ನೀಡಿರುವ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಕಚೇರಿ ಸ್ಪಷ್ಟಪಡಿಸಿದೆ.
ಈ ಕುರಿತು ಕೇಂದ್ರ ಸಚಿವ ಕುಮಾರಸ್ವಾಮಿ ಅವರ ಕಚೇರಿಯಿಂದ ರಾಜ್ಯ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಅಧಿಕೃತ ಪತ್ರ ಬರೆಯಲಾಗಿದ್ದು, ಇ-ಮೇಲ್ ಮೂಲಕ ಕಳುಹಿಸಲಾಗಿದೆ.
ಸಚಿವರ ಹೇಳಿಕೆ ಸುಳ್ಳು
ಮಂಡ್ಯದಲ್ಲಿ ನಡೆದ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನೆ ಮತ್ತು ಉದ್ಘಾಟನಾ ಸಮಾರಂಭ ಹಾಗೂ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚೆಲುವರಾಯಸ್ವಾಮಿ, ARAI ಸಂಸ್ಥೆಗೆ ಈಗಾಗಲೇ 100 ಎಕರೆ ಜಮೀನು ನೀಡಲಾಗಿದೆ ಎಂದು ಮಾಧ್ಯಮಗಳಿಗೆ ಹಾಗೂ ಸಾರ್ವಜನಿಕರಿಗೆ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.
ಯಾವುದೇ ಮಂಜೂರಾತಿ ಇಲ್ಲ
ಕೇಂದ್ರ ಸರ್ಕಾರದ ಸಂಸ್ಥೆಯಾದ ARAI ಗೆ ಇಲ್ಲಿಯವರೆಗೆ ಯಾವುದೇ ಜಮೀನು ಮಂಜೂರು ಮಾಡಿಲ್ಲ ಹಾಗೂ ಈ ಬಗ್ಗೆ ರಾಜ್ಯ ಸರ್ಕಾರದಿಂದಾಗಲಿ, ಜಿಲ್ಲಾಡಳಿತದಿಂದಾಗಲಿ ಅಥವಾ ಸಂಬಂಧಿತ ಸಂಸ್ಥೆಗಾಗಲಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ಕೇಂದ್ರ ಸಚಿವರ ಆಪ್ತ ಕಾರ್ಯದರ್ಶಿ ಕೆ.ಆರ್. ರಘುಕುಮಾರ್ ಪತ್ರದಲ್ಲಿ ತಿಳಿಸಿದ್ದಾರೆ.
ತುರ್ತು ಸ್ಪಷ್ಟನೆಗೆ ಆಗ್ರಹ
ಸಚಿವರು ಸಾರ್ವಜನಿಕ ಸಭೆಯಲ್ಲಿ 100 ಎಕರೆ ಜಮೀನು ಕೊಟ್ಟಿದ್ದೇವೆ ಎಂದು ಹೇಳಿರುವುದರಿಂದ, ಈ ಕೆಳಗಿನ ವಿಚಾರಗಳ ಕುರಿತು ಮಂಡ್ಯ ಜಿಲ್ಲಾಡಳಿತದಿಂದ ಕೂಡಲೇ ಸ್ಪಷ್ಟನೆ ನೀಡುವಂತೆ ಕೋರಲಾಗಿದೆ. ARAI ಸಂಸ್ಥೆಗೆ 100 ಎಕರೆ ಭೂಮಿ ಮಂಜೂರು ಮಾಡಲಾಗಿದ್ದರೆ, ಆ ಮಂಜೂರಾತಿ ಆದೇಶದ ಪತ್ರದ ಪ್ರತಿಯನ್ನು ಒದಗಿಸುವುದು. ಭೂಮಿ ಮಂಜೂರು ಮಾಡಿರುವ ಕುರಿತು ಕೇಂದ್ರ ಸಚಿವರಿಗೆ, ಸಚಿವರ ಕಚೇರಿಗೆ ಹಾಗೂ ಸ್ವತಃ ARAI ಸಂಸ್ಥೆಗೆ ಯಾವುದೇ ಅಧಿಕೃತ ಮಾಹಿತಿ ನೀಡದಿರಲು ಕಾರಣಗಳೇನು ಎಂಬುದನ್ನು ಸ್ಪಷ್ಟಪಡಿಸುವುದು.
ಈ ಬೆಳವಣಿಗೆಯು ಮಂಡ್ಯ ಜಿಲ್ಲೆಯಲ್ಲಿ ಕೈಗಾರಿಕಾ ಭೂಮಿ ಹಂಚಿಕೆ ವಿಚಾರವಾಗಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ನಾಯಕರ ನಡುವೆ ತೀವ್ರ ಮಾತಿನ ಸಮರಕ್ಕೆ ಕಾರಣವಾಗಿದೆ.


