ಬಾಗಲಕೋಟೆ/ಬೆಳಗಾವಿ: ದೆಹಲಿಯಲ್ಲಿ ನಡೆದ ಸಭೆಯಲ್ಲಿ ಕಬ್ಬು ರೈತರ ಪ್ರಮುಖ ಬೇಡಿಕೆಗಳು ಈಡೇರದ ಹಿನ್ನೆಲೆಯಲ್ಲಿ ರಾಜ್ಯದ ಹಲವೆಡೆ ಅನ್ನದಾತರ ಆಕ್ರೋಶ ಭುಗಿಲೆದ್ದಿದೆ. ಬಾಗಲಕೋಟೆಯಲ್ಲಿ(Bagalkote) ರೈತರು ರಾಷ್ಟ್ರೀಯ ಹೆದ್ದಾರಿ ತಡೆದು ರಸ್ತೆಗಿಳಿದಿದ್ದರೆ, ಕಬ್ಬು ಬೆಳೆ ದರ ನಿಗದಿಗೆ ಆಗ್ರಹಿಸಿ ಬೆಳಗಾವಿಯ(Belagavi) ಹಿರೇಬಾಗೇವಾಡಿ ಬಳಿ ಪ್ರತಿಭಟನೆ ನಡೆಸಿದ್ದಾರೆ.
ಕೇಂದ್ರದೊಂದಿಗಿನ ಮಾತುಕತೆ ವಿಫಲವಾದ ಬೆನ್ನಲ್ಲೇ ಬಾಗಲಕೋಟೆ ಜಿಲ್ಲೆಯ ಹುನಗುಂದ ಪಟ್ಟಣದ ಸಮೀಪ ರೈತರು ಬೀದಿಗಿಳಿದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ರಾಯಚೂರು–ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಯನ್ನು(National Highway) ತಡೆದು ಧರಣಿ ನಡೆಸಿದ ಕಾರಣ ಎರಡೂ ಬದಿಗಳಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತು ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತು. ಸ್ಥಳದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ವ್ಯಾಪಕ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.
ಮತ್ತೊಂದೆಡೆ ಕಬ್ಬು ಬೆಳೆಗೆ ಸೂಕ್ತ ದರ ನಿಗದಿ ಮಾಡಬೇಕೆಂದು ಆಗ್ರಹಿಸಿ ರೈತರು ರಾಷ್ಟ್ರೀಯ ಹೆದ್ದಾರಿ ತಡೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಟೋಲ್ ಗೇಟ್ ಬಳಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಇದನ್ನೂ ಓದಿ: ಅಂತರ್ಜಾತಿ ವಿವಾಹಕ್ಕೆ ಪೋಷಕರ ವಿರೋಧ- ಪ್ರಿಯತಮೆಗೆ ಕೈಕೊಟ್ಟು ಪ್ರಿಯಕರ ಎಸ್ಕೇಪ್
ರೈತರ ಬೇಡಿಕೆ ಏನು?
ಪ್ರಸ್ತುತ ಸರ್ಕಾರ ನಿಗದಿಪಡಿಸಿರುವ ಕಬ್ಬಿನ ನ್ಯಾಯಯುತ ಮತ್ತು ಲಾಭದಾಯಕ ಬೆಲೆಗಿಂತ (FRP) ಹೆಚ್ಚಾಗಿ, ಕೃಷಿ ವೆಚ್ಚಗಳು ಹೆಚ್ಚಿರುವುದರಿಂದ ಪ್ರತಿ ಟನ್ ಕಬ್ಬಿಗೆ 5,000 ರೂ. ನಿಂದ 5,500 ರೂ.ವರೆಗೆ ವೈಜ್ಞಾನಿಕ ಬೆಲೆ ನೀಡಬೇಕು ಎಂದು ರೈತರು ಒತ್ತಾಯಿಸುತ್ತಿದ್ದಾರೆ.
ಸಕ್ಕರೆಯ ಕನಿಷ್ಠ ಮಾರಾಟ ಬೆಲೆಯನ್ನು ಹೆಚ್ಚಿಸಬೇಕು ಇದರಿಂದ ಕಾರ್ಖಾನೆಗಳಿಗೆ ಲಾಭವಾಗಿ ರೈತರಿಗೂ ಹೆಚ್ಚಿನ ಬೆಲೆ ಸಿಗುತ್ತದೆ. ಕಬ್ಬಿನಿಂದ ಉತ್ಪಾದನೆಯಾಗುವ ಎಥನಾಲ್‌ನಿಂದ ಬರುವ ಲಾಭದ ಪಾಲನ್ನು ಕಬ್ಬು ಬೆಳೆಗಾರರಿಗೂ ವಿಸ್ತರಿಸಬೇಕು.

