– ಹಿಂದೂ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಕ್ಕೆ ತೀವ್ರ ಆಕ್ಷೇಪ
ಡೆಹ್ರಾಡೂನ್: ಇತ್ತೀಚೆಗೆ ಕೇದಾರನಾಥ ದೇಗುಲಕ್ಕೆ ಬಾಲಿವುಡ್ ನಟಿ ಸಾರಾ ಅಲಿ ಖಾನ್ (Sara Ali Khan) ಭೇಟಿ ನೀಡಿದ್ದರು. ಇದು ಇಸ್ಲಾಂ ಧರ್ಮಗುರುಗಳ ಕೆಂಗಣ್ಣಿಗೆ ಗುರಿಯಾಗಿದೆ.
ಹಿಂದೂ ದೇವಾಲಯಕ್ಕೆ (Hindu Temple) ಭೇಟಿ ನೀಡಿ, ಪ್ರಾರ್ಥನೆ ಸಲ್ಲಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ನಟಿ ಸಾರಾ ವಿರುದ್ಧ ಇಸ್ಲಾಂ ಧರ್ಮಗುರು ಫತ್ವಾ ಹೊರಡಿಸಿದ್ದಾರೆ. ಆಲ್ ಇಂಡಿಯಾ ಮುಸ್ಲಿಂ ಜಮಾತ್ನಿಂದ ನಟಿ ವಿರುದ್ಧ ಫತ್ವಾ (Fatwa) ಹೊರಡಿಸಲಾಗಿದೆ. ಇಸ್ಲಾಂ ಧರ್ಮದ ಶರಿಯಾ ಕಾನೂನುಗಳಿಗೆ ವಿರುದ್ಧವಾಗಿದೆ. ಅಲ್ಲಾಹ್ನಲ್ಲಿ ನಟಿ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ ಧರ್ಮಗುರುಗಳು.
ಅಕ್ಟೋಬರ್ 25ರ ಭಾನುವಾರದಂದು ನಟಿ ಕೇದಾರನಾಥ ದೇವಾಲಯಕ್ಕೆ (Kedarnath Temple) ಭೇಟಿ ನೀಡಿದ್ದರು. ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದಿದ್ದರು. ಬಳಿಕ ಕೈಮುಗಿದು ಭಕ್ತಿ ಭಾವದಿಂದ ಪ್ರಾರ್ಥನೆ ಸಲ್ಲಿಸಿದ್ದರು. ಇದರಿಂದ ಅಸಮಾಧಾನಗೊಂಡಿರುವ ಉತ್ತರ ಪ್ರದೇಶ ಮೂಲದ ಇಸ್ಲಾಮಿಕ್ ಧರ್ಮಗುರು ಮೌಲಾನಾ ಮುಫ್ತಿ ಶಹಾಬುದ್ದೀನ್ ರಜ್ವಿ ಬರೇಲ್ವಿ ಅವರು ನಟಿಯ ವಿರುದ್ಧ ಫತ್ವಾ ಹೊರಡಿಸಿದ್ದಾರೆ.
ಈ ಕುರಿತು ಬಿಡುಗಡೆ ಮಾಡಿದ ವಿಡಿಯೋ ಹೇಳಿಕೆಯಲ್ಲಿ, ಮುಸ್ಲಿಂ ವ್ಯಕ್ತಿಯಾಗಿ ಹಿಂದೂ ಧರ್ಮದ ಪದ್ಧತಿಯಂತೆ ಪೂಜೆ ಸಲ್ಲಿಸುವುದು ಶರಿಯಾ ಪ್ರಕಾರ ಅಪರಾಧ ಮತ್ತು ಹರಾಮ್ (ನಿಷಿದ್ಧ) ಎಂದು ಹೇಳಿದ್ದಾರೆ. ಅಲ್ಲದೆ, ಸಾರಾ ಅವರು ಅಲ್ಲಾಹನ ಬಳಿ ಕ್ಷಮೆ ಕೋರಿ, ಪಶ್ಚಾತ್ತಾಪ ಪಡಬೇಕು. ಇಂತಹ ಕೃತ್ಯಗಳನ್ನು ಅನುಮತಿಸುವುದಿಲ್ಲ ಎಂಬುದನ್ನು ನಾನು ಸ್ಪಷ್ಟಪಡಿಸಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಸಾರಾ ಅವರು ಕೇದಾರನಾಥಕ್ಕೆ ಭೇಟಿ ನೀಡಿದ್ದಕ್ಕಾಗಿ ಧಾರ್ಮಿಕ ಮುಖಂಡರಿಂದ ಟೀಕೆಗೆ ಒಳಗಾಗಿರುವುದು ಇದೇ ಮೊದಲೇನಲ್ಲ. ‘ಫತ್ವಾ’ ಎಂದರೆ ಇಸ್ಲಾಮಿಕ್ ಕಾನೂನಿಗೆ ಸಂಬಂಧಿಸಿದ ಪ್ರಶ್ನೆಯೊಂದರ ಕುರಿತು ಅರ್ಹ ಇಸ್ಲಾಮಿಕ್ ವಿದ್ವಾಂಸರು ನೀಡುವ ಧಾರ್ಮಿಕ ಅಭಿಪ್ರಾಯ ಅಥವಾ ತೀರ್ಪಾಗಿದೆ.
ನಟರಾದ ಅಮೃತಾ ಸಿಂಗ್ ಮತ್ತು ಸೈಫ್ ಅಲಿ ಖಾನ್ ಅವರ ಪುತ್ರಿಯಾಗಿರುವ ಸಾರಾ, ಕಳೆದ 4 ವರ್ಷಗಳಿಂದ ನಿಯಮಿತವಾಗಿ ಕೇದಾರನಾಥಕ್ಕೆ ಭೇಟಿ ನೀಡುತ್ತಿದ್ದಾರೆ. ದಿ. ಸುಶಾಂತ್ ಸಿಂಗ್ ರಜಪೂತ್ ಅವರೊಂದಿಗೆ ಸಾರಾ ನಟಿಸಿದ ಚೊಚ್ಚಲ ಚಿತ್ರ ‘ಕೇದಾರನಾಥ’, 2018ರಲ್ಲಿ ಬಿಡುಗಡೆಯಾಗುವ ಮುನ್ನ ಉತ್ತರಾಖಂಡದಲ್ಲಿ ಬಲಪಂಥೀಯ ಗುಂಪುಗಳ ವಿರೋಧವನ್ನ ಎದುರಿಸಿತ್ತು ಎಂಬುದು ಗಮನಾರ್ಹ.


