ನವದೆಹಲಿ: ಐತಿಹಾಸಿಕ ಬಾಂಗ್ಲಾ ಸಾಹಿಬ್ ಗುರುದ್ವಾರದ ಆವರಣದಲ್ಲಿ ಪ್ರತಿಭಟನೆ ನಡೆಸಿ ಗದ್ದಲ ಸೃಷ್ಟಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಆಮ್ ಆದ್ಮಿ ಪಕ್ಷದ (AAP) ರಾಷ್ಟ್ರೀಯ ಸಂಚಾಲಕ ಅರವಿಂದ ಕೇಜ್ರಿವಾಲ್(Arvind Kejriwal) ಹಾಗೂ ಪಕ್ಷದ ಇತರ ಪ್ರಮುಖ ನಾಯಕರ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ (FIR) ದಾಖಲಿಸಿದ್ದಾರೆ.
ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿ (DSGMC) ನೀಡಿದ ಅಧಿಕೃತ ದೂರಿನ ಆಧಾರದ ಮೇಲೆ ಪೊಲೀಸರು ಈ ಕ್ರಮ ಕೈಗೊಂಡಿದ್ದಾರೆ.
ಅ. 11 ರಂದು ಡಿಎಸ್‌ಜಿಎಂಸಿ ಪೊಲೀಸರಿಗೆ ಅಧಿಕೃತ ದೂರು ಸಲ್ಲಿಸಿ ಆಪ್ ವಿರುದ್ಧ ಆರೋಪ ಮಾಡಿದ್ದರು. ಅ. 10 ರಂದು ಆಪ್ ಕಾರ್ಯಕರ್ತರು ಮತ್ತು ಬೆಂಬಲಿಗರು ಗುರುದ್ವಾರ ಆವರಣವನ್ನು ಪ್ರವೇಶಿಸಿ ಪ್ರತಿಭಟನೆ ನಡೆಸುವ ಮೂಲಕ ಶಾಂತಿ ಭಂಗ ಉಂಟುಮಾಡಿದ್ದಾರೆ. ಧಾರ್ಮಿಕ ಪಾವಿತ್ರ್ಯತೆ ಹೊಂದಿರುವ ‘ಗುರು ಘರ್’ ಅನ್ನು ರಾಜಕೀಯ ಲಾಭಕ್ಕಾಗಿ ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಸಮಿತಿ ಆಕ್ಷೇಪಿಸಿದೆ.
ಮಾಜಿ ಮುಖ್ಯಮಂತ್ರಿ ಕೇಜ್ರಿವಾಲ್ ಮಾತ್ರವಲ್ಲದೆ ಹಲವು ಆಪ್ ಶಾಸಕರು ಹಾಗೂ ನಾಯಕರು ಸಾಮಾಜಿಕ ಜಾಲತಾಣಗಳಲ್ಲಿ ಘಟನೆಯ ತಿರುಚಿದ ವಿಡಿಯೋಗಳನ್ನು ಹಂಚಿಕೊಂಡು ಗುರುದ್ವಾರ ಸಮಿತಿಯ ಮೇಲೆಯೇ ಗೂಬೆ ಕೂರಿಸುವ ಪ್ರಯತ್ನ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಪ್ರಸ್ತುತ ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದು, ದೂರುದಾರರು ಸಲ್ಲಿಸಿರುವ ಸಿಸಿಟಿವಿ ದೃಶ್ಯಾವಳಿ ಹಾಗೂ ವಿಡಿಯೋ ದಾಖಲೆಗಳನ್ನು ಪರಿಶೀಲಿಸಿ ಘಟನಾವಳಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದ್ದಾರೆ. ಇದನ್ನೂ ಓದಿ: SIR Row | ರಾಹುಲ್ ಗಾಂಧಿ ಭೇಟಿಗೆ ಅನುಮತಿ ನಿರಾಕರಿಸಿದ ಸಿಜೆಐ ಸೂರ್ಯಕಾಂತ್
ಶನಿವಾರ ಏನಾಗಿತ್ತು?
ಜಂತರ್ ಮಂತರ್‌ನಲ್ಲಿ ನಿನ್ನೆ(ಅ.10) ರಂದು ಪ್ರತಿಭಟನೆ ನಡೆಸಲು ಯೋಜಿಸಿದ್ದ ನೂರಾರು ವಿದ್ಯಾರ್ಥಿಗಳು ಮತ್ತು ಕಾರ್ಯಕರ್ತರನ್ನು ದೆಹಲಿ ಪೊಲೀಸರು ತಡೆದು ಬ್ಯಾರಿಕೇಡ್‌ಗಳನ್ನು ಹಾಕಿದ್ದರು. ಪೊಲೀಸರ ಬಂಧನದಿಂದ ತಪ್ಪಿಸಿಕೊಳ್ಳಲು ಹಲವು ಪ್ರತಿಭಟನಾಕಾರರು ಗುರುದ್ವಾರ ಬಂಗ್ಲಾ ಸಾಹಿಬ್‌ನ ಒಳಗೆ ಆಶ್ರಯ ಪಡೆದಿದ್ದರು. ಗುರುದ್ವಾರದ ಗೇಟ್ ಬಳಿ ಮತ್ತು ಆವರಣದ ಸಮೀಪ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಲಾರಂಭಿಸಿದಾಗ, ದೆಹಲಿ ಪೊಲೀಸರು ಸುಮಾರು 50ಕ್ಕೂ ಹೆಚ್ಚು ಜನರನ್ನು ಎಳೆದುಕೊಂಡು ಹೋಗಿ ವಶಕ್ಕೆ ಪಡೆದಿದ್ದರು. ಪ್ರತಿಭಟನಕಾರರಿಗೆ ಗುರುದ್ವಾರದಲ್ಲಿ ಆಶ್ರಯ ನೀಡಿದ್ದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗೆ ಗುರಿಯಾಗಿತ್ತು.

