ಉಡುಪಿ: ನವರಾತ್ರಿ ಸಂಭ್ರಮದ ನಡುವೆಯೇ ವಿಜಯ ದಶಮಿ ಹಾಗೂ ವಿದ್ಯಾರಂಭದ ಸಂಭ್ರಮ. ನಾಡಿನ ಪ್ರಸಿದ್ಧ ಶಕ್ತಿ ಪೀಠಗಳಲ್ಲಿ ಒಂದಾದ ಉಡುಪಿ (Udupi) ಜಿಲ್ಲೆಯ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವಿಜಯದಶಮಿಯಂದು ಅಕ್ಷರಾಭ್ಯಾಸಕ್ಕೆ ವಿಶೇಷ ಮಹತ್ವವಿದೆ.
ದೇವಿಯ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ ಮಾಡಿದರೆ ಮಕ್ಕಳಿಗೆ ಜ್ಞಾನ, ಬುದ್ಧಿಶಕ್ತಿ ಹಾಗೂ ವಿದ್ಯಾಭ್ಯಾಸದಲ್ಲಿ ಉತ್ತಮ ಪ್ರಗತಿ ಲಭಿಸುತ್ತದೆ ಎಂಬ ನಂಬಿಕೆ ಭಕ್ತರದ್ದು. ಹೀಗಾಗಿಯೇ ಕರ್ನಾಟಕ ಮಾತ್ರವಲ್ಲದೆ ನೆರೆಯ ಕೇರಳ ಸೇರಿದಂತೆ ದೇಶದ ವಿವಿಧ ಭಾಗಗಳಿಂದ ಪೋಷಕರು ತಮ್ಮ ಪುಟ್ಟ ಮಕ್ಕಳನ್ನು ಕೊಲ್ಲೂರಿಗೆ ಕರೆತರುತ್ತಾರೆ. ಸಾವಿರಾರು ಭಕ್ತರು ಸಾಕ್ಷಿಯಾಗುವ ಈ ಕ್ಷೇತ್ರದಲ್ಲಿ ದೇವಿಯ ಉತ್ಸವ ಹಾಗೂ ವಿದ್ಯಾರಂಭ ಸಂಭ್ರಮ ಮನೆಮಾಡಿದೆ. ಅಕ್ಷರವೇ ಜ್ಞಾನದ ಮೊದಲ ಮೆಟ್ಟಿಲು. ವಿದ್ಯೆಯೇ ಬದುಕಿನ ಬೆಳಕು. ಇಂತಹ ವಿದ್ಯೆಯ ಆರಂಭಕ್ಕೆ ದೇವಿಯ ಸನ್ನಿಧಿಯೇ ಸಾಕ್ಷಿಯಾದರೆ ಅದಕ್ಕಿಂತ ಪುಣ್ಯದ ಕ್ಷಣ ಮತ್ತೊಂದಿಲ್ಲ ಎಂಬುದು ಭಕ್ತರ ನಂಬಿಕೆ. ನವರಾತ್ರಿ ಉತ್ಸವದ ಅಂಗವಾಗಿ ಕೊಲ್ಲೂರು ಶ್ರೀ ಮೂಕಾಂಬಿಕಾ ದೇವಸ್ಥಾನದಲ್ಲಿ ವಿಶೇಷ ಪೂಜೆಗಳ ಜೊತೆಗೆ ಅಕ್ಷರಾಭ್ಯಾಸಕ್ಕೂ ವಿಶೇಷ ಪ್ರಾಧಾನ್ಯ ನೀಡಲಾಗುತ್ತದೆ. ವಿಜಯದಶಮಿಯ ಶುಭದಿನದಂದು ದೇವಸ್ಥಾನದಲ್ಲಿ ದೇವಿಗೆ ವಿಶೇಷ ಪೂಜೆ ಸಲ್ಲಿಕೆಯಾಗಿ ರಥೋತ್ಸವ ನೆರವೇರಿಸಲಾಯಿತು. ನೂರಾರು ಪುಟ್ಟ ಮಕ್ಕಳು ಅಕ್ಷರ ಲೋಕಕ್ಕೆ ಮೊದಲ ಹೆಜ್ಜೆಯಿಟ್ಟರು. ಮಕ್ಕಳ ಪುಟ್ಟ ಬೆರಳುಗಳು ಅಕ್ಕಿಯ ತಟ್ಟೆಯಲ್ಲಿ ಮೊದಲ ಅಕ್ಷರಗಳನ್ನು ಮೂಡಿಸಿದರೆ, ಪೋಷಕರ ಮುಖದಲ್ಲಿ ಮಕ್ಕಳ ಭವಿಷ್ಯದ ಬಗ್ಗೆ ನೂರಾರು ಕನಸುಗಳು ಅರಳಿದವು. ಇದನ್ನೂ ಓದಿ: ಮನೆಮನೆಗೆ ಬಂದು ಪೂಜೆ ಸ್ವೀಕರಿಸುವ ಶಕ್ತಿ ದೇವತೆಗಳು! – ಮಡಿಕೇರಿಯಲ್ಲಿ ವಿಶಿಷ್ಟ ಸಂಪ್ರದಾಯದ ಹಿಂದಿನ ಕಥೆಯೇನು?
ಕರ್ನಾಟಕದ ಪ್ರಮುಖ ಧಾರ್ಮಿಕ ಕ್ಷೇತ್ರಗಳಲ್ಲಿ ಒಂದಾಗಿರುವ ಕೊಲ್ಲೂರು ಮೂಕಾಂಬಿಕಾ ದೇವಸ್ಥಾನವು ವಿದ್ಯಾರಂಭಕ್ಕೆ ಪ್ರಸಿದ್ಧಿ ಪಡೆದಿದೆ. ವಿಶೇಷವಾಗಿ ಕೇರಳ ರಾಜ್ಯದ ಭಕ್ತರು ಮೂಕಾಂಬಿಕಾ ದೇವಿಯನ್ನು ತಮ್ಮ ಆರಾಧ್ಯ ದೇವತೆಯಾಗಿ ಪೂಜಿಸುತ್ತಾರೆ. ಹೀಗಾಗಿ, ವಿಜಯದಶಮಿಯಂದು ಕೇರಳ ಸೇರಿದಂತೆ ವಿವಿಧ ಪ್ರದೇಶಗಳಿಂದ ಸಾವಿರಾರು ಭಕ್ತರು ಮಕ್ಕಳೊಂದಿಗೆ ಕ್ಷೇತ್ರಕ್ಕೆ ಆಗಮಿಸುತ್ತಾರೆ. ಮುಂಜಾನೆಯಿಂದಲೇ ಆರಂಭವಾಗುವ ಅಕ್ಷರಾಭ್ಯಾಸ ಮಧ್ಯಾಹ್ನದವರೆಗೂ ನಡೆಯುತ್ತದೆ. ಸಂಪ್ರದಾಯದಂತೆ ಮಕ್ಕಳಿಗೆ ಸ್ನಾನ ಮಾಡಿಸಿ, ಹೊಸ ಬಟ್ಟೆ ತೊಡಿಸಿ ದೇವಿಯ ದರ್ಶನ ಮಾಡಿಸಲಾಗುತ್ತದೆ. ಬಳಿಕ ಅರ್ಚಕರ ಮಾರ್ಗದರ್ಶನದಲ್ಲಿ ಮಗುವಿನ ನಾಲಿಗೆಯ ಮೇಲೆ ‘ಓಂ ಹರಿ ಶ್ರೀ ಗಣಪತಯೇ ನಮಃ’ ಎಂದು ಬರೆಯುವ ಮೂಲಕ ವಿದ್ಯಾದೀಕ್ಷೆ ನೀಡಲಾಗುತ್ತದೆ. ನಂತರ ಅಕ್ಕಿ ಅಥವಾ ಮರಳಿನ ಹಾಸಿಗೆಯಲ್ಲಿ ಮಗುವಿನ ಬೆರಳಿನಿಂದ ಮೊದಲ ಅಕ್ಷರಗಳನ್ನು ಬರೆಯಿಸಲಾಗುತ್ತದೆ.
ಇದು ಕೇವಲ ಅಕ್ಷರಾಭ್ಯಾಸವಲ್ಲ, ಮಕ್ಕಳ ಜ್ಞಾನಾರ್ಜನೆಯ ಪಯಣಕ್ಕೆ ದೇವಿಯ ಆಶೀರ್ವಾದ ಪಡೆಯುವ ಪವಿತ್ರ ಆಚರಣೆ. ವಿದ್ಯೆ ಮತ್ತು ಜ್ಞಾನದ ಅಧಿದೇವತೆಯಾದ ಸರಸ್ವತಿ ಸ್ವರೂಪಿಣಿ ಮೂಕಾಂಬಿಕಾ ದೇವಿಯ ಸನ್ನಿಧಿಯಲ್ಲಿ ಅಕ್ಷರಾಭ್ಯಾಸ ಮಾಡಿಸಿದರೆ ಮಕ್ಕಳ ವಿದ್ಯಾಭ್ಯಾಸ ಉತ್ತಮವಾಗಿ ಸಾಗುತ್ತದೆ ಎಂಬ ನಂಬಿಕೆ ಪೋಷಕರಲ್ಲಿದೆ. ಹೀಗಾಗಿ ಸ್ಥಳೀಯರು ಮಾತ್ರವಲ್ಲದೆ ದೂರದ ಊರುಗಳಿಂದಲೂ ಭಕ್ತರು ಆಗಮಿಸಿ ತಮ್ಮ ಮಕ್ಕಳಿಗೆ ವಿದ್ಯಾರಂಭ ಮಾಡಿಸುತ್ತಾರೆ. ದೇವಿಯ ಸನ್ನಿಧಿಯಲ್ಲಿ ಮಕ್ಕಳ ಭವಿಷ್ಯ ಉಜ್ವಲವಾಗಲಿ, ವಿದ್ಯೆ ಮತ್ತು ಬುದ್ಧಿಶಕ್ತಿ ವೃದ್ಧಿಸಲಿ ಎಂದು ಪ್ರಾರ್ಥಿಸುವ ಪೋಷಕರು, ತಮ್ಮ ಮಕ್ಕಳ ಜೀವನದ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗುತ್ತಾರೆ. ಇದನ್ನೂ ಓದಿ: ಶಿವಮೊಗ್ಗ | ಅಂಬಾರಿ ಹೊತ್ತು ದಿಕ್ಕಾಪಾಲಾಗಿ ಓಡಿದ ಆನೆ – ಕಂಗಾಲಾದ ಜನ
ಕೊಲ್ಲೂರು ಮಾತ್ರವಲ್ಲದೆ ಶೃಂಗೇರಿಯ ಶ್ರೀ ಶಾರದಾಂಬೆ ದೇವಸ್ಥಾನವೂ ಅಕ್ಷರಾಭ್ಯಾಸಕ್ಕೆ ಪ್ರಸಿದ್ಧವಾದ ಕ್ಷೇತ್ರವಾಗಿದೆ. ದಕ್ಷಿಣ ಭಾರತದ ವಿವಿಧ ಭಾಗಗಳಿಂದ ಪೋಷಕರು ಮಕ್ಕಳನ್ನು ಈ ಜ್ಞಾನದೇಗುಲಗಳಿಗೆ ಕರೆತರುತ್ತಾರೆ. ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತಿರುವ ಈ ಸಂಪ್ರದಾಯವು ಭಾರತೀಯ ಸಂಸ್ಕೃತಿಯಲ್ಲಿ ವಿದ್ಯೆ ಮತ್ತು ಜ್ಞಾನಕ್ಕೆ ನೀಡಿರುವ ಮಹತ್ವವನ್ನು ಸಾರುತ್ತದೆ.
