ನವದೆಹಲಿ: ಇಲ್ಲಿನ (Delhi) ಮಂಗೋಲ್ಪುರಿಯಲ್ಲಿರುವ ಶೂ ಕಾರ್ಖಾನೆಯೊಂದರಲ್ಲಿ (Shoe Factory) ಸಂಭವಿಸಿದ ಅಗ್ನಿ ಅವಘಡದಿಂದ (Fire Accident) ನಾಲ್ವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಶುಕ್ರವಾರ (ಅ.31) ರಾತ್ರಿ ಮಂಗೋಲ್ಪುರಿ ಕೈಗಾರಿಕಾ ಪ್ರದೇಶದ (Mangolpuri Industrial Area) ಹಂತ-1ರಲ್ಲಿರುವ ಶೂ ತಯಾರಿಕಾ ಕಾರ್ಖಾನೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಕಾರ್ಖಾನೆಯ ಒಳಗೆ ಪ್ರಜ್ಞಾಹೀನರಾಗಿ ಪತ್ತೆಯಾದ ಗಾಯಾಳುಗಳನ್ನು ತಕ್ಷಣವೇ ಮಂಗೋಲ್ಪುರಿಯ ಸಂಜಯ್ ಗಾಂಧಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ವೈದ್ಯರು ನಾಲ್ವರು ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಉಳಿದ ಇಬ್ಬರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಇದನ್ನೂ ಓದಿ: ಪ್ರೀತಿ ನಿರಾಕರಿಸಿದ್ದಕ್ಕೆ ಶಾಲೆಗೆ ನುಗ್ಗಿ ಮರ ಕಡಿಯುವ ಯಂತ್ರದಿಂದ ದಾಳಿ – 10ನೇ ತರಗತಿ ವಿದ್ಯಾರ್ಥಿನಿ ಸಾವು
ರಾತ್ರಿ 9.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದೆ. ಕೂಡಲೇ ಸ್ಥಳಕ್ಕೆ ಧಾವಿಸಿದ ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಕೈಗೊಂಡರು. ಬೆಂಕಿಯನ್ನು ಹತೋಟಿಗೆ ತರಲು ಅಗ್ನಿಶಾಮಕ ಸಿಬ್ಬಂದಿ ಹರಸಾಹಸಪಟ್ಟಿದ್ದಾರೆ.
ಪ್ರಾಥಮಿಕ ಮಾಹಿತಿಯ ಪ್ರಕಾರ, ಬೆಂಕಿ ಕಾಣಿಸಿಕೊಂಡಾಗ ಕಾರ್ಖಾನೆಯ ಒಳಗೆ ಸುಮಾರು 20 ರಿಂದ 25 ಮಂದಿ ಇದ್ದರು. ಇವರಲ್ಲಿ 18 ರಿಂದ 19 ಮಂದಿ ಹೊರಬರುವಲ್ಲಿ ಯಶಸ್ವಿಯಾದರು, ಆದರೆ ಆರು ಮಂದಿ ಕಟ್ಟಡದ ಒಳಗೆ ಸಿಲುಕಿಕೊಂಡರು ಎಂದು ತಿಳಿದುಬಂದಿದೆ.
ಗ್ರೌಂಡ್ ಫ್ಲೋರ್ನಲ್ಲಿ ಹೊತ್ತಿಕೊಂಡ ಬೆಂಕಿ, ಮೂರನೇ ಮಹಡಿಯವರೆಗೂ ವ್ಯಾಪಿಸಿತ್ತು. ಪಾದರಕ್ಷೆ ತಯಾರಿಕೆಯಲ್ಲಿ ಬಳಸಲಾಗುವ ರಾಸಾಯನಿಕಗಳು ಮತ್ತು ಕಚ್ಚಾ ವಸ್ತುಗಳು ಇದ್ದಿದ್ದರಿಂದ ಬೆಂಕಿ ವೇಗವಾಗಿ ಹರಡಿರಬಹುದು ಎಂದು ಶಂಕಿಸಲಾಗಿದೆ. ಇದನ್ನೂ ಓದಿ: ತಲೆಯನ್ನು ಮೇಜಿಗೆ ಬಡಿದು, ಕಲ್ಲು-ಹೂವಿನ ಕುಂಡದಿಂದ ದಾಳಿ; 6 ವರ್ಷದ ಬಾಲಕಿ ಮೇಲೆ 3ನೇ ತರಗತಿ ವಿದ್ಯಾರ್ಥಿ ಭೀಕರ ಹಲ್ಲೆ
