– 2 ದಿನಗಳಲ್ಲಿ ಮುಖ್ಯ ಆರೋಪಿ ಬಂಧನ ಆಗದಿದ್ರೆ ಉಗ್ರ ಹೋರಾಟ
ಬೆಂಗಳೂರು: ಸ್ಟಿಂಗ್ ಆಪರೇಷನ್ ರುವಾರಿಯ ಬಂಧನಕ್ಕೆ ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಡೆಡ್ಲೈನ್ ಕೊಟ್ಟಿದ್ದಾರೆ. 2 ದಿನಗಳಲ್ಲಿ ಮುಖ್ಯ ಆರೋಪಿ ಬಂಧನ ಆಗದಿದ್ರೆ, ಉಗ್ರ ಹೋರಾಟ ಮಾಡುವುದಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.
ಹೌದು. ರಾಜ್ಯದಲ್ಲಿ ಸ್ಟಿಂಗ್ ಆಪರೇಷನ್ ಸದ್ದು ಜೋರಾಗಿದೆ. ಸ್ಟಿಂಗ್ ಆಪರೇಷನ್ (Sting Operation) ಕೇಸಲ್ಲಿ ಪೊಲೀಸರು ಜೆಡಿಎಸ್ ಸೋಷಿಯಲ್ ಮೀಡಿಯಾ ಹುಡುಗರ ಬೆನ್ನು ಬಿದ್ದಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ದೂರಿನನ್ವಯ ಜೆಡಿಎಸ್ ಐಟಿ ಸೆಲ್ನ ಶಂಕರ್, ಮೋಹನ್ರನ್ನ ವಶ ವಶಕ್ಕೆ ಪಡೆಯಲಾಗಿದೆ. ಪೊಲೀಸರ ವರ್ತನೆಗೆ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದಾರೆ. ಪೊಲೀಸ್ ಕಮಿಷನರ್ ಕಚೇರಿಗೆ ಭೇಟಿ ನೀಡಿ ದೂರು ಸಲ್ಲಿಕೆ ಮಾಡಿದ್ದಾರೆ.
ಈ ವೇಳೆ ನಮ್ಮ ಕಾರ್ಯಕರ್ತರನ್ನ ಹೇಗೆ ಕರೆದುಕೊಂಡು ಹೋದ್ರಿ ಅಂತಾ ಗರಂ ಆಗಿದ್ದಾರೆ. ಅವರಿಗೆ ನೋಟಿಸ್ ಕೊಟ್ಟಿಲ್ಲ, ಅವರ ಮೊಬೈಲ್ ಸ್ವಿಚ್ ಆಫ್ ಮಾಡಿದ್ದಾರೆ. ಕುಟುಂಬಕ್ಕೂ ಮಾಹಿತಿ ಕೊಡದೇ ಹೇಗೆ ಕರೆದೊಯ್ದರು. ರಾತ್ರಿ 8 ಗಂಟೆವರೆಗೆ ಯಾವುದೋ ಶೆಡ್ನಲ್ಲಿ ಇಟ್ಟಿದ್ದೀರ. ನಿಮ್ಮ ಗೃಹ ಸಚಿವರು ನನ್ನ ಅರೆಸ್ಟ್ ಮಾಡ್ತೀವಿ ಅಂದಿದ್ದಾರೆ. ನಾನೇ ಬಂದಿದ್ದೀನಿ ಅರೆಸ್ಟ್ ಮಾಡಿ ಎಂದು ಸಿಡಿಮಿಡಿಗೊಂಡಿದ್ದಾರೆ. ಇದೆಕ್ಕೆಲ್ಲಾ ಇತಿಶ್ರೀ ಹಾಡಬೇಕು. ಇಲ್ಲವಾದಲ್ಲಿ ನಮಗೂ ಹೋರಾಟ ಮಾಡೋದು ಗೊತ್ತಿದೆ ಅಂತಾ ಹೆಚ್ಡಿಕೆ ಗರಂ ಆಗಿದ್ದಾರೆ.
ಇದಾದ ಕೆಲವೇ ಕ್ಷಣಗಳಲ್ಲಿ ಕಮೀಷನರ್ ಕಚೇರಿಯ ಮೆಟ್ಟಿಲುಗಳ ಮೇಲೆಯೇ ಕುಳಿತು ಧರಣಿ ನಡೆಸಿದ್ದಾರೆ. ಈ ವೇಳೆ ನಗರ ಪೊಲೀಸ್ ಆಯುಕ್ತರು ಸಚಿವರ ಮನವೊಲಿಸಲು ಪ್ರಯತ್ನಿಸಿದ್ದರು. ಹೆಚ್ಡಿಕೆ ನನ್ನನ್ನೇ ತನಿಖೆ ಮಾಡಿ, ಸತ್ಯ ಹೊರಗೆ ಬರಬೇಕು ಎಂದು ಪಟ್ಟು ಹಿಡಿದರು. ಈ ವೇಳೆ ಪೊಲೀಸ್ ಆಯುಕ್ತರು, ಪ್ರಾಮಾಣಿಕವಾಗಿ ತನಿಖೆ ಮಾಡ್ತೀವಿ ಎಂದರು.
ಆಗ ಕುಮಾರಸ್ವಾಮಿ ಅವರು, ನಿಮ್ಮದೇನು ತಪ್ಪಿಲ್ಲ, ನಿಮ್ಮ ವಿರುದ್ಧ ಹೋರಾಟ ಮಾಡ್ತಾ ಇಲ್ಲ. ಪೊಲೀಸ್ ಇಲಾಖೆಯಲ್ಲಿ ಪ್ರಾಮಾಣಿಕರು ಇದ್ದೀರಿ, ತನಿಖೆಗೆ ನಾನು ಸಿದ್ಧ, ಬ್ರೈನ್ ಮ್ಯಾಪಿಂಗ್ ಕೂಡ ಸಿದ್ದ ಇದ್ದೀನಿ. ಅಂತಹ ವ್ಯಕ್ತಿಯನ್ನ ಸುಮ್ಮನೆ ಬಿಟ್ಟರೆ ಹೇಗೆ? ನಿಮ್ಮ ಹೊಂ ಮಿನಿಸ್ಟರ್ಗೆ ಹೇಳಿ ಅವರು ಬಂದು ಏನು ಸಮಜಾಯಿಷಿ ಕೊಡ್ತಾರೆ ನೋಡೋಣ. ವಿರೋಧ ಪಕ್ಷ ಮುಗಿಸಬೇಕು ಅನ್ನೋದೇ ಹುನ್ನಾರ. ಕುಮಾರಸ್ವಾಮಿ ಹೆದರಿಸಿದ್ರೆ ಹೆದ್ರೋದಿಲ್ಲ ಅಂತಾರೆ. ಹೋಂ ಮಿನಿಸ್ಟರ್ ಗೆ ಹೇಳಿ ನಾನು ಎದ್ದೇಳಲ್ಲ. ಅವರೇ ಬರೋದಕ್ಕೆ ಹೇಳಿ ಎಂದು ಪಟ್ಟು ಹಿಡಿದು ಕುಳಿತರು. ಈ ವೇಳೆ ಆಯುಕ್ತರು, ಇಲ್ಲ ನಾವು ಪ್ರಾಮಾಣಿಕ ಕೆಲಸ ಮಾಡ್ತೀವಿ ಅಂತಾ ಭರವಸೆ ನೀಡಿದರು.
ಕೊನೆಗೆ ಪೊಲೀಸ್ ಆಯುಕ್ತರ ಮನವಿಗೆ ಮಣಿದ ಕುಮಾರಸ್ವಾಮಿ ಅವರು, ಮುಖ್ಯ ಆರೋಪಿಯ ಬಂಧನಕ್ಕೆ 2 ದಿನಗಳ ಗಡುವು ನೀಡಿ ಧರಣಿ ಕೈಬಿಟ್ಟರು.

