– ಕವರ್ನಲ್ಲಿ, ಟಿಫಿನ್ ಬಾಕ್ಸ್ನಲ್ಲಿ ಶಿಕ್ಷಕರಿಗೆ ಹಣ ಹಂಚಿಕೆ ಆರೋಪ
– BEO ಗಳ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಆರೋಪ
ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಶಿಕ್ಷಕರ ಕ್ಷೇತ್ರದ ಚುನಾವಣೆಯಲ್ಲಿ (Teachers Constituency election) ಕಾಂಗ್ರೆಸ್ ಅಭ್ಯರ್ಥಿ ಪುಟ್ಟಣ್ಣ ಮತದಾರರಿಗೆ ಗಿಫ್ಟ್ ಕೂಪನ್ ಹಂಚಿಕೆ ಮಾಡ್ತಾ ಇದ್ದಾರೆ. ಕೂಡಲೇ ಇದರ ಬಗ್ಗೆ ಕ್ರಮ ಆಗಬೇಕು ಅಂತ ಬಿಜೆಪಿ-ಜೆಡಿಎಸ್ ನಿಯೋಗ (BJP-JDS Delegation) ಮುಖ್ಯ ಚುನಾವಣಾಧಿಕಾರಿಗೆ ದೂರು ನೀಡಿದೆ.
ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ನೇತೃತ್ವದಲ್ಲಿ ದೂರು ನೀಡಲಾಯ್ತು. ದೂರಿನ ಬಳಿಕ ಮಾತನಾಡಿದ ಅವರು, ನಾಳೆ ಶಿಕ್ಷಕರ ಕ್ಷೇತ್ರದ ಚುನಾವಣೆ ನಡೆಯುತ್ತಿದೆ. ನಾವು ದಸರಾ ಸಂಭ್ರಮದಲ್ಲಿ ಇದ್ವಿ. ಕಾಂಗ್ರೆಸ್ ಅಭ್ಯರ್ಥಿಗೆ ಈ ದಸರಾ ಸಂಭ್ರಮ ಪ್ರಾರಂಭ ಆಗಿದೆ. ಈ ಸರ್ಕಾರವೇ ಈ ಚುನಾವಣೆ ನಡೆಸುತ್ತಿದೆ ಎಂದು ಹೇಳಿದರು.
ಪುಟ್ಟಣ್ಣ ದಸರಾ ಶುಭಾಶಯ ಹೆಸರಿನಲ್ಲಿ ಕೂಪನ್ ಕೊಡ್ತಾ ಇದ್ದಾರೆ. ಇದನ್ನ ಸ್ಕ್ಯಾನ್ ಮಾಡಿದ್ರೆ ಲೂಲೂ ಮಾಲ್ ಗೆ ಹೋಗ್ತಿದೆ. ಲೂಲೂ ಮಾಲ್ ಯಾರದ್ದು? ಗಿಫ್ಟ್ ಕಾರ್ಡ್ ಹಂಚುತ್ತಿದ್ದಾರೆ. 17 BEO ಗಳ ಮೂಲಕ ಕಾರ್ಡ್ ಹಂಚಿಕೆ ಮಾಡ್ತಾ ಇದ್ದಾರೆ ಅಂತ ಆರೋಪ ಮಾಡಿದ್ರು. ಕೂಪನ್ ಕಾರ್ಡ್, ಫ್ಲಾಸ್ಕ್, ಹಣ ಹಂಚಿಕೆ ಮಾಡ್ತಾ ಇದ್ದಾರೆ. ಶಿಕ್ಷಕರಿಗೆ ಕವರ್ ನಲ್ಲಿ ಹಾಕಿ ಹಣ ಕೊಡ್ತಾ ಇದ್ದಾರೆ. ಟಿಫಿನ್ ಬಾಕ್ಸ್ ಕೊಡ್ತಾ ಇದ್ದಾರೆ. ಥರ್ಡ್ ರೇಟ್ ರಾಜಕೀಯ ಮಾಡ್ತಾ ಇದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಎಲ್ಲರಿಗೂ ನಮ್ಮ ಸರ್ಕಾರ ಇದೆ ಅಂತ ಭಯ ಬೀಳಿಸ್ತಾ ಇದ್ದಾರೆ. SIR ಬಗ್ಗೆ ವೋಟ್ ಚೋರಿ ಅಂತ ಕಾಂಗ್ರೆಸ್ ಅಂತಾರೆ. ಇದು ವೋಟ್ ಚೋರಿ ಅಲ್ಲವಾ? ಜನರನ್ನು ಪುಸಲಾಯಿಸಿ ಮತ ಹಾಕಿಸಿಕೊಳ್ತಾ ಇದ್ದಾರೆ. ಕಾಂಗ್ರೆಸ್ ಸಂಸ್ಕೃತಿಯೇ ಇದು ಅಂತ ಕಿಡಿಕಾರಿದರು.
BEO ಗಳನ್ನ ನೋಡ್ತಾ ಇದ್ದೇವೆ. ನಿಮ್ಮ ಫೋಟೋ ಸಮೇತ ಬಿಡುಗಡೆ ಮಾಡ್ತೀವಿ. ಕಾಂಗ್ರೆಸ್ ಚುನಾವಣೆಯನ್ನ ಅಧಿಕಾರ ಯಂತ್ರ ದುರುಪಯೋಗ ಮಾಡ್ತಾ ಇದ್ದಾರೆ. ಚುನಾವಣಾ ಆಯೋಗಕ್ಕೆ ದೂರು ನೀಡಿದ್ದೇವೆ. BEOಗಳ ಮೇಲೆ FIR ಆಗಬೇಕು. ಡಿಜಿ-ಐಜಿ, ಕಮೀಷನರ್ FIR ದಾಖಲು ಮಾಡಬೇಕು ಅಂತ ಆಗ್ರಹ ಮಾಡಿದ್ರು.

