ವಿಶಾಖಪಟ್ಟಣ: ಬಂಗಾಳಕೊಲ್ಲಿಯಲ್ಲಿ ಸೃಷ್ಟಿಯಾಗಿರುವ ಅರ್ನಬ್ (Arnab) ಚಂಡಮಾರುತವು ಮತ್ತಷ್ಟು ಪ್ರಬಲಗೊಳ್ಳುತ್ತಿದ್ದು, ಅಕ್ಟೋಬರ್ 26ರ ಮಧ್ಯರಾತ್ರಿಯ ವೇಳೆಗೆ ತೀವ್ರ ಚಂಡಮಾರುತವಾಗಿ (Severe Cyclonic Storm) ಹಾಗೂ ಅಕ್ಟೋಬರ್ 27ರ ವೇಳೆಗೆ ಅತ್ಯಂತ ತೀವ್ರ ಚಂಡಮಾರುತವಾಗಿ (Very Severe Cyclonic Storm) ಬದಲಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.
ಈ ಚಂಡಮಾರುತವು ಅಕ್ಟೋಬರ್ 28ರ ಮುಂಜಾನೆ ವೇಳೆಗೆ ಆಂಧ್ರಪ್ರದೇಶದ ಬಾಪಟ್ಲಾ ಮತ್ತು ವಿಶಾಖಪಟ್ಟಣ ನಡುವೆ, ಯಾನಾಂ ಕರಾವಳಿಗೆ ಸಮೀಪದಲ್ಲಿ ಗಂಟೆಗೆ 115 ರಿಂದ 125 ಕಿ.ಮೀ ಹಾಗೂ ಗರಿಷ್ಠ 140 ಕಿ.ಮೀ ವೇಗದ ಬಿರುಗಾಳಿಯೊಂದಿಗೆ ಕರಾವಳಿ ತೀರವನ್ನು ದಾಟುವ (Landfall) ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಆಂಧ್ರಪ್ರದೇಶ ಹಾಗೂ ದಕ್ಷಿಣ ಒಡಿಶಾ ಕರಾವಳಿ ಭಾಗಗಳಿಗೆ ಹವಾಮಾನ ಇಲಾಖೆಯು ರೆಡ್ ಅಲರ್ಟ್ (Red Alert) ಘೋಷಿಸಿದೆ.
ಅಕ್ಟೋಬರ್ 26ರ ಮುಂಜಾನೆ 5:30ರ ಅಧಿಕೃತ ವರದಿಯ ಪ್ರಕಾರ, ಅರ್ನಬ್ ಚಂಡಮಾರುತವು ಪೂರ್ವ-ಮಧ್ಯ ಮತ್ತು ಪಶ್ಚಿಮ-ಮಧ್ಯ ಬಂಗಾಳಕೊಲ್ಲಿಯ ವ್ಯಾಪ್ತಿಯಲ್ಲಿ ಕೇಂದ್ರೀಕೃತವಾಗಿದೆ.
ಇದು ಒಡಿಶಾದ ಗೋಪಾಲ್ಪುರದಿಂದ ಆಗ್ನೇಯಕ್ಕೆ ಸುಮಾರು 610 ಕಿ.ಮೀ, ವಿಶಾಖಪಟ್ಟಣದಿಂದ ಪೂರ್ವ-ಆಗ್ನೇಯಕ್ಕೆ 650 ಕಿ.ಮೀ, ಕಾಕಿನಾಡದಿಂದ 730 ಕಿ.ಮೀ ಮತ್ತು ಬಾಪಟ್ಲಾದಿಂದ ಪೂರ್ವಕ್ಕೆ 910 ಕಿ.ಮೀ ದೂರದಲ್ಲಿದೆ. ಕಳೆದ ಆರು ಗಂಟೆಗಳಲ್ಲಿ ಗಂಟೆಗೆ 15 ಕಿ.ಮೀ ವೇಗದಲ್ಲಿ ಪಶ್ಚಿಮ ದಿಕ್ಕಿಗೆ ಚಲಿಸಿ ಚಂಡಮಾರುತವಾಗಿ ಮಾರ್ಪಟ್ಟಿದ್ದು, ಮುಂದೆ ಪಶ್ಚಿಮ-ವಾಯುವ್ಯ ದಿಕ್ಕಿನಲ್ಲಿ ಸಾಗಿ ಮತ್ತಷ್ಟು ತೀವ್ರಗೊಳ್ಳಲಿದೆ ಎಂದು ಇಲಾಖೆ ತಿಳಿಸಿದೆ.
ಚಂಡಮಾರುತ ತೀರಕ್ಕೆ ಅಪ್ಪಳಿಸುವ ಸಂದರ್ಭದಲ್ಲಿ ಭಾರಿ ಮಳೆ ಮತ್ತು ಪ್ರಚಂಡ ಗಾಳಿ ಬೀಸುವ ಸಾಧ್ಯತೆಯಿರುವುದರಿಂದ ಕರಾವಳಿ ತೀರದಲ್ಲಿ ವ್ಯಾಪಕ ಹಾನಿಯಾಗುವ ಭೀತಿ ಎದುರಾಗಿದೆ. ಕರಾವಳಿ ಪ್ರದೇಶದ ನಿವಾಸಿಗಳು ಹಾಗೂ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಮತ್ತು ಅಧಿಕೃತ ಮುನ್ನೆಚ್ಚರಿಕೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಆಡಳಿತ ವರ್ಗ ಸೂಚಿಸಿದೆ. ಅನಾಹುತಗಳನ್ನು ಎದುರಿಸಲು ಸನ್ನದ್ಧರಾಗಿರುವಂತೆ ಕರಾವಳಿ ಜಿಲ್ಲೆಗಳ ವಿಪತ್ತು ನಿರ್ವಹಣಾ ಪಡೆಗಳಿಗೆ ನಿರ್ದೇಶನ ನೀಡಲಾಗಿದೆ.
