ನವದೆಹಲಿ: ದೇಶದಲ್ಲಿ ನಡೆಯುತ್ತಿರುವ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಲ್ಲಿನ ಹಲವು ವಿಚಿತ್ರ ದಾಖಲೆಗಳು ಪತ್ತೆಯಾಗಿವೆ ಎಂದು ಬಿಜೆಪಿ ಸಂಸದ ಸಂಬಿತ್ ಪಾತ್ರಾ (Sambit Patra)ಪಿಸಿದ್ದಾರೆ.
ದೆಹಲಿಯಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮತಗಳ್ಳತನದ (Vote Chori) ಆರೋಪ ಮಾಡುತ್ತಿರುವ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿ, SIR ಪ್ರಕ್ರಿಯೆಯನ್ನು ಸಮರ್ಥಿಸಿಕೊಂಡರು. ತಂದೆ ಮತ್ತು ಮಗನ ನಡುವಿನ ವಯಸ್ಸಿನ ಅಂತರ ಕೇವಲ 5 ವರ್ಷ ಇರುವುದು, ಮದ್ವೆಯಾದ 6 ವರ್ಷದಲ್ಲಿ ದಂಪತಿಗೆ 12 ಮಕ್ಕಳು ಆಗಿರುವ ದಾಖಲೆಗಳೂ ಪತ್ತೆಯಾಗಿವೆ. ಇಂತಹ ದಾಖಲೆಗಳಿಗೆ ಸ್ಪಷ್ಟನೆ ಕೋರಿ ನೋಟಿಸ್ ನೀಡಿದರೂ ಪ್ರತಿಕ್ರಿಯಿಸುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ತಂದೆ-ಮಗನ ವಯಸ್ಸಿನ ಅಂತರ ಕೇವಲ ಐದೇ ವರ್ಷನಾ?
ಮತದಾರರ ಮ್ಯಾಪಿಂಗ್ ವೇಳೆ ಪತ್ತೆಯಾಗಿರುವ ವಿಚಿತ್ರ ದಾಖಲೆಗಳ ಕುರಿತು ಮಾತನಾಡಿದ ಸಂಬಿತ್ ಪಾತ್ರಾ, ಕೆಲವು ಕುಟುಂಬಗಳ ವಿವರಗಳು ತಾಳೆಯಾಗುತ್ತಿಲ್ಲ. ಒಂದು ಪ್ರಕರಣದಲ್ಲಿ ತಂದೆ ಮತ್ತು ಮಗನ ನಡುವಿನ ವಯಸ್ಸಿನ ಅಂತರ ಕೇವಲ 5 ವರ್ಷ ಇದೆ. ಇನ್ನೊಂದು ಪ್ರಕರಣದಲ್ಲಿ ದಂಪತಿ ಮದ್ವೆಯಾಗಿ ಆರೇ ವರ್ಷಗಳಾಗಿದ್ದರೂ 12 ಮಕ್ಕಳ ಹೆಸರಿದೆ. ಇದೆಲ್ಲ ಹೇಗೆ ಸಾಧ್ಯ? ಸಂಬಂಧಪಟ್ಟ ವ್ಯಕ್ತಿಗಳಿಗೆ ನೋಟಿಸ್ ನೀಡಿ ವಿವರಣೆ ಕೇಳಲಾಗಿದೆ. ಆದ್ರೆ ಅನೇಕರು ನೋಟಿಸ್ಗೆ ಪ್ರತಿಕ್ರಿಯೆ ಕೊಡ್ತಿಲ್ಲ. ಇವರೆಲ್ಲರು ನುಸುಳುಕೋರರು, ನಮ್ಮ ದೇಶದ ಮತದಾರರಾಗಬೇಕೆ? ಅಂತಾ ಪ್ರಶ್ನೆ ಮಾಡಿದ್ದಾರೆ.
ಅಕ್ರಮ ವಲಸಿಗರು ಎಂದು ಶಂಕಿಸಲಾದ ಕೆಲವರು ಪಡಿತರ ಚೀಟಿ, ಆಧಾರ್ ಕಾರ್ಡ್ ಸೇರಿದಂತೆ ವಿವಿಧ ದಾಖಲೆಗಳನ್ನು ಪಡೆದುಕೊಂಡಿದ್ದಾರೆ. ಇದೀಗ SIR ಮ್ಯಾಪಿಂಗ್ ಪ್ರಕ್ರಿಯೆಯಲ್ಲಿ ಇಂತಹ ಅಸಂಗತತೆಗಳು ಬಯಲಾಗುತ್ತಿವೆ ಎಂದು ಬಿಜೆಪಿ ಸಂಸದ ಆರೋಪಿಸಿದ್ದಾರೆ.
SIR ಪ್ರಕ್ರಿಯೆಗೆ ಸಮರ್ಥನೆ
ದೇಶದಲ್ಲಿ ಈವರೆಗೆ 12 ಬಾರಿ SIR ಪ್ರಕ್ರಿಯೆ ನಡೆಸಲಾಗಿದೆ. ಈ ಪೈಕಿ 10 ಬಾರಿ ಕಾಂಗ್ರೆಸ್ ಆಡಳಿತದ ಅವಧಿಯಲ್ಲೇ ನಡೆದಿದೆ. ಆದರೆ ಈಗ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು ಈ ಪ್ರಕ್ರಿಯೆಯನ್ನ ವಿರೋಧಿಸುತ್ತಿರುವುದೇಕೆ? ಎಂದು ಪ್ರಶ್ನಿಸಿದ್ದಾರೆ.
ಇದೇ ವೇಳೆ ಮತದಾರರ ಪಟ್ಟಿ ಪರಿಷ್ಕರಣೆ ವೇಳೆ ಬಳಸುವ ASDD ಬಗ್ಗೆಯೂ ವಿವರಿಸಿದ್ದು, ASDD ಅಂದ್ರೆ ಗೈರುಹಾಜರಿ (Absent), ಸ್ಥಳಾಂತರಗೊಂಡವರು (Shifted), ಮೃತಪಟ್ಟವರು (Death) ಮತ್ತು ನಕಲಿ ಅಥವಾ ದ್ವಿಪ್ರತಿ ನಮೂದುಗಳು (Duplicate) ಎಂದು ತಿಳಿಸಿದ್ದಾರೆ.
ಈ ಪ್ರಕ್ರಿಯೆಯಡಿ ಬೂತ್ ಮಟ್ಟದ ಅಧಿಕಾರಿಗಳು (BLO) ಮತದಾರರ ಮನೆಗಳಿಗೆ ಮೂರು ಬಾರಿ ಭೇಟಿ ನೀಡಿ ಗಣತಿ ನಮೂನೆಗಳನ್ನ ಸಂಗ್ರಹಿಸುತ್ತಾರೆ. ಮೂರೂ ಬಾರಿ ಭೇಟಿ ನೀಡಿದಾಗಲೂ ಮತದಾರರು ಲಭ್ಯವಾಗದಿದ್ದರೆ, ಅವರನ್ನ ಗೈರುಹಾಜರಿ ಎಂದು ಗುರುತಿಸಲಾಗುತ್ತದೆ. ಬಳಿಕ ಅವರ ಹೆಸರನ್ನ ಮತದಾರರ ಪಟ್ಟಿಯಿಂದ ಕೈಬಿಡುವ ಸಾಧ್ಯತೆಯಿದೆ. ಅಂತಹವರು ನಂತರ ಫಾರ್ಮ್ 6 ಸಲ್ಲಿಸುವ ಮೂಲಕ ಮತ್ತೆ ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಹೇಳಿದ್ದಾರೆ.
ಸುಮಾರು 12 ಕೋಟಿ ಜನರು ಶಾಶ್ವತವಾಗಿ ಸ್ಥಳಾಂತರಗೊಂಡಿರುವುದು ಗುರುತಿಸಲಾಗಿದೆ. ಈ ಪೈಕಿ 6 ಕೋಟಿ ಜನರು ಈಗಾಗಲೇ ಮರುನೋಂದಣಿಗೆ ಅರ್ಜಿ ಸಲ್ಲಿಸಿದ್ದಾರೆ. ಉಳಿದ ಆರು ಕೋಟಿ ಜನರಿಗೆ ನೋಟಿಸ್ ಕಳುಹಿಸಲಾಗುತ್ತಿದ್ದು, ಅಗತ್ಯ ಪ್ರಕ್ರಿಯೆ ಪೂರ್ಣಗೊಳಿಸುವ ಮೂಲಕ ಮತ್ತೆ ಮತದಾರರ ಪಟ್ಟಿಗೆ ಸೇರ್ಪಡೆಯಾಗಬಹುದು. ಇನ್ನು ಸುಮಾರು 2.8 ಕೋಟಿ ಮತದಾರರ ಹೆಸರುಗಳನ್ನು ಅವರು ಮೃತಪಟ್ಟಿರುವ ಕಾರಣಕ್ಕೆ ತೆಗೆದುಹಾಕಲಾಗಿದೆ. ಸುಮಾರು ಒಂದು ಕೋಟಿ ನಕಲಿ ಅಥವಾ ದ್ವಿಪ್ರತಿ ಮತದಾರರ ಹೆಸರುಗಳನ್ನು ಕೂಡ ಪಟ್ಟಿಯಿಂದ ಅಳಿಸಲಾಗಿದೆ ಎಂದು ಪಾತ್ರಾ ತಿಳಿಸಿದ್ದಾರೆ.

