– ಕರ್ನಾಟಕದಲ್ಲೂ ಅಕ್ರಮ ಆಗಿದೆ; ಫಾರಂ-6 ಸಮಸ್ಯೆಯನ್ನ ಬಹಿರಂಗ ಪಡಿಸಿದ್ದೇವೆ: ಚಲುವರಾಯಸ್ವಾಮಿ
– ಕೇಂದ್ರ ಸರ್ಕಾರ, ಚುನಾವಣಾ ಆಯೋಗದ ವಿರುದ್ಧ ʻಕೈʼ ಪಡೆ ಕೆಂಡ
ನವದೆಹಲಿ: ಎಸ್ಐಆರ್ (SIR) ಮಾತ್ರವಲ್ಲ, ಇವಿಎಂ ಕೂಡ ಹ್ಯಾಕ್ ಆಗ್ತಿದೆ ಎಂದು ಮಾಜಿ ಸಚಿವರು ಹಾಗೂ ಕಾಂಗ್ರೆಸ್ನ ದೆಹಲಿ ವಿಶೇಷ ಪ್ರತಿನಿಧಿ ಟಿಬಿ ಜಯಚಂದ್ರ (TB Jayachandra) ಆರೋಪಿಸಿದ್ದಾರೆ.
ಕಾಂಗ್ರೆಸ್(Congress) ನೇತೃತ್ವದಲ್ಲಿ ವಿರೋಧ ಪಕ್ಷಗಳು ಸುಪ್ರೀಂ ಕೋರ್ಟ್ (Supreme Court) ಚಲೋ ಬೃಹತ್ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದೆ. ಧರಣಿ ಆರಂಭವಾಗೋದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಅವರು ಮಾತನಾಡಿದ್ದಾರೆ. ನಾವು ಎಸ್ಐಆರ್ ಪ್ರಕ್ರಿಯೆ ವಿರೋಧಿಸಿ ಪ್ರತಿಭಟಿಸಲು ಬಂದಿದ್ದೇವೆ. ಕೇವಲ ಎಸ್ಐಆರ್ ಮಾತ್ರ ಅಲ್ಲ ಇವಿಎಂ ಕೂಡ ಹ್ಯಾಕ್ ಆಗುತ್ತಿದೆ. ಹ್ಯಾಕರ್ಸ್ ನಾವು ಮಾಡಿಕೊಡ್ತೀವಿ ಅಂತಾ ಪ್ರಚಾರ ಮಾಡುತ್ತಿದ್ದಾರೆ. ಪ್ರಜಾಪ್ರಭುತ್ವ ದಲ್ಲಿ ನಂಬಿಕೆ ಮುಖ್ಯ, ಹಾಕುವ ವೋಟು ಖಾತ್ರಿಯಾಗಬೇಕು ಎಂದು ಹೇಳಿದ್ದಾರೆ.

ಫಾರಂ-6 ಸಮಸ್ಯೆ ಬಹಿರಂಗ ಪಡಿಸಿದ್ದೇವೆ
ಇನ್ನೂ ರಾಜ್ಯ ಸಚಿವ ಚಲುವರಾಯಸ್ವಾಮಿ (Chaluvaraya swamy) ಮಾತನಾಡಿ, ಇಂದಿನ ನಮ್ಮ ಹೋರಾಟ ಇದು ಶಕ್ತಿ ಪ್ರದರ್ಶನ ಅಲ್ಲ. ಸಂವಿಧಾನ ವಿರೋಧಿ ನಡೆಗೆ ನಮ್ಮ ಹೋರಾಟ. ನಮ್ಮ ರಾಜ್ಯದಲ್ಲಿ ಕೂಡ SIR ನಲ್ಲಿ ಅಕ್ರಮ ಆಗಿದೆ. ಫಾರಂ-6 ರಲ್ಲಿ ಯಾವ ಸಮಸ್ಯೆ ಆಗಿದೆ ಅಂತಾ ಈಗಾಗಲೇ ಬಹಿರಂಗ ಪಡಿಸಿದ್ದೇವೆ. ಚುನಾವಣಾ ಆಯೋಗವನ್ನ ಕೇಂದ್ರ ಬಳಸಿಕೊಳ್ತಿದೆ. ಹಾಗಾಗಿ, ನಮ್ಮ ಹಕ್ಕನ್ನ ನಾವು ರಕ್ಷಣೆ ಮಾಡಬೇಕಾಗ್ತಿದೆ ಎಂದು ಕರೆ ನೀಡಿದ್ದಾರೆ.

ಚುನಾವಣಾ ಆಯುಕ್ತರನ್ನ ಕೇಂದ್ರ ಕೈಗೊಂಬೆ ಮಾಡಿಕೊಂಡಿದೆ
ದೆಹಲಿಯಲ್ಲಿ ಸಚಿವ ಶಿವಲಿಂಗೇಗೌಡ ಮಾತನಾಡಿ, ಪ್ರಜಾಪ್ರಭುತ್ವ ಉಳಿಸಬೇಕು ಅಂತಾ ಕಾಂಗ್ರೆಸ್ ಹೋರಾಟಕ್ಕೆ ಕರೆ ಕೊಟ್ಟಿದೆ. ರಾಜ್ಯದಿಂದ ಕಾಂಗ್ರೆಸ್ ಶಾಸಕರು, ಸಚಿವರು, ಪ್ರಮುಖ ನಾಯಕರು ಬಂದಿದ್ದಾರೆ. ಚುನಾವಣಾ ಆಯೋಗ ಬಳಸಿಕೊಂಡು ಪ್ರಜಾಪ್ರಭುತ್ವ ಹಾಳುಗೆಡವಿದೆ ಈ ಕೇಂದ್ರ ಸರ್ಕಾರ, ಚುನಾವಣಾ ಆಯುಕ್ತರನ್ನ ಕೈಗೊಂಬೆಯಾಗಿ ಮಾಡಿಕೊಂಡಿದೆ. ಹಾಗಾಗಿ, ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಡಬೇಕು ಅಂತಾ ಒತ್ತಾಯ ಮಾಡ್ತಿದ್ದೇವೆ. ಇಡೀ ದೇಶಾದ್ಯಂತ ಹೋರಾಟ ನಡೆಯುತ್ತಿದೆ. ಚುನಾವಣಾ ವ್ಯವಸ್ಥೆಯಲ್ಲಿ ಆಗಿರುವ ಲೋಪದೋಷಗಳನ್ನ ಸರಿ ಪಡಿಸಬೇಕು. ಕೇಂದ್ರ ಗೌರವಯುತವಾಗಿ ನಡೆದುಕೊಂಡು ಹೋಗಬೇಕು ಎಂದು ಒತ್ತಾಯಿಸಿದ್ದಾರ.
ಮತದಾನ ಹಕ್ಕು ಕಿತ್ತುಕೊಳ್ಳುವ ಪ್ರಯತ್ನ ನಡೀತಿದೆ
ಇನ್ನೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಮಾತನಾಡಿ, ದೇಶದ್ಯಾಂತ ಬಂದು ಕಾಂಗ್ರೆಸ್ ನಾಯಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ. ಸುಪ್ರೀಂ ಕೋರ್ಟ್ ಗೆ ಶಾಂತಿಯುತ ಮೆರವಣಿಗೆ ನಡೆಸುತ್ತಿದ್ದೇವೆ. ಸಂವಿಧಾನದಲ್ಲಿ ಮತದಾನದ ಹಕ್ಕು ಅಮೂಲ್ಯವಾದದ್ದು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅದೊಂದು ಅಸ್ತ್ರ. ಆದ್ರೆ ಅದನ್ನೇ ಕಿತ್ತುಕೊಳ್ಳುವ ಪ್ರಯತ್ನ ನಡೆಯುತ್ತಿದೆ. ಈ ಹಕ್ಕನ್ನ ಕಿತ್ತುಕೊಂಡು ಪ್ರಜಾಪ್ರಭುತ್ವ ಬುಡಮೇಲು ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.

ಆರ್ಎಸ್ಎಸ್ ಹಿಂಬಾಲಕರನ್ನ ಕಳುಹಿಸಿದ್ರೂ ಹೆದರಲ್ಲ
ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪ್ರತಿಕ್ರಿಯಿಸಿ, ಈ ಹೋರಾಟ ನಿಲ್ಲಲ್ಲ. ಎಸ್ಐಆರ್ ನಿಂದ ಸಾಕಷ್ಟು ಜನರಿಗೆ ತೊಂದರೆಯಾಗಿದೆ. ನಾವು ಶಾಂತಿಯುವ ಪ್ರತಿಭಟನೆ ಮಾಡುತ್ತಿದ್ದೇವೆ. ಅದನ್ನ ಹತ್ತಿಕ್ಕುವ ಪ್ರಯತ್ನ ಮಾಡುತ್ತಿದ್ದಾರೆ. ಹೊಡೆಯುವರಿಗಿಂತ ಹೊಡೆಸಿಕೊಳ್ಳುವವರಿಗೆ ಶಕ್ತಿ ಹೆಚ್ಚು. ರಾಹುಲ್ ಗಾಂಧಿ ಅವರನ್ನು ಪಪ್ಪು ಎಂದು ಹಿಯಾಳಿಸಿದರು. ಏನೇ ಮಾಡಿದರೂ ಜನರ ಪರವಾಗಿ ಧ್ವನಿ ಎತ್ತುತ್ತಿದ್ದಾರೆ. ಜ್ಞಾನೇಶ್ ಕುಮಾರ್ ರಾಜೀನಾಮೆ ಕೊಡುವವರೆಗೂ ಹೋರಾಟ ಮುಂದುವರಿಸುತ್ತೇವೆ. ಅಮಿತ್ ಶಾ, ಆರ್ಎಸ್ಎಸ್ ಹಿಂಬಾಲಕರನ್ನು ಕಳಿಹಿಸಿದರೂ ನಾವು ಪ್ರತಿಭಟನೆಯಿಂದ ಹಿಂದೆ ಸರಿಯಲ್ಲ ಎಂದು ಎಚ್ಚರಿಸಿದ್ದಾರೆ.

