ಮುಂಬೈ: ಕುಖ್ಯಾತ ಲಾರೆನ್ಸ್ ಬಿಷ್ಣೋಯ್(Lawrence Bishnoi) ಗ್ಯಾಂಗ್, ಇದೀಗ ಖ್ಯಾತ ಆ್ಯಕ್ಷನ್ ನಟ ಟೈಗರ್ ಶ್ರಾಫ್(Tiger Shroff) ಅವರ ಮೇಲೆ ಗುಂಡಿನ ದಾಳಿ ನಡೆಸುವ ಮೂಲಕ ಬಾಲಿವುಡ್ನಲ್ಲಿ(Bollywood) ತೀವ್ರ ಆತಂಕ ಸೃಷ್ಟಿಸಿದೆ.ಅದೃಷ್ಟವಶಾತ್ ನಟ ಪ್ರಾಣಾಪಾಯದಿಂದ ಪಾರಾಗಿದ್ದು, ದಾಳಿಯ ಸಂಪೂರ್ಣ ಹೊಣೆಯನ್ನು ಬಿಷ್ಣೋಯ್ ಗ್ಯಾಂಗ್ನ ವಿದೇಶಿ ಆಪರೇಟರ್ ಅನಿಲ್ ಪಂಡಿತ್(Anil Pandit) ಹೊತ್ತುಕೊಂಡಿದ್ದಾನೆ.
ಭಾನುವಾರ ಸಂಜೆ ಮುಂಬೈನ ಜುಹು ಪ್ರದೇಶದಲ್ಲಿರುವ ಫುಟ್ಬಾಲ್ ಮೈದಾನದಲ್ಲಿ ಅಭ್ಯಾಸ ಮುಗಿಸಿ ಟೈಗರ್ ಶ್ರಾಫ್ ತಮ್ಮ ಕಾರಿನಲ್ಲಿ ನಿರ್ಗಮಿಸುತ್ತಿದ್ದರು. ಈ ವೇಳೆ ಬೈಕ್ನಲ್ಲಿ ಬೆನ್ನಟ್ಟಿ ಬಂದ ಮೂವರು ಮುಸುಕುಧಾರಿ ದುಷ್ಕರ್ಮಿಗಳು ಅವರ ಕಾರಿನ ಮೇಲೆ ಕನಿಷ್ಠ ಐದು ಸುತ್ತು ಮನಬಂದಂತೆ ಗುಂಡು ಹಾರಿಸಿದ್ದಾರೆ.
ಗುಂಡಿನ ದಾಳಿಯಿಂದ ನಟ ಟೈಗರ್ ಶ್ರಾಫ್ ಯಾವುದೇ ಗಾಯಗಳಿಲ್ಲದೆ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ. ಕಾರಿನ ಚಾಲಕ ಹಾಗೂ ಸ್ಥಳದಲ್ಲಿದ್ದ ಆಟೋ ರಿಕ್ಷಾ ಚಾಲಕರೊಬ್ಬರಿಗೆ ಗುಂಡೇಟು ತಗುಲಿದ್ದು, ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ನ ಸದಸ್ಯರೆಂದು ಹೇಳಿಕೊಂಡಿರುವ ಅನಿಲ್ ಪಂಡಿತ್ ಮತ್ತು ಹರ್ಮನ್ ಸಂಧು ಸಾಮಾಜಿಕ ಜಾಲತಾಣಗಳಲ್ಲಿ ಆಡಿಯೊ ಹಾಗೂ ಪೋಸ್ಟ್ ಹಂಚಿಕೊಳ್ಳುವ ಮೂಲಕ ದಾಳಿಯ ಹೊಣೆ ಹೊತ್ತುಕೊಂಡಿದ್ದಾರೆ. ಇದನ್ನೂ ಓದಿ: ಟೈಗರ್ ಶ್ರಾಫ್ ಕಾರಿನ ಮೇಲೆ ಗುಂಡಿನ ದಾಳಿ: ಹೊಣೆ ಹೊತ್ತ ಬಿಷ್ಣೋಯ್ ಗ್ಯಾಂಗ್, ಓರ್ವ ವಶಕ್ಕೆ
ಮುಂಬೈ ಚಿತ್ರರಂಗದಲ್ಲಿ ಯಾರೆಲ್ಲಾ ಬಿಷ್ಣೋಯ್ ಗ್ಯಾಂಗ್ನ ಮಾತು ಕೇಳದೆ ಸಲ್ಮಾನ್ ಖಾನ್ ಜೊತೆ ಕೈಜೋಡಿಸುತ್ತಾರೋ, ಅವರೆಲ್ಲರೂ ಮುಂದಿನ ದಿನಗಳಲ್ಲಿ ನಮ್ಮ ಗುರಿಯಾಗಲಿದ್ದಾರೆ” ಎಂದು ಆಡಿಯೊ ಸಂದೇಶದಲ್ಲಿ ನೇರ ಬೆದರಿಕೆ ಹಾಕಲಾಗಿದೆ.
ಯಾರು ಈ ಅನಿಲ್ ಪಂಡಿತ್?
ಮೂಲತಃ ಹರಿಯಾಣದ ಪಾನಿಪತ್ ನಿವಾಸಿಯಾಗಿರುವ ಅನಿಲ್ ಪಂಡಿತ್, ಭಾರತದಿಂದ ದುಬೈಗೆ ಪರಾರಿಯಾಗಿ, ಅಲ್ಲಿಂದ ಅಮೆರಿಕಕ್ಕೆ ತಲುಪಿದ್ದಾನೆ ಎನ್ನಲಾಗಿದೆ.ಪ್ರಸ್ತುತ ಅಮೆರಿಕದಲ್ಲೇ ನೆಲೆಸಿರುವ ಈತ, ಬಿಷ್ಣೋಯ್ ಗ್ಯಾಂಗ್ನ ಅಂತಾರಾಷ್ಟ್ರೀಯ ನೆಟ್ವರ್ಕ್ ಮತ್ತು ಸ್ಥಳೀಯ ಶೂಟರ್ಗಳನ್ನು ನಿಯಂತ್ರಿಸುತ್ತಿದ್ದಾನೆ. ಈ ಹಿಂದೆ ದೆಹಲಿಯಲ್ಲಿ ಪಂಜಾಬಿ ಗಾಯಕ ಗುರು ರಾಂಧವಾ ಅವರ ಬ್ರ್ಯಾಂಡ್ನ ’24HS ಫಿಟ್ನೆಸ್’ ಜಿಮ್ ಎದುರು ನಡೆದಿದ್ದ ಗುಂಡಿನ ದಾಳಿಯ ಹೊಣೆಯನ್ನೂ ಇದೇ ಅನಿಲ್ ಪಂಡಿತ್ ಹೊತ್ತುಕೊಂಡಿದ್ದ.
15 ವಿಶೇಷ ತನಿಖಾ ತಂಡಗಳ ರಚನೆ
ಘಟನೆಯನ್ನು ಮಹಾರಾಷ್ಟ್ರ ಸರ್ಕಾರ ಹಾಗೂ ಮುಂಬೈ ಪೊಲೀಸರು ಅತ್ಯಂತ ಗಂಭೀರವಾಗಿ ಪರಿಗಣಿಸಿದ್ದಾರೆ. ಮುಂಬೈ ಕ್ರೈಂ ಬ್ರಾಂಚ್ ಸೇರಿದಂತೆ ಒಟ್ಟು 15 ತಂಡಗಳನ್ನು ರಚಿಸಲಾಗಿದ್ದು, ಜುಹು ಸುತ್ತಮುತ್ತಲಿನ ನೂರಾರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ದುಷ್ಕರ್ಮಿಗಳು ತಪ್ಪಿಸಿಕೊಂಡ ಮಾರ್ಗಗಳ ಮೇಲೆ ನಾಕಾಬಂದಿ ಹಾಕಿ ಶೋಧ ಕಾರ್ಯ ತೀವ್ರಗೊಳಿಸಲಾಗಿದೆ. ನಟ ಟೈಗರ್ ಶ್ರಾಫ್ ಅವರ ನಿವಾಸಕ್ಕೆ ಭದ್ರತೆಯನ್ನು ಹೆಚ್ಚಿಸಲಾಗಿದೆ.
