ಬೆಂಗಳೂರು: ಗೃಹ ಸಚಿವರೇ (Home Minister) ಅಧಿಕಾರ ಇದೆ ಅಂತ ಏನು ಬೇಕಾದ್ರು ಮಾಡಬಹುದಾ? ಗೃಹ ಇಲಾಖೆ ನಿಮ್ಮಪ್ಪನದ್ದಾ? ನನ್ನ ಕಾರ್ಯಕರ್ತರನ್ನ ಅರೆಸ್ಟ್ ಮಾಡ್ತೀರಾ? ನಾನೇ ಈಗ ನಿನ್ನ ಕಚೇರಿಗೆ ಬರ್ತೀನಿ, ತಾಖತ್ತಿದ್ದರೆ ನನ್ನನ್ನ ಅರೆಸ್ಟ್ ಮಾಡಿ ಎಂದು ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ (HD Kumaraswamy) ಸವಾಲ್ ಹಾಕಿದ್ದಾರೆ.
ನಗದರ ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸ್ಟಿಂಗ್ ಆಪರೇಷನ್ (Sting Operation) ಬಗ್ಗೆ ಹಲವು ಮಹತ್ವದ ವಿಚಾರಗಳನ್ನ ಪ್ರಸ್ತಾಪಿಸಿದ್ರು. ಇದೇ ವೇಳೆ ಜೆಡಿಎಸ್ ಸೋಷಿಯಲ್ ಮೀಡಿಯಾ ಘಟಕದವರನ್ನ ಬಂಧಿಸಿದ್ದ ವಿಚಾರಕ್ಕೆ ಸಿಡಿಮಿಡಿಗೊಂಡರು.
ನನ್ನ ಕಾರ್ಯಕರ್ತರನ್ನ ಬಂಧಿಸ್ತೀರಾ? ಯಾವ ಆಧಾರದಲ್ಲಿ 308 ಸೆಕ್ಷನ್ ಹಾಕ್ತಾರೆ? ಜೆಪಿ ನಗರದಲ್ಲಿ 15 ಜನ ಇದ್ದಾರೆ ಬನ್ನಿ ಕರೆದುಕೊಂಡು ಬರ್ತೀನಿ. ನಾನೇ ನಿನ್ನ ಕಚೇರಿಗೆ ಬರ್ತೀನಿ, ಏನ್ ತಿಳಿದುಕೊಂಡಿದ್ದೀರಾ? ನನ್ನ ತಾಳ್ಮೆ ಪರೀಕ್ಷೆ ಮಾಡ್ತೀರಾ? ಎಷ್ಟು ಜನರ ವಿಡಿಯೋ ಮಾಡಿಲ್ಲಾ? ತಾಖತ್ತಿದ್ದರೆ ನನ್ನನ್ನ ಮುಟ್ಟೋಕೆ ಹೇಳಿ? ರಾಜ್ಯದಲ್ಲಿ ಏನಾಗುತ್ತೆ ಅನ್ನೋದು ಗೊತ್ತಾಗುತ್ತೆ ಎಂದು ಪ್ರಿಯಾಂಕ್ ಖರ್ಗೆ ವಿರುದ್ಧ ಏಕವಚನದಲ್ಲೇ ವಾಗ್ದಾಳಿ ನಡೆಸಿದರು.
ಕುಮಾರಸ್ವಾಮಿ ಮೇಲೆ ಅನುಮಾನ ಬಂದರೆ ಅರೆಸ್ಟ್ ಮಾಡಿಸ್ತೀನಿ ಅಂತೀಯಾ? ಬಾ ಅಖಾಡಕ್ಕೆ ನೋಡೋಣ? ಸಿಎಂ ಪಕ್ಕದಲ್ಲಿ ಕೂತಿದ್ದವನ ಮೇಲೆ ಅನುಮಾನ ಬಂದಿಲ್ಲ. ಸಿಎಂ ಒಬ್ಬರನ್ನ ಟ್ರ್ಯಾಪ್ ಮಾಡಿಸಿದ್ದಾರೆ, ಅವರನ್ನ ಬಿಟ್ಟುಬಿಟ್ಟಿದ್ದಾರೆ. ನನ್ನ ಮಗನ ಪೋಸ್ಟರ್ ಅಂಟಿಸಿದಾಗ ಎಲ್ಲಿ ಹೋಗಿದ್ರಿ ಪ್ರಿಯಾಂಕ್ ಖರ್ಗೆ ಅವರೇ? ಹೆದರಿಸಿ ಬೆದರಿಸಿ ಮಾಡ್ತೀನಿ ಅಂದರೆ ನಾನು ರೆಡಿ, ನಿಮ್ಮ ಕಮೀಷನರ್ ಕಚೇರಿಗೆ ಬರ್ತೀನಿ ಅರೆಸ್ಟ್ ಮಾಡಿ ಅಂತ ಮಾಡಲಿ ಎಂದು ಸವಾಲ್ ಎಸೆದರು.
ನಾವೇನು ಎಲೆಕ್ಟ್ರಾನಿಕ್ ಉಪಕರಣಗಳನ್ನ ಜೆಪಿ ನಗರದ ಮನೆಯಲ್ಲಿ ಇಟ್ಟುಕೊಂಡಿದ್ದೀವಾ? ಅಧಿಕಾರ ಕೊಟ್ಟಾಗ ನ್ಯಾಯಯುತವಾಗಿ ನಡೆಸಬೇಕು ಅಲ್ಲವಾ? ಸ್ಟಿಂಗ್ ಮಾಡಿದವನ್ನ ಯಾಕೆ ಅರೆಸ್ಡ್ ಮಾಡಿಲ್ಲ? ಒಬ್ಬ ವ್ಯಕ್ತಿ ಪೊಲೀಸ್ ಅಧಿಕಾರಿಯನ್ನ ಕೊಲೆ ಮಾಡ್ತೀನಿ ಅಂತಾನೆ. ಯಾಕೆ ಅರೆಸ್ಟ್ ಮಾಡಿಲ್ಲ? ನಾನು ಈ ಮಟ್ಟದ ಪದ ಬಳಕೆ ಮಾಡಲಿಲಿಲ್ಲ. ಅವರು ಪದ ಬಳಸಿದ್ದಕ್ಕೆ ಕೋಪ ಬಂದು ಮಾತನಾಡಿದ್ದೇನೆ, ಅದಕ್ಕಾಗಿ ಜನರಲ್ಲಿ ಕ್ಷಮೆ ಕೇಳ್ತೀನಿ ಎಂದು ಹೇಳಿದರು.

