ಬೆಂಗಳೂರು: ಮುಸ್ಲಿಂ ಸಮುದಾಯ(Muslim Community) ಮತ್ತು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯಗಳು ಬೇರೆ ಬೇರೆಯಲ್ಲ. ಇಂದಿನ ಬಹುತೇಕ ಮುಸ್ಲಿಮರು ಹಿಂದಿನ ಎಸ್ಸಿ(SC), ಎಸ್ಟಿ(ST) ಸಮುದಾಯದವರು ಎಂದು ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯ ಸಚಿವ ರಿಜ್ವಾನ್ ಅರ್ಷದ್(Rizwan Arshad) ಹೇಳಿದ್ದಾರೆ.
ವಿಧಾನಸೌಧ ಬ್ಯಾಂಕ್ವೆಟ್ ಹಾಲ್ನಲ್ಲಿ ನಡೆದ ವಾಲ್ಮೀಕಿ ಜಯಂತಿ(Valmiki Jayanti) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ದಲಿತ ಮತ್ತು ಮುಸ್ಲಿಂ ಸಮುದಾಯಗಳ ನಡುವಿನ ಸಾಮಾಜಿಕ ಬಾಂಧವ್ಯದ ಕುರಿತು ಮಾತನಾಡುತ್ತಾ ಈ ಅಭಿಪ್ರಾಯ ವ್ಯಕ್ತಪಡಿಸಿದರು.
ದಲಿತ ಕೇರಿಗಳು ಎಲ್ಲೆಲ್ಲಿ ಇರುತ್ತವೆಯೋ, ಮುಸ್ಲಿಮರು ಕೂಡ ಅದೇ ಪರಿಸರದಲ್ಲಿ ವಾಸಿಸುತ್ತಾರೆ. ನಮ್ಮ ಪೂರ್ವಿಕರು ಯಾವ ಕಾರಣಕ್ಕಾಗಿ ಮತಾಂತರಗೊಂಡರು ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ ಆಗಿದೆ. ಧರ್ಮ ಬದಲಾವಣೆಯಾದ ಮಾತ್ರಕ್ಕೆ ಮೈಯಲ್ಲಿ ಹರಿಯುವ ರಕ್ತ ಬದಲಾಗುವುದಿಲ್ಲ. ಹೀಗಾಗಿ ನಾವೆಲ್ಲರೂ ಒಂದೇ ಸಮುದಾಯದವರು, ನಮ್ಮ ನಡುವೆ ಯಾವುದೇ ಭೇದಭಾವವಿಲ್ಲ. ಒಂದು ರೀತಿಯಲ್ಲಿ ಹೇಳಬೇಕೆಂದರೆ ಮುಸ್ಲಿಮರೆಲ್ಲರೂ ಮಾಜಿ ದಲಿತರು ಎಂದು ಪ್ರತಿಪಾದಿಸಿದರು.
ದಲಿತರು ಮತ್ತು ಹಿಂದುಳಿದ ವರ್ಗಗಳು ಎದುರಿಸುತ್ತಿರುವ ಕಷ್ಟ-ಕಾರ್ಪಣ್ಯಗಳನ್ನೇ ಮುಸ್ಲಿಂ ಸಮುದಾಯವೂ ಎದುರಿಸುತ್ತಿದೆ ಎಂದ ಅವರು, ನೀವು ಯಾವ ಸಮಸ್ಯೆಗಳನ್ನು ಎದುರಿಸುತ್ತಿದ್ದೀರೋ, ನಾವೂ ಅದೇ ರೀತಿಯ ಸಾಮಾಜಿಕ, ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದೇವೆ. ಆದ್ದರಿಂದ ದಲಿತ ಸಮುದಾಯದ ಪೂಜ್ಯ ಸ್ವಾಮೀಜಿಗಳು ಮುಸ್ಲಿಮರ ಪರವಾಗಿಯೂ ನಿಲ್ಲಬೇಕು, ನಮ್ಮ ಕಷ್ಟಗಳಿಗೂ ಧ್ವನಿಯಾಗಬೇಕು ಎಂದು ವೇದಿಕೆಯಲ್ಲಿ ಕೋರಿದರು.
