ಮೀರತ್: ಪತಿಯ ಕೊಲೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರುವ ಮುಸ್ಕಾನ್ ರಸ್ತೋಗಿ (Muskan Rastogi)ಅವರ 10 ತಿಂಗಳ ಮಗುವನ್ನು ದತ್ತು ಪಡೆದು, ಆಕೆಯ ಜವಾಬ್ದಾರಿ ವಹಿಸಿಕೊಳ್ಳಲು ಮುಂಬೈ ಮೂಲದ ಸೋಷಿಯಲ್ ಮೀಡಿಯಾದ ಇನ್ಫ್ಲುಯೆನ್ಸರ್ ಒಬ್ಬರು ಮುಂದಾಗಿದ್ದಾರೆ. ಈ ಸಂಬಂಧ ಫೈಜಾನ್ ಅನ್ಸಾರಿ ಅವರು ಮೀರತ್ ಜಿಲ್ಲಾ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ.
ತಾಯಿಯ ಜೈಲುವಾಸದ ನಡುವೆಯೇ ಜನಿಸಿದ ಪುಟ್ಟ ಕಂದಮ್ಮ ರಾಧಾಳನ್ನ ದತ್ತು ಪಡೆದು, ಆಕೆಗೆ ಉತ್ತಮ ವಾತಾವರಣದಲ್ಲಿ ಬೆಳೆಯುವ ಅವಕಾಶ ಕಲ್ಪಿಸುವುದು ತಮ್ಮ ಉದ್ದೇಶ ಎಂದು ಅನ್ಸಾರಿ ತಿಳಿಸಿದ್ದಾರೆ. ಮುಸ್ಕಾನ್ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಅವರಿಗೆ ಮೀರತ್ ನ್ಯಾಯಾಲಯ ಮರಣದಂಡನೆ ವಿಧಿಸಿರುವ ಹಿನ್ನೆಲೆ, ಮಗುವಿನ ಭವಿಷ್ಯ ಹಾಗೂ ಆರೈಕೆಯ ಕುರಿತು ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲೇ ಈ ಬೆಳವಣಿಗೆ ನಡೆದಿದೆ.
ಮುಂಬೈ ಇನ್ಫ್ಲುಯೆನ್ಸರ್ ಹೇಳಿದ್ದೇನು?
ರಾಧಾಳ ದತ್ತು ಸ್ವೀಕಾರಕ್ಕೆ ಮುಂದಾಗಿರುವ ಕುರಿತು ಮಾತನಾಡಿದ ಫೈಜಾನ್ ಅನ್ಸಾರಿ, ಮಗುವಿಗೆ ಸುರಕ್ಷಿತ ಹಾಗೂ ಸ್ಥಿರವಾದ ಬಾಲ್ಯ ಸಿಗಬೇಕು ಎಂಬುದು ತಮ್ಮ ಆಶಯ. ತಾಯಿಯ ಜೈಲುವಾಸದಿಂದ ಮಗುವಿನ ಭವಿಷ್ಯಕ್ಕೆ ತೊಂದರೆಯಾಗಬಾರದು. ಆಕೆಗೆ ಉತ್ತಮ ಜೀವನ ರೂಪಿಸಿಕೊಟ್ಟು, ಜವಾಬ್ದಾರಿಯುತವಾಗಿ ಬೆಳೆಸಲು ಬಯಸಿದ್ದೇನೆ ಎಂದು ತಿಳಿಸಿದ್ದಾರೆ.
ಮುಸ್ಕಾನ್ಗೆ ವಿಧಿಸಿರುವ ಶಿಕ್ಷೆಯಲ್ಲಿ ಹಸ್ತಕ್ಷೇಪ ಮಾಡುವುದು ಅಥವಾ ಕಾನೂನು ಪ್ರಕ್ರಿಯೆಗೆ ಅಡ್ಡಿಪಡಿಸುವುದು ತಮ್ಮ ಉದ್ದೇಶವಲ್ಲ. ಜೊತೆಗೆ ಸೋಷಿಯಲ್ ಮೀಡಿಯಾದಲ್ಲಿ ಪ್ರಚಾರ ಗಿಟ್ಟಿಸಿಕೊಳ್ಳುವುದೂ ನನ್ನ ಉದ್ದೇಶವಲ್ಲ. ಮಗುವಿನ ಭವಿಷ್ಯದ ಬಗ್ಗೆ ಇರುವ ಕಾಳಜಿಯೇ ಇದಕ್ಕೆ ಕಾರಣ. ತಮ್ಮ ಆರ್ಥಿಕ ಸ್ಥಿತಿಗತಿಯ ವಿವರಗಳನ್ನೂ ಅರ್ಜಿಗೆ ಪೂರಕವಾಗಿ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.
10 ತಿಂಗಳ ರಾಧಾಳ ಭವಿಷ್ಯದ ಬಗ್ಗೆ ಚರ್ಚೆ
ಮೀರತ್ನ ‘ಬ್ಲೂ ಡ್ರಮ್’ ಕೊಲೆ ಪ್ರಕರಣದಲ್ಲಿ ಪತಿ ಸೌರಭ್ ರಜಪೂತ್ ಹತ್ಯೆಗೈದ ಆರೋಪದಡಿ ಮುಸ್ಕಾನ್ ರಸ್ತೋಗಿಗೆ ಅಕ್ಟೋಬರ್ 14ರಂದು ಮರಣದಂಡನೆ ವಿಧಿಸಿದೆ. ಇದರ ಬೆನ್ನಲ್ಲೇ 10 ತಿಂಗಳ ಮಗು ರಾಧಾಳ ಭವಿಷ್ಯದ ಕುರಿತು ಚರ್ಚೆ ತೀವ್ರಗೊಂಡಿದೆ.
2025ರ ನವೆಂಬರ್ 24ರಂದು ಮೀರತ್ನ ವೈದ್ಯಕೀಯ ಕಾಲೇಜಿನಲ್ಲಿ ಮುಸ್ಕಾನ್ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳು. ಹೆರಿಗೆ ಬಳಿಕ ಆಕೆಯನ್ನು ತಾಯಿಯೊಂದಿಗೆ ಮತ್ತೆ ಜಿಲ್ಲಾ ಕಾರಾಗೃಹಕ್ಕೆ ಕರೆದೊಯ್ಯಲಾಗಿತ್ತು. ಅಂದಿನಿಂದ ರಾಧಾ ತನ್ನ ತಾಯಿ ಮುಸ್ಕಾನ್ ಜೊತೆಯಲ್ಲೇ ಜೈಲಿನಲ್ಲಿ ವಾಸಿಸುತ್ತಿದ್ದಾಳೆ. ಜೈಲು ನಿಯಮಗಳ ಪ್ರಕಾರ, 6 ವರ್ಷ ವಯಸ್ಸಾಗುವವರೆಗೆ ಮಕ್ಕಳು ಜೈಲಿನಲ್ಲಿ ತಮ್ಮ ಬಂಧಿತ ತಾಯಿಯೊಂದಿಗೆ ಇರಲು ಅವಕಾಶವಿದೆ. ಹೀಗಾಗಿ, ಸದ್ಯಕ್ಕೆ ರಾಧಾಳ ವಾಸದ ವ್ಯವಸ್ಥೆಯಲ್ಲಿ ತಕ್ಷಣದ ಬದಲಾವಣೆ ಆಗುವ ಸಾಧ್ಯತೆ ಇಲ್ಲ ಎಂದು ಜೈಲು ಅಧಿಕಾರಿಗಳು ತಿಳಿಸಿದ್ದಾರೆ.
ವರದಿಗಳ ಪ್ರಕಾರ ಮುಸ್ಕಾನ್ಗೆ ಪಿಹು ಎಂಬ 7 ವರ್ಷದ ಮತ್ತೊಬ್ಬ ಪುತ್ರಿಯೂ ಇದ್ದಾಳೆ. ಪಿಹು ಮುಸ್ಕಾನ್ ಪೋಷಕರೊಂದಿಗೆ ಪ್ರತ್ಯೇಕವಾಗಿ ವಾಸಿಸುತ್ತಿದ್ದಾಳೆ ಎಂದು ತಿಳಿದುಬಂದಿದೆ.


