ಹೈದರಾಬಾದ್: ತಿಲಕ್ ವರ್ಮಾ, ನಿತೀಶ್ ಕುಮಾರ್ ರೆಡ್ಡಿ ದಿಟ್ಟ ಹೋರಾಟದ ಹೊರತಾಗಿಯೂ ವೆಸ್ಟ್ ಇಂಡೀಸ್ ವಿರುದ್ಧ ನಡೆದ 4ನೇ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿರೋಚಿತ ಸೋಲು ಕಂಡಿದೆ. ಇತ್ತ ಶಾಯ್ ಹೋಪ್ ಶತಕದ ಬಲ, ಸಂಘಟಿತ ಬೌಲಿಂಗ್ ದಾಳಿ ನೆರವಿನಿಂದ ವಿಂಡೀಸ್ ತಂಡ ಇನ್ನೂ 3 ಎಸೆತಗಳು ಬಾಕಿ ಇರುವಂತೆ 25 ರನ್ಗಳ ಅಮೋಘ ಜಯ ಸಾಧಿಸಿದೆ.
ಈ ಗೆಲುವಿನೊಂದಿಗೆ ವಿಂಡೀಸ್ 5 ಪಂದ್ಯಗಳ ಟಿ20 ಸರಣಿಯಲ್ಲಿ 2-2 ಅಂತರದಲ್ಲಿ ಸಮಬಲ ಸಾಧಿಸಿದೆ. ಸರಣಿಯ ನಿರ್ಣಾಯಕ ಪಂದ್ಯವು ಅ.17 ರಂದು ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿದೆ.

ಟರ್ನಿಂಗ್ ಸಿಕ್ಕಿದ್ದೆಲ್ಲಿ?
ಚೇಸಿಂಗ್ ಆರಂಭಿಸಿದ ಟೀಂ ಇಂಡಿಯಾ ಮೊದಲಿಗೆ ವಿಕೆಟ್ ಕಳೆದುಕೊಂಡರೂ ಉತ್ತಮ ಸ್ಥಿತಿಯಲ್ಲಿ ರನ್ ಕಲೆಹಾಕುತ್ತಿತ್ತು. ಆದ್ರೆ 12ನೇ ಓವರ್ ಪಂದ್ಯದ ದಿಕ್ಕನ್ನೇ ಬದಲಿಸಿತು. ಗುಡಕೇಶ್ ಮೋಟಿ ಬೌಲಿಂಗ್ನ 3ನೇ ಎಸೆತವನ್ನ ಸಿಕ್ಸರ್ ಸಿಡಿಸುವ ಭರದಲ್ಲಿ ಅಭಿಷೇಕ್ ಶರ್ಮಾ ಕ್ಯಾಚ್ ನೀಡಿ ಔಟಾದರು. ಇದರ ಮರು ಎಸೆತದಲ್ಲೇ ನಮನ್ ಧೀರ್ ಸ್ಟಂಪ್ ಔಟ್ಗೆ ತುತ್ತಾರು. ಇದು ರನ್ ವೇಗದ ಜೊತೆಗೆ ಗೆಲುವಿನ ಮೇಲೂ ಪರಿಣಾಮ ಬೀರಿತು.
ಆದಾಗ್ಯೂ 6ನೇ ವಿಕೆಟ್ಗೆ ಜೊತೆಯಾದ ತಿಲಕ್ ವರ್ಮಾ ಹಾಗೂ ನಿತೀಶ್ ಕುಮಾರ್ ರೆಡ್ಡಿ ಜೋಡಿ ಸ್ಫೋಟಕ ಪ್ರದರ್ಶನಕ್ಕೆ ಮುಂದಾಗಿತ್ತು. ಇದರಿಂದ ಟೀಂ ಇಂಡಿಯಾ ಮತ್ತೆ ಗೆಲ್ಲುವ ಕನಸು ಕಂಡಿತ್ತು. ಆದ್ರೆ 17ನೇ ಓವರ್ನ ಕೊನೇ ಎಸೆತದಲ್ಲಿ ಕ್ಯಾಚ್ ನೀಡಿ ಔಟಾದರು. ಇಷ್ಟು ಸಾಲದ್ದಕ್ಕೆ ಕೀಮೋ ಪೌಲ್ 19ನೇ ಓವರ್ನಲ್ಲಿ ಮೂರು ವಿಕೆಟ್ ಪಡೆದು, ನಿರ್ಣಾಯಕ ಸಮಯದಲ್ಲಿ ಟೀಂ ಇಂಡಿಯಾಕ್ಕೆ ಆಘಾತ ನೀಡಿದ್ರು. ಇದರೊಂದಿಗೆ ಟೀಂ ಇಂಡಿಯಾ ಗೆಲುವು ಕೂಡ ಕಸಿಯಿತು.

ಟೀಂ ಇಂಡಿಯಾ ಪರ ಸಂಜು ಸ್ಯಾಮ್ಸನ್ 56 ರನ್, ತಿಲಕ್ 43 ರನ್, ನಿತೀಶ್ 41 ರನ್, ಅಭಿಷೇಕ್ 29 ರನ್ ಗಳಿಸಿದ್ರೆ, ಉಳಿದವರು ಅಲ್ಪಮೊತ್ತಕ್ಕೆ ಔಟಾದರು.
ಇದಕ್ಕೂ ಮುನ್ನ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ 3 ವಿಕೆಟ್ ನಷ್ಟಕ್ಕೆ 247 ರನ್ ಗಳಿಸಿತ್ತು. ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಟೀಂ ಇಂಡಿಯಾ 223 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಶಾಯ್ ಶತಕದ ನೆರವು
ವಿಂಡೀಸ್ ನಾಯಕ ಶಾಯ್ ಹೋಪ್ ಇಂದಿನ ಪಂದ್ಯದಲ್ಲಿ ಅಜೇಯ ಶತಕ ಸಿಡಿಸುವ ಮೂಲಕ ತಂಡ ಬೃಹತ್ ಮೊತ್ತ ಕಲೆಹಾಕಲು ನೆರವಾದರು. ಕೊನೇ 2 ಎಸೆತಗಳು ಬಾಕಿ ಇರುವಾಗ ಹೊಸ ಬ್ಯಾಟ್ ತರಿಸಿಕೊಂಡ ಹೋಪ್, ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿ ಶತಕ ಪೂರೈಸಿದರು. ಇದು ಅವರ ಅಂತಾರಾಷ್ಟ್ರೀಯ ಕ್ರಿಕೆಟ್ನ 29ನೇ ಶತಕವೂ ಆಗಿದೆ. 50 ಎಸೆತ ಎದುರಿಸಿದ ಹೋಪ್ 9 ಸಿಕ್ಸರ್ ಹಾಗೂ 4 ಬೌಂಡರಿಗಳ ನೆರವಿನಿಂದ ಅಜೇಯ 102 ರನ್ ಸಿಡಿಸಿದರು. 204ರ ಸ್ಟ್ರೈಕ್ರೇಟ್ನಲ್ಲಿ ಬ್ಯಾಟ್ ಬೀಸಿದ ಹೋಪ್ ತಂಡದ ಬೃಹತ್ ಮೊತ್ತಕ್ಕೆ ಪ್ರಮುಖ ಕೊಡುಗೆ ನೀಡಿದರು.

