ಶಿವಮೊಗ್ಗ: ನಗರದಲ್ಲಿ ದಸರಾ (Shivamogga Dasara) ಜಂಬೂಸವಾರಿ (Jamboo Savari) ವೇಳೆ 450 ಕೆಜಿ ಬೆಳ್ಳಿ ಅಂಬಾರಿಯನ್ನು ಹೊತ್ತಿದ್ದ ಆನೆ (Elephant) ದಿಕ್ಕಾಪಾಲಾಗಿ ಓಡಿದೆ. ಇದರಿಂದ ಕಂಗಾಲಾದ ಜನ ಸ್ಥಳದಿಂದ ದಿಕ್ಕಾಪಾಲಾಗಿ ಓಡಿದ್ದಾರೆ.
ನಗರದ ಶಿವಪ್ಪನಾಯಕ ಅರಮನೆಯಿಂದ ಜಂಬೂ ಸವಾರಿ ಆರಂಭವಾಗಿತ್ತು. ಸ್ವಲ್ಪ ದೂರ ಹೋಗುತ್ತಿದ್ದಂತೆ ಕೋಟೆ ರಸ್ತೆ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಸೋಮಣ್ಣ ಆನೆ ಅಡ್ಡಾದಿಡ್ಡಿಯಾಗಿ ಓಡಿದೆ. ಆನೆಯ ಆರ್ಭಟಕ್ಕೆ ಕಾರುಗಳು ಜಖಂ ಆಗಿವೆ. ಅಂಬಾರಿ ಜಾರಿ ಬಿದ್ದ ಕಾರಣ ಅಂಬಾರಿಗೂ ಸಣ್ಣ ಪ್ರಮಾಣದ ಹಾನಿಯಾಗಿದೆ.
ಆನೆಯನ್ನು ನಿಯಂತ್ರಿಸಲು ಅರಣ್ಯ ಇಲಾಖೆ ಸಿಬ್ಬಂದಿ ಅದಕ್ಕೆ ಚುಚ್ಚುಮದ್ದು ನೀಡಿದ್ದು, ಆನೆ ನಿಯಂತ್ರಣಕ್ಕೆ ಬಂದಿದೆ. ಮುಂಜಾಗ್ರತಾ ಕ್ರಮವಾಗಿ ಕಬ್ಬಿಣದ ಸರಪಳಿಯಿಂದ ಆನೆಯನ್ನು ಮಾವುತ- ಕಾವಾಡಿಗರು ಕಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಘಟನೆ ಬಳಿಕ ಜಂಬೂ ಸವಾರಿಯನ್ನು ಸ್ಥಗಿತಗೊಳಿಸಲಾಗಿದೆ.
ಕೊನೆಯ ಕ್ಷಣದಲ್ಲಿ ಅಂಬಾರಿ ಹೋರುವ ಆನೆ ಬದಲಿಸಿದ್ದ ಅಧಿಕಾರಿಗಳು
ಶಿವಮೊಗ್ಗ ದಸರಾದ ಅಂಬಾರಿ ಹೊರಲು ಸಾಗರ್ ಆನೆಗೆ ತರಬೇತಿ ನೀಡಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸಾಗರ್ ಆನೆಗೆ ಕಾಲು ನೋವಿನ ಕಾರಣದಿಂದ ಸೋಮಣ್ಣ ಆನೆಗೆ ಮೊದಲ ಬಾರಿಗೆ ಅಂಬಾರಿ ಹೊರಿಸಲು ನಿರ್ಧರಿಸಲಾಗಿತ್ತು. ಇದರಿಂದ ಆನೆಗೆ ತಾಲೀಮು ಸರಿಯಾಗದ ಕಾರಣ ಈ ಅವಘಡ ನಡೆದಿದೆ ಎನ್ನಲಾಗಿದೆ.
