ನವದೆಹಲಿ: ಬಿನ್ ಲಾಡೆನ್ ಇದ್ದಂತೆಯೇ, ದಾವೂದ್ ಇಬ್ರಾಹಿಂ (Dawood Ibrahim) ಕೂಡ ಪಾಕಿಸ್ತಾನದಲ್ಲಿ ವಾಸಿಸುತ್ತಿದ್ದಾನೆ ಎಂದು ವಿಶ್ವಸಂಸ್ಥೆಯಲ್ಲಿ ಭಾರತ ತಿಳಿಸಿದೆ.
ಭಯೋತ್ಪಾದನೆ ನಿಗ್ರಹ ಮತ್ತು ಮಾನವ ಹಕ್ಕುಗಳ ಕುರಿತಾದ ವಿಶ್ವಸಂಸ್ಥೆಯ ವಿಶೇಷ ವರದಿಗಾರರೊಬ್ಬರ ವರದಿಯಲ್ಲಿನ ಸ್ಪಷ್ಟವಾದ ದೋಷಗಳನ್ನು ಭಾರತವು ಎತ್ತಿ ತೋರಿಸಿದೆ. ಅಲ್ಲದೆ, ವಿಶ್ವಸಂಸ್ಥೆಗೆ ಹಾನಿಯುಂಟುಮಾಡಬಲ್ಲ ಸುಳ್ಳುಗಳನ್ನು ಮಂಡಿಸಿದ್ದಕ್ಕಾಗಿ ಹೊಣೆಗಾರಿಕೆ ಹೊರುವಂತೆ ಆಗ್ರಹಿಸಿದೆ. ಇದನ್ನೂ ಓದಿ: ಮುಕೇಶ್ ಅಂಬಾನಿ, ಅನಂತ್ ಅಂಬಾನಿ ಭೇಟಿಯಾದ ಮಾರ್ಕೊ ರೂಬಿಯೊ
ವಿಶೇಷ ವರದಿಗಾರ ಬೆನ್ ಸಾಲ್ ತಮ್ಮ ಜುಲೈ ವರದಿಯಲ್ಲಿ, ಭಯೋತ್ಪಾದಕ ದಾವೂದ್ ಇಬ್ರಾಹಿಂ ಭಾರತದಲ್ಲಿ ನೆಲೆಸಿದ್ದಾನೆ ಎಂದು ಹೇಳಿದ್ದರು.
ಈ ವ್ಯಕ್ತಿಯು 2003ರಲ್ಲಿ ಭಯೋತ್ಪಾದಕರ ಪಟ್ಟಿಯಲ್ಲಿ ಸೇರ್ಪಡೆಗೊಳ್ಳುವ ಬಹಳ ಹಿಂದೆಯೇ ಭಾರತದಿಂದ ಪಲಾಯನ ಮಾಡಿದ್ದ. ಆತ ಬೇರೊಂದು ದೇಶದಲ್ಲಿದ್ದ ಅವಧಿಯಲ್ಲೇ, ಅಲ್-ಖೈದಾ ಮತ್ತು ಒಸಾಮಾ ಬಿನ್ ಲಾಡೆನ್ನೊಂದಿಗೆ ಸಂಪರ್ಕ ಹೊಂದಿದ್ದಕ್ಕಾಗಿ ಆತನನ್ನು ಈ ಪಟ್ಟಿಗೆ ಸೇರಿಸಲಾಯಿತು ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ಖಾಯಂ ನಿಯೋಗದ ಪ್ರಥಮ ಕಾರ್ಯದರ್ಶಿ ರಘು ಪುರಿ ಸ್ಪಷ್ಟಪಡಿಸಿದ್ದಾರೆ.
ಗಡಿಯಾಚೆಗಿನ ಭಯೋತ್ಪಾದನೆ ಮತ್ತು ನಾಗರಿಕರ ಹತ್ಯೆಯನ್ನು ತನ್ನ ರಾಷ್ಟ್ರೀಯ ನೀತಿಯನ್ನಾಗಿ ಬಳಸಿಕೊಳ್ಳುವ, ವಿಫಲ ರಾಷ್ಟ್ರವಾದ ಪಾಕಿಸ್ತಾನವನ್ನು ಉದ್ದೇಶಿಸಿ ಅವರು ಈ ಮಾತುಗಳನ್ನಾಡಿದ್ದಾರೆ. ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ ಕೇಸ್; ಮತ್ತೆ ಇಬ್ಬರು ಅರೆಸ್ಟ್, ಬಂಧಿತರ ಸಂಖ್ಯೆ 10ಕ್ಕೆ ಏರಿಕೆ
26/11 ಮುಂಬೈ ಭಯೋತ್ಪಾದಕ ದಾಳಿಗಳಲ್ಲಿ ಭಾಗಿಯಾದವರು ಸೇರಿದಂತೆ, ಭಾರತದಲ್ಲಿ ಬೇಕಾಗಿರುವ ಅನೇಕ ಭಯೋತ್ಪಾದಕರು ದಶಕಗಳಿಂದ ಪಾಕಿಸ್ತಾನದಲ್ಲಿ ನೆಲೆಸಿದ್ದಾರೆ. ಪಾಕಿಸ್ತಾನಕ್ಕೆ ನೀಡುವ ಆರ್ಥಿಕ ನೆರವನ್ನು ತಡೆಹಿಡಿಯುವ ವಿಷಯದಲ್ಲಿ ಅಂತರರಾಷ್ಟ್ರೀಯ ಸಮುದಾಯವು ಗಂಭೀರವಾದಾಗ ಮಾತ್ರ, ಪಾಕಿಸ್ತಾನದ ಅಧಿಕಾರಿಗಳು ಇವರ ವಿರುದ್ಧ ಸಾಂಕೇತಿಕ ಕ್ರಮಗಳನ್ನು ಕೈಗೊಂಡಿದ್ದಾರೆ.
